Advertisement

ರೈಲು ಹಳಿಯ ಮೇಲೆ ಭಾರೀ ದೊಡ್ಡ ಬಂಡೆ: ಸಿಸಿಟಿವಿಯಿಂದ ತಪ್ಪಿದ ದುರಂತ

09:47 AM Jun 18, 2019 | Team Udayavani |

ಮುಂಬಯಿ : ಘಾಟ್‌ ಸೆಕ್ಷನ್‌ ನ ರೈಲು ಮಾರ್ಗದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಿಂದಾಗಿ ರೈಲು ಹಳಿಯ ಮೇಲೆ ಭಾರೀ ದೊಡ್ಡ ಬಂಡೆ ಬಿದ್ದಿರುವುದು ಸಾಕಷ್ಟು ಮೊದಲೇ ಕಂಡು ಬಂದ ಕಾರಣ ಸಂಭವನೀಯ ಭೀಕರ ರೈಲು ಅವಘಡ ತಪ್ಪುವುದು ಸಾಧ್ಯವಾಗಿದೆ.

Advertisement

ಮಳೆಗಾಲದಲ್ಲಿ ಹಳಿಗಳ ಸುರಕ್ಷೆಯನ್ನು ತಿಳಿಯಲು ಮುಂಬಯಿ – ಪುಣೆ ರೈಲು ಮಾರ್ಗದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾದುದು ಈಗ ಭಾರೀ ಪ್ರಯೋಜನಕ್ಕೆ ಬಂತು.

ನಿನ್ನೆ ಗುರುವಾರ ರಾತ್ರಿ 8.15ರ ಸುಮಾರಿಗೆ ಲೋನಾವಾಲಾ ಸಮೀಪದ ರೈಲು ಹಳಿಯಲ್ಲಿ ಭಾರೀ ಬಂಡೆಯೊಂದು ಉರುಳಿ ಬಿದ್ದಿತ್ತು.

ಇದನ್ನು ಸಿಸಿಟಿವಿ ವೀಕ್ಷಕ ಸಿಬಂದಿ ಸಕಾಲದಲ್ಲಿ ಗಮನಿಸಿದ ಕಾರಣ ಮುಂಬಯಿ -ಕೊಲ್ಹಾಪುರ ಸಹ್ಯಾದ್ರಿ ಎಕ್ಸ್‌ಪ್ರೆಸ್‌ ರೈಲನ್ನು ಸುರಕ್ಷಿತವಾಗಿ ನಿಲ್ಲಿಸಲು ಸಾಧ್ಯವಾಯಿತು.

ರೈಲು ಹಳಿಯ ಮೇಲೆ ಬಂಡೆ ಕಲ್ಲು ಬಿದ್ದಿರುವುದು ಸಿಸಿಟಿವಿ ಯಲ್ಲಿ ಪತ್ತೆಯಾದೊಡನೆಯೇ ವೀಕ್ಷಕ ಸಿಬಂದಿ ಅದನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಿದರು. ಆ ಕೂಡಲೇ ಅವರು ಓವರ್‌ಹೆಡ್‌ ಉಪಕರಣದ ವಿದ್ಯುತ್‌ ಪೂರೈಕೆಯನ್ನು ಸ್ಥಗಿತಗೊಳಿಸಿದರು.

Advertisement

ಇದರಿಂದಾಗಿ ಈ ಮಾರ್ಗವಾಗಿ ಬರಲಿದ್ದ ರೈಲುಗಳು ಸಕಾಲದಲ್ಲಿ ನಿಲುಗಡೆಯಾದವು ಎಂದು ಸೆಂಟ್ರಲ್‌ ರೈಲ್ವೆ ಮುಖ್ಯ ವಕ್ತಾರ ಸುನೀಲ್‌ ಉದಾಸಿ ತಿಳಿಸಿದರು.

ರೈಲು ಹಳಿಯ ಮೇಲೆ ಬಿದ್ದಿದ್ದ ಬಂಡೆ 2.3 ಮೀ. ಉದ್ದ ಮತ್ತು 1.6 ಮೀಟರ್‌ ಎತ್ತರ ಹಾಗೂ 2.2 ಮೀಟರ್‌ ಅಗಲದ್ದಾಗಿತ್ತು. ಒಂದೊಮ್ಮೆ ಧಾವಿಸಿ ಬರುವ ರೈಲು ಇದಕ್ಕೆ ಢಿಕ್ಕಿ ಹೊಡೆದಿದ್ದರೆ ಭಾರೀ ದುರಂತ ಸಂಭವಿಸುವುದು ಖಚಿತವಿತ್ತು ಎಂದವರು ಹೇಳಿದರು.

ಬಂಡೆಯನ್ನು ಅತ್ಯಂತ ಕಡಿಮೆ ಸಮಯದಲ್ಲಿ ತೆರವುಗೊಳಿಸಲಾಗಿ ಈ ಮಾರ್ಗದಲ್ಲಿನ ರೈಲುಗಳ ಸಂಚಾರ ಸುಗಮಗೊಂಡಿತು ಎಂದವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next