Advertisement

ವರ್ಷಾಂತ್ಯ, ಹೊಸ ವರ್ಷಾಚರಣೆಗೆ ಪ್ರವಾಸಿಗರ ಲಗ್ಗೆ

11:19 AM Dec 26, 2018 | |

ಮೈಸೂರು: ವರ್ಷಾಂತ್ಯ, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಅರಮನೆಗಳ ನಗರಿ ಮೈಸೂರಿಗೆ ಪ್ರವಾಸಿಗರ ದಂಡು ಲಗ್ಗೆಯಿಡುತ್ತಿದ್ದು, ಮೈಸೂರು ನಗರ ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳಲ್ಲಿ ಎಲ್ಲಿ ನೋಡಿದರೂ ಹೊರ ರಾಜ್ಯಗಳ ಪ್ರವಾಸಿಗರೇ ಕಾಣುತ್ತಿದ್ದಾರೆ.

Advertisement

ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಆಚರಣೆ, ವರ್ಷಾಂತ್ಯದ ದಿನಗಳು ಹಾಗೂ ಬೇಸಿಗೆ ರಜೆ ಸಂದರ್ಭದಲ್ಲಿ ಮೈಸೂರು ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ. ಮೈಸೂರು ನಗರದ ನೆಚ್ಚಿನ ಪ್ರವಾಸಿ ಹಾಗೂ ಯಾತ್ರಾ ಸ್ಥಳಗಳಾದ ಚಾಮುಂಡಿಬೆಟ್ಟ, ಮೈಸೂರು ಅರಮನೆ, ಮೃಗಾಲಯ, ದಸರಾ ವಸ್ತುಪ್ರದರ್ಶನ,

ಸಂತ ಫಿಲೋಮಿನಾ ಚರ್ಚ್‌, ಕೆಆರ್‌ಎಸ್‌, ನಂಜನಗೂಡು ಶ್ರೀಕಂಠೇಶ್ವರ ದೇವಾಲಯ, ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇವಾಲಯ, ಟಿಪ್ಪು ಅರಮನೆ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ಚಾಮರಾಜ ನಗರ ಜಿಲ್ಲೆಯ ಬಂಡೀಪುರ, ಬಿಳಿಗಿರಿ ರಂಗನಬೆಟ್ಟ, ಕೆ.ಗುಡಿ, ಮಲೆ ಮಹದೇಶ್ವರ ಬೆಟ್ಟ ಮೊದಲಾದ ಸ್ಥಳಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ.

ಉತ್ಸವಗಳು: ಸಾಂಪ್ರದಾಯಿಕ ಪ್ರವಾಸಿ ತಾಣಗಳ ಜೊತೆಗೆ ವರ್ಷಾಂತ್ಯದ ದಿನಗಳಲ್ಲಿ ಮೈಸೂರಿಗೆ ಬರುವ ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸಲು ಇತ್ತೀಚಿನ ವರ್ಷಗಳಲ್ಲಿ ಜಿಲ್ಲಾಡಳಿತ ಆಯೋಜಿಸುತ್ತಾ ಬಂದಿರುವ ಅರಮನೆ ಆವರಣದಲ್ಲಿನ ಫ‌ಲಪುಷ್ಪ ಪ್ರದರ್ಶನ, ಏರೋ ಮೋಟರಿಂಗ್‌ ಸಾಹಸ ಪ್ರದರ್ಶನ, ಜನಪ್ರಿಯ ಮಾಗಿ ಆಹಾರ ಮತ್ತು ಕೇಕ್‌ ಉತ್ಸವಗಳು ಪ್ರವಾಸಿಗರನ್ನು ಸೆಳೆಯುತ್ತಿವೆ.

30 ಲಕ್ಷ ಮಂದಿ ಭೇಟಿ: ಶಬರಿಮಲೆ ಯಾತ್ರಿಕರ ಪ್ರವಾಸದ ಪಟ್ಟಿಯಲ್ಲಿ ಮೈಸೂರು ಸೇರಿರುವುದು, ಶಾಲೆಗಳಿಗೆ ಕ್ರಿಸ್‌ಮಸ್‌ ರಜೆಯ ಹಿನ್ನೆಲೆಯಲ್ಲಿ ಬಹಳಷ್ಟು ಪೋಷಕರು ತಮ್ಮ ಮಕ್ಕಳೊಂದಿಗೆ ಮೈಸೂರಿಗೆ ಭೇಟಿ ನೀಡಿ ಪ್ರವಾಸಿ ತಾಣಗಳನ್ನು ವೀಕ್ಷಿಸಿ ಹೋಗುತ್ತಿದ್ದಾರೆ. ಅದರಲ್ಲೂ ಮೈಸೂರು ಅರಮನೆ ಮತ್ತು ಶ್ರೀಚಾಮರಾಜೇಂದ್ರ ಮೃಗಾಲಯ ಪ್ರವಾಸಿಗರ ನೆಚ್ಚಿನ ತಾಣಗಳು, ಈ ಎರಡೂ ತಾಣಗಳಿಗೆ ವಾರ್ಷಿಕ 30 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಅದರಲ್ಲೂ ಮೈಸೂರು ಕೇರಳಿಗರ ನೆಚ್ಚಿನ ಪ್ರವಾಸಿ ತಾಣವಾಗಿದೆ. 

Advertisement

ವಸತಿ ಗೃಹಗಳು ಭರ್ತಿ: ಮೈಸೂರು ನಗರದ ವಿವಿಧ ವಸತಿ ಗೃಹಗಳು, ಅತಿಥಿ ವೃಹಗಳಲ್ಲಿ ಸುಮಾರು 6ಸಾವಿರ ಕೊಠಡಿಗಳು ಲಭ್ಯವಿದ್ದು, ಈಗಾಗಲೇ ಶೇ.95ರಷ್ಟು ಕೊಠಡಿಗಳನ್ನು ಮುಂಗಡ ಕಾದಿರಿಸಲಾಗಿದೆ ಎನ್ನುತ್ತಾರೆ ಮೈಸೂರು ಹೋಟೆಲ್‌ ಮಾಲಿಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ. ಕ್ರಿಸ್‌ಮಸ್‌ ಮತ್ತು ಹೊಸ ವರ್ಷಾಚರಣೆ ಸಂಬಂಧ ಡಿ.22ರಿಂದಲೇ ಜನವರಿ 1ರವರೆಗೆ ನಗರದ ಎಲ್ಲಾ ಲಾಡಿjಂಗ್‌ಗಳನ್ನೂ ಪ್ರವಾಸಿಗರು ಕಾದಿರಿಸಿದ್ದಾರೆ ಎಂದು ಹೇಳುತ್ತಾರೆ. 

ಸಂಚಾರ ದಟ್ಟಣೆ: ಕ್ರಿಸ್‌ಮಸ್‌ ರಜೆಯ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗಿನ ಸಮಯ ನಗರದ ಪ್ರಮುಖ ರಸ್ತೆಗಳು ಖಾಲಿ ಖಾಲಿ ಇದ್ದವು. ಆದರೆ, ಮಧ್ಯಾಹ್ನದ ನಂತರ ಡಿ.ದೇವರಾಜ ಅರಸು ರಸ್ತೆ, ಸಯ್ನಾಜಿರಾವ್‌ ರಸ್ತೆ, ಗಾಂಧಿ ಚೌಕ, ಅರಮನೆ ಸುತ್ತಮುತ್ತಲಿನ ರಸ್ತೆ, ವಸ್ತುಪ್ರದರ್ಶನ ಮುಂಭಾಗದ ದೊಡ್ಡಕೆರೆ ಮೈದಾನದಲ್ಲಿನ ವಾಹನ ನಿಲುಗಡೆ ತಾಣ, ಸಂತ ಫಿಲೋಮಿನಾ ಚರ್ಚ್‌ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ದಟ್ಟಣೆ ಕಂಡು ಬಂತು.

ಒಮ್ಮೆಲೆ ನೂರಾರು ವಾಹನಗಳು ರಸ್ತೆಗಿಳಿದಿದ್ದಲ್ಲದೆ, ಪ್ರವಾಸಿಗರು ರಸ್ತೆಯ ಇಕ್ಕೆಲಗಳಲ್ಲಿನ ಪಾರಂಪರಿಕ ಕಟ್ಟಡಗಳ ವೀಕ್ಷಣೆ, ಶಾಪಿಂಗ್‌ ಬೇಕಾದ ವಾಣಿಜ್ಯ ಮಳಿಗೆಗಳನ್ನು ಹುಡುಕುತ್ತಾ ತಮ್ಮ ವಾಹನಗಳಲ್ಲಿ ಸಾಗುತ್ತಿದ್ದರಿಂದ ನಗರದ ಬಹುತೇಕ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮಂದಗತಿಯಲ್ಲಿ ಸಾಗಿತ್ತು. ಸಂಚಾರವನ್ನು ಸುಗಮಗೊಳಿಸಲು ಸಂಚಾರಿ ಪೊಲೀಸರು ಹೆಣಗುವಂತಾಗಿತ್ತು. ದೂರದ ಊರುಗಳಿಂದ ಬಾಡಿಗೆ ವಾಹನಗಳನ್ನು ಮಾಡಿಕೊಂಡು ಬಂದಿದ್ದ ಪ್ರವಾಸಿಗರು ವಾಹನ ನಿಲುಗಡೆಗೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. 

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next