Advertisement
ಇದು, ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ಬೆಳಗ್ಗೆ ಆಯೋಜಿಸಿದ್ದ “ಸಾರ್ವಜನಿಕ ಜನಸ್ಪಂದನ ಸಭೆ’ಯಲ್ಲಿ ಪಾಲ್ಗೊಂಡಿದ್ದ ಸಂಘ- ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಸಿದ ದೂರುಗಳ ಪಟ್ಟಿ. ಸಾರಿಗೆ, ಬಿಬಿಎಂಪಿ, ಬಿಡಿಎ, ಮೆಟ್ರೋ ಅಧಿಕಾರಿಗಳ ಸಮ್ಮುಖದಲ್ಲಿ ನಗರದ ಸಂಚಾರ ದಟ್ಟಣೆ, ಅಪರಾಧ ಮತ್ತಿತರ ಸಮಸ್ಯೆ ಹೇಳಿಕೊಂಡರು. ನಗರದ ಬಹಳಷ್ಟು ಕಡೆ ಅನಗತ್ಯವಾಗಿ ರಸ್ತೆ ವಿಭಜಕ ನಿರ್ಮಿಸಲಾಗಿದ್ದು, ಎಲ್ಲೆಂದರಲ್ಲಿ ಯೂಟರ್ನ್ ನೀಡಲಾಗಿದೆ.
Related Articles
Advertisement
ಸಭೆಯಲ್ಲಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ, ಡಿಸಿಪಿಗಳಾದ ಕೆ.ಜಗದೀಶ್, ಸೌಮ್ಯಲತಾ, ಸಾರಾ ಫಾತೀಮಾ, ಸಾರಿಗೆ ಇಲಾಖೆ ಜಂಟಿ ಆಯುಕ್ತ ಜ್ಞಾನೇಂದ್ರಕುಮಾರ್, ವಿಶೇಷ ಆಹ್ವಾನಿತರಾಗಿ ಐಐಬಿಎಂನ ಡಾ.ಭಟ್ಟಾಚಾರ್ಯ, ಐಆರ್‌ಟಿಇ ನವದೆಹಲಿಯ ಹರಿಷಿ, ಟಿಟಿಐಸಿ ಸಂಜೀವ್, ಐಐಎಸ್‌ಸಿ ಪ್ರೋಫೆಸರ್ ಆಶಿಶ್ ವರ್ಮಾ, ನಿವೃತ್ತ ಪೊಲೀಸ್ ಅಧಿಕಾರಿಗಳು, ಟ್ರಾಫಿಕ್ ವಾರ್ಡ್‌ನ್‌ಗಳು ಹಾಗೂ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಾರ್ವಜನಿಕರ ಸಲಹೆ: ಸಂಚಾರ ತಜ್ಞರು, ಸಾರ್ವಜನಿಕರು, ಆ್ಯಂಬುಲೆನ್ಸ್ ಮತ್ತು ತುರ್ತುವಾಹನಗಳು ಓಡಾಡಲು ಪ್ರತ್ಯೇಕ ದಾರಿ ಮಾಡಬೇಕು. ರಸ್ತೆ ಬದಿಗಳಲ್ಲಿ ನಿಲ್ಲಿಸುವ ಶಾಲಾ ವಾಹನಗಳಿಗೆ ದಂಡ ವಿಧಿಸಬೇಕು, ನಿಯಮ ಉಲ್ಲಂ ಸುವ ಆ್ಯಪ್ ಆಧರಿದ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಕರೆದ ಕಡೆ ಬಾರದ ಆಟೋ ಚಾಲಕರಿಗೆ ದಂಡ ವಿಧಿಸಬೇಕು.
ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು, ಬಸ್ ನಿಲ್ದಾಣದಲ್ಲೇ ಬಿಎಂಟಿಸಿ ಬಸ್‌ಗಳನ್ನು ನಿಲ್ಲಿಸುವಂತೆ ಸೂಚಿಸಬೇಕು. ಮೆಟ್ರೋ ನಿಲ್ದಾಣಗಳ ಕೆಳಗೆ ವಾಹನಗಳ ನಿಲುಗಡೆಗೆ ಅವಕಾಶ ನೀಡಬೇಕು. ಕರ್ಕಶ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಬೇಕು
ಕುಡುಕ ಚಾಲಕರಿಗೊಂದು ವಾಟ್ಸ್‌ಆ್ಯಪ್ ಗ್ರೂಪ್!: ಕುಟುಂಬ, ಪ್ರದೇಶ, ಸಮುದಾಯ, ವೃತ್ತಿ, ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳ ಗುಂಪು ಹೀಗೆ ನಾನಾ ರೀತಿಯ ವಾಟ್ಸ್‌ಆ್ಯಪ್ ಗ್ರೂಪ್‌ಗ್ಳನ್ನು ಕಂಡಿದ್ದೇವೆ. ಆದರೆ, ಸಂಚಾರ ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕುಡಿದು ವಾಹನ ಚಾಲನೆ ಮಾಡುವ ಯುವಕರ ಗುಂಪೊಂದು ನಗರದಲ್ಲಿ ವಾಟ್ಸ್‌ಆ್ಯಪ್ ಗ್ರೂಪ್ ತೆರೆದಿದೆ ಎಂದು ಬೆಂಗಳೂರು ಕ್ಲಬ್ ಅಸೋಸಿಯೇಷನ್ ಕ್ಲಬ್ ಸದಸ್ಯರೊಬ್ಬರು ಮಾಹಿತಿ ನೀಡಿದರು.
ಈ ರೀತಿಯ ಹತ್ತಾರು ಗ್ರೂಪ್‌ಗ್ಳು ನಗರದಲ್ಲಿ ಸಕ್ರಿಯವಾಗಿವೆ. ಈ ಮೂಲಕ ಸಂಚಾರ ಪೊಲೀಸರು ಎಲ್ಲೆಲ್ಲಿ ತಪಾಸಣೆ ನಡೆಸುತ್ತಾರೆ, ಯಾವ ಮಾರ್ಗದಲ್ಲಿ ಹೋಗಬೇಕು, ಹೋಗಬಾರದು ಎಂದು ಚರ್ಚಿಸುತ್ತಾರೆ. ಒಂದು ವೇಳೆ ಗ್ರೂಪ್‌ನ ಸದಸ್ಯನೊಬ್ಬ ನಿರ್ದಿಷ್ಟ ರಸ್ತೆಯಲ್ಲಿ ಹೋಗುವಾಗ ಸಂಚಾರ ಪೊಲೀಸರು ತಪಾಸಣೆ ನಡೆಸಿದರೆ ಆತನ ತಪಾಸಣೆಗೊಳಗಾಗಿ ಕೂಡಲೇ ಲೋಕೇಷನ್ ಸಮೇತ ಗ್ರೂಪ್‌ನಲ್ಲಿ; “ಸ್ನೇಹಿತರೇ, ಈ ಮಾರ್ಗದಲ್ಲಿ ಬರಬೇಡಿ.
ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಬದಲಿ ಮಾರ್ಗ ಬಳಸಿ’ ಎಂದು ಎಚ್ಚರಿಕೆ ಸಂದೇಶ ಹಾಕುತ್ತಾನೆ. ಈ ಮಾಹಿತಿ ತಿಳಿದ ಗ್ರೂಪ್‌ನ ಇತರೆ ಸದಸ್ಯರು ಎಚ್ಚೆತ್ತುಕೊಳ್ಳುತ್ತಾರೆ. ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಈ ವಿಚಾರ ಕೇಳಿದ ನಗರ ಪೊಲೀಸ್ ಆಯುಕ್ತರು ಹಾಗೂ ಇತರೆ ಇಲಾಖೆ ಅಧಿಕಾರಿಗಳು ಒಂದು ಕ್ಷಣ ಅಚ್ಚರಿಗೊಂಡರು. ಇದನ್ನು ಗಂಭೀರವಾಗಿ ಪರಿಗಣಿಸಿ, ಕಾನೂನು ಕ್ರಮಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದರು.
ಶಾಲಾ ವಾಹನಗಳಲ್ಲಿ ಮಕ್ಕಳನ್ನು ಅಪಾಯಕಾರಿ ರೀತಿಯಲ್ಲಿ ತುಂಬಿಕೊಳ್ಳುತ್ತಾರೆ. ಇದು ನಗರದ ಹಲವೆಡೆ ನಡೆಯುತ್ತಿರುವ ದಂಧೆಯಾಗಿದೆ. ಪೊಲೀಸರು, ಸಾರಿಗೆ ಇಲಾಖೆಗೆ ಗೊತ್ತಿದ್ದರೂ ಮೌನವಹಿಸಿದ್ದಾರೆ.-ಮೊಹಮ್ಮದ್ ಶರೀಫ್, ಶಿವಾಜಿನಗರ ನಿವಾಸಿ ಎಷ್ಟೋ ಬೈಕ್‌ಗಳಿಗೆ ಸೈಡ್ ಮೀರರ್ ಇರುವುದಿಲ್ಲ. ಹಿಂದೆ ಬರುವವರನ್ನು ಗಮನಿಸದೇ ಹಾವಿನ ರೀತಿಯಲ್ಲಿ ವಾಹನ ಓಡಿಸುತ್ತಾರೆ. ಸೈಲೆನ್ಸರ್ ಬದಲಿಸಿ ಶಬ್ದ ಮಾಲಿನ್ಯ ಮಾಡುತ್ತಾರೆ. ಇಂತಹ ಸವಾರರಿಗೆ ದಂಡ ವಿಧಿಸಬೇಕು.
-ನಾರಾಯಣ, ಚಂದ್ರಲೇಔಟ್ ನಿವಾಸಿ ಬ್ರಿಗೇಡ್ ರಸ್ತೆ, ಅರಮನೆ ರಸ್ತೆ ಸೇರಿ ಪ್ರಮುಖ ರಸ್ತೆಗಳಲ್ಲಿರುವ ಶಾಲೆ, ಕಾಲೇಜುಗಳ ವಾಹನಗಳು ರಸ್ತೆ ಬದಿಯಲ್ಲೇ ನಿಲ್ಲುತ್ತವೆ. ಈ ಬಗ್ಗೆ ಸಂಚಾರ ಪೊಲೀಸರು ಕ್ರಮ ಕೈಗೊಳ್ಳುವುದಿಲ್ಲ. ದಯವಿಟ್ಟು ಈ ಕುರಿತು ಕ್ರಮ ಜರುಗಿಸಿ.
-ಶಿವಕುಮಾರ್, ದೊಮ್ಮಲೂರು ನಿವಾಸಿ