ಯಳಂದೂರು: ತಾಲೂಕಿನ ರೈತರ ಬೆಳೆಗಳನ್ನು ಒಕ್ಕಣೆಯನ್ನು ಮಾಡುವ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ನಿರ್ಮಿಸಿರುವ ಕಣಗಳು ಕೆಲಸಕ್ಕೆ ಬಾರದೇ ನಿರುಪಯುಕ್ತವಾಗಿದೆ. ಯಳಂದೂರು ತಾಲೂಕಿನ 5000ಕ್ಕೂ ಹೆಚ್ಚು ಹೇಕ್ಟರ್ ಕೃಷಿ ಜಮೀನಿನಲ್ಲಿ ಭತ್ತ, ರಾಗಿ, ಜೋಳ, ಉದ್ದು, ಹುರಳಿ, ಅಲಸಂದೆ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
ಆದರೆ, ಕೃಷಿ ಇಲಾಖೆಯು ಎಲ್ಲಾ ಗ್ರಾಮಗಳಲೂ ಸಾಮೂಹಿಕ ಒಕ್ಕಣೆ ಕಣ ಹಾಗೂ ವೈಯುಕ್ತಿಕ ಕಣ ಗಳ ನಿರ್ಮಿಸಲು ಹೆಚ್ಚಿನ ಯೋಜನೆ ರೂಪಿಸದ ಕಾರಣ ಒಕ್ಕಣೆ ಕಾರ್ಯಕ್ಕೆ ಅಡ್ಡಿಯಾಗಿದೆ. ತಮ್ಮ ಜಮೀನುಗಳಲ್ಲಿ ಕಣಗಳನ್ನು ನಿರ್ಮಿಸಿಕೊಳ್ಳಲು ಮುಂದಾಗದ ಬಹುತೇಕ ರೈತರು, ರಸ್ತೆಗಳಲ್ಲಿ ಒಕ್ಕಣೆ ಮಾಡಲು ಮುಂದಾಗುತ್ತಿರುವುದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
ಅಧಿಕಾರಿಗಳು ಜಾಗೃತಿ ಮೂಡಿಸಲಿ: ಪ್ರತಿನಿತ್ಯ ಯಳಂದೂರು, ಬಿಳಿಗಿರಿರಂಗನಬೆಟ್ಟ, ಕೆಸ್ತೂರು, ಮದ್ದೂರು, ವೈ.ಕೆ.ಮೋಳೆ, ಗೌಡಹಳ್ಳಿ ಸೇರಿದಂತೆ ಈ ಮಾರ್ಗದಲ್ಲಿ ಸಂಚಾರ ಮಾಡುವ ವಾಹನಗಳಿಗೆ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಬೆಳೆಗಳನ್ನು ರಸ್ತೆಗೆ ಹಾಕದಂತೆ ಅರಿವು ಮೂಡಿಸಿ, ವಾಹನ ಸವಾರರಿಗೆ ಉಂಟಾಗುತ್ತಿರುವ ಕಿರಿಕಿರಿ ತಪ್ಪಿಸಬೇಕು. ಕೃಷಿ ಇಲಾಖೆಯ ಎಲ್ಲಾ ಗ್ರಾಮಗಳಲ್ಲಿ ಸಾಮೂಹಿಕ ಒಕ್ಕಣೆ ಕಣ ಹಾಗೂ ವೈಯುಕ್ತಿಕ ಕಣ ನಿರ್ಮಿಸಲು ಹೆಚ್ಚಿನ ಯೋಜನೆಯನ್ನು ರೂಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಜಾಗೃತಿಯನ್ನು ಮೂಡಿಸಬೇಕು ಎಂಬುದು ವಾಹನ ಸವಾರರಾದ ಸುಂದರರಾಜು, ಸಿದ್ದಪ್ಪಸ್ವಾಮಿ ಅನಿಸಿಕೆ.
ದ್ವಿಚಕ್ರ ವಾಹನ ಸವಾರರು ಬೀಳುವ ಸಂಭವ: ತಾಲೂಕಿನ ದುಗ್ಗಹಟ್ಟಿ, ಹೊನ್ನೂರು, ಗುಂಬಳ್ಳಿ, ಗೌಡಹಳ್ಳಿ, ಯರಂಗಬಳ್ಳಿ, ಅಗರ, ಯರಿಯೂರು ಸೇರಿದಂತೆ ಇತರೆ ಗ್ರಾಮಗಳಲ್ಲಿ ಸಾಮೂಹಿಕ ಒಕ್ಕಣೆ ಕಣಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ರೈತರು ಮಾತ್ರ ರಸ್ತೆಯಲ್ಲಿ ರಾಗಿ, ಮುಸುಕಿನ ಜೋಳ, ಹುರುಳಿ ಹಾಕುತ್ತಿದ್ದಾರೆ. ಇದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಅಲ್ಲದೇ ಗಾಳಿ ಬಂದಾಗ ಕಾಳನ್ನು ರಸ್ತೆ ಬದಿಯಲ್ಲೇ ತೂರುವುದರಿಂದ ಧೂಳು ಕಣ್ಣಿಗೆ ಬೀಳುತ್ತದೆ. ಹೆಚ್ಚಾಗಿ ದ್ವಿಚಕ್ರ ವಾಹನ ಸವಾರರು ಜಾರಿ ಬೀಳುವ ಸಂಭಾವವೇ ಹೆಚ್ಚು. ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕಿದೆ.
ರಸ್ತೆ ಅಪಘಾತ ಹೆಚ್ಚಳ: ರೈತರು ರಸ್ತೆಗಳಲ್ಲಿ ಒಕ್ಕಣೆ ಮಾಡುವುದರಿಂದ ರಸ್ತೆಗಳಲ್ಲಿ ಅಪಾಘಾತಗಳು ಹೆಚ್ಚಾಗುತ್ತಿದೆ. ಇದರ ಬಗ್ಗೆ ರೈತರಲ್ಲಿ ಅರಿವು ಮೂಡಿಸಿ, ಸಾಮೂಹಿಕ ಒಕ್ಕಣೆ ಕಣ ಅಥವಾ ವೈಯುಕ್ತಿಕ ಕಣಗಳ ನಿರ್ಮಾಣಗಳ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಮಾಹಿತಿಗಳನ್ನು ನೀಡಿ, ರಸ್ತೆಗಳಲ್ಲಿ ಒಕ್ಕಣೆ ನಿರ್ಮಾಣ ಮಾಡದ ರೀತಿಯಲ್ಲಿ ಸೂಕ್ತ ಕ್ರಮ ವಹಿಸಬೇಕಿದೆ.
ರೈತರು ಸಾಮೂಹಿಕ ಒಕ್ಕಣೆ ಕಣ ಉಪಯೋಗಿಸುತ್ತಿಲ್ಲ: ಕೃಷಿ ಇಲಾಖೆಯಿಂದ ತಾಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ 8ಕ್ಕೂ ಹೆಚ್ಚು ಸಾಮೂಹಿಕ ಒಕ್ಕಣೆ ಕಣಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ರೈತರು ಇದನ್ನು ಉಪಯೋಗಿಸುತ್ತಿಲ್ಲ. ಇದರಿಂದ ಇವುಗಳು ನಿರುಪಯುಕ್ತವಾಗಿದೆ. ರೈತರ ಜಮೀನಿಗಳಲ್ಲಿ ವೈಯುಕ್ತಿಕ ಕಣಗಳ ನಿರ್ಮಾಣ ಮಾಡುವುದಕ್ಕೂ ರೈತರು ಆಸಕ್ತಿ ತೋರಿಸುತ್ತಿಲ್ಲ. ಈ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸಲು ಕ್ರಮ ವಹಿಸಲಾಗುವುದು ಎಂದು ಕೃಷಿ ಅಧಿಕಾರಿ ವೆಂಕಟರಂಗಶೆಟ್ಟಿ ಮಾಹಿತಿ ನೀಡಿದರು.
* ಫೈರೋಜ್ ಖಾನ್