ನವದೆಹಲಿ: ಕನ್ನಡದ ವಿದ್ವಾಂಸ, ವಿಮರ್ಶಕ ಹಾಗೂ ಭಾಷಾ ವಿಜ್ಞಾನಿ ಪ್ರೊ.ಕೆ.ವಿ.ನಾರಾಯಣ ಅವರು 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮೈಸೂರಿನ ಕೆ.ವಿ.ನಾರಾಯಣ ಅವರ “ನುಡಿಗಳ ಅಳಿವು’ ಎಂಬ ಸಾಹಿತ್ಯ ವಿಮರ್ಶೆ ಕೃತಿಗೆ ಈ ಗೌರವ ಸಂದಿದೆ. ಕಾದಂಬರಿಗಳು, ಸಣ್ಣ ಕಥೆಗಳು, ಕವನ, ಪ್ರಬಂಧ, ನಾಟಕ ಸೇರಿದಂತೆ ವಿವಿಧ ಕ್ಷೇತ್ರಗಳ ಒಟ್ಟು 21 ಭಾಷೆಗಳ ಲೇಖಕರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಒಟ್ಟಾರೆ 8 ಕವನ ಸಂಕಲನಗಳು, 3 ಕಾದಂಬರಿಗಳು, 2 ಸಣ್ಣ ಕಥೆಗಳು, 3 ಪ್ರಬಂಧಗಳು, 3 ಸಾಹಿತ್ಯ ವಿಮರ್ಶೆ, 1 ನಾಟಕ ಮತ್ತು 1 ಸಂಶೋಧನೆಗೆ ಪ್ರಶಸ್ತಿಗಳು ಲಭ್ಯವಾಗಿವೆ. ಪ್ರಶಸ್ತಿಗೆ ಭಾಜನರಾದವರಲ್ಲಿ ಹಿಂದಿ ಕವಿ ಗಗನ್ ಗಿಲ್, ಇಂಗ್ಲಿಷ್ ಲೇಖಕ ಈಸ್ಟರಿನ್ ಕೈರ್, ಮಲಯಾಳಂನ ಕೆ. ಜಯಕುಮಾರ್, ದೀಪಕ್ ಕುಮಾರ್ ಶರ್ಮಾ(ಸಂಸ್ಕೃತ), ಮುಕೇಶ್ ಥಾಲಿ(ಕೊಂಕಣಿ), ಎ.ಆರ್. ವೆಂಕಟಾಚಲಪತಿ(ತಮಿಳು) ಪ್ರಮುಖರು.
ಪ್ರಶಸ್ತಿಯು 1 ಲಕ್ಷ ರೂ. ನಗದು ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿದ್ದು, 2025ರ ಮಾರ್ಚ್ 8ರಂದು ನವದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ ಎಂದು ಅಕಾಡೆಮಿ ತಿಳಿಸಿದೆ. ಕನ್ನಡ ವಿಭಾಗದ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿ ಒ.ಎಲ್.ನಾಗಭೂಷಣ ಸ್ವಾಮಿ, ಡಾ. ಹಳೇಮನಿ ರಾಜಶೇಖರ್ ಹಾಗೂ ಡಾ.ಸರೂಜ್ ಕಾಟ್ಕರ್ ಇದ್ದರು.
ಇದನ್ನೂ ಓದಿ: Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!