ಕ್ಯಾಲೆಂಡರ್ ವರ್ಷ 2024 ಅಂತ್ಯಗೊಂಡು ಹೊಸ ವರ್ಷ 2025ಕ್ಕೆ ಪಾದಾರ್ಪಣೆ ಮಾಡಿದ್ದೇವೆ. ಪ್ರತೀ ವರ್ಷ ಕ್ಯಾಲೆಂಡರ್ ಬದಲಾಗುವುದು ಸಹಜ ಪ್ರಕ್ರಿಯೆಯಾದರೂ ಹೊಸ ವರ್ಷ ಎಂದಾಕ್ಷಣ ನಮ್ಮಲ್ಲಿ ಹೊಸ ಆಶಯ, ನಿರೀಕ್ಷೆ, ಭರವಸೆಗಳೆಲ್ಲ ಗರಿಗೆದರುವುದು ಸಾಮಾನ್ಯ. ಇವೆಲ್ಲವೂ ನಮ್ಮನ್ನು ಜೀವನೋತ್ಸಾಹಿಗಳನ್ನಾಗಿಸುವ ಅಸಾಮಾನ್ಯ ಸಾಧನಗಳು. ಇದರ ಮುಂದುವರಿದ ಭಾಗವೇ ಹೊಸ ವರ್ಷದ ಆರಂಭದಲ್ಲಿ ಹಲವರು ಕೈಗೊಳ್ಳುವ ಸಂಕಲ್ಪಗಳು. ಈ ಸಂಕಲ್ಪಗಳ ನೆಪದಲ್ಲಾದರೂ ಆ ವ್ಯಕ್ತಿಯ ಬದುಕಿನಲ್ಲಿ ಒಂದಿಷ್ಟು ಬದಲಾವಣೆಯಾದರೆ ಅದಕ್ಕಿಂತ ದೊಡ್ಡ ಯಶಸ್ಸು ಬೇರೇನಿಲ್ಲ.
ಗತ ವರ್ಷದ ಸಿಹಿ-ಕಹಿಯ ನೆನಪು, ಅನುಭವಗಳಿಂದ ಪಾಠ ಕಲಿತು ಭವಿಷ್ಯದತ್ತ ದೃಷ್ಟಿ ಹರಿಸಿದಲ್ಲಿ ಪ್ರತಿಯೋರ್ವನ ಬದುಕು ಹಸನಾಗಲು ಸಾಧ್ಯ. ಹೀಗಾಗಿಯೇ ಹೊಸ ವರ್ಷದ ಆರಂಭಕ್ಕೂ ಮುನ್ನ ಕಳೆದ ವರ್ಷದ ಘಟನಾವಳಿಗಳತ್ತ ಒಂದು ಹಿನ್ನೋಟ ಬೀರಿ, ಈ ಸಂದರ್ಭದಲ್ಲಿ ನಮ್ಮ ಬಾಳ ಬಂಡಿಯ ಪಯಣ ಹೇಗಿದ್ದರೆ ಚೆನ್ನ ಎಂದು ಮುನ್ನೋಟವನ್ನು ರೂಪಿಸಿಕೊಳ್ಳುವುದು ಹೆಚ್ಚು ಅರ್ಥಪೂರ್ಣ. ಇದು ಕೇವಲ ವ್ಯಕ್ತಿಗೆ ಸೀಮಿತವಾಗಿರದೆ ಪ್ರತಿಯೊಂದು ಕ್ಷೇತ್ರದಲ್ಲೂ ಇಂತಹ ಒಂದು ಆತ್ಮಾವಲೋಕನ ಪ್ರಕ್ರಿಯೆ ನಡೆದು, ಆ ಹಿನ್ನೆಲೆಯಲ್ಲಿ ಯೋಚನಾಲಹರಿ ಹರಿದು, ಭಾವೀ ಯೋಜನೆ ರೂಪುಗೊಂಡಲ್ಲಿ ಭವಿಷ್ಯದ ಬಗೆಗಿನ ನಿರೀಕ್ಷೆ, ಸಂಕಲ್ಪಗಳು ಈಡೇರಲು ಸಾಧ್ಯ.
ನಮ್ಮ ಪ್ರತಿಯೊಂದೂ ಆಶಯ, ನಿರೀಕ್ಷೆಗಳ ಹಿಂದೆ ನಮಗೆ ತಿಳಿದೋ, ತಿಳಿಯದೆಯೋ ಗತ ವರ್ಷದ ಒಂದಿಷ್ಟು ಅನುಭವಗಳ ಹೂರಣ ಇದ್ದೇ ಇರುತ್ತದೆ. ಅದು ಸಿಹಿಯಾಗಿರಲಿ, ಕಹಿಯಾಗಿರಲಿ ನಮ್ಮ ಜೀವನವನ್ನು ಸುಸೂತ್ರವಾಗಿ ಮುಂದಕ್ಕೊಯ್ಯಲು ಯಾವುದು ಪೂರಕ ಎಂಬುದನ್ನು ನಾವು ಅರಿತುಕೊಂಡದ್ದೇ ಆದಲ್ಲಿ ನಮ್ಮ ಹೊಸ ವರ್ಷದ ಸಂಕಲ್ಪದ ಈಡೇರಿಕೆಯ ಹಾದಿಯಲ್ಲಿ ನಾವು ಅರ್ಧ ಹಾದಿಯನ್ನು ಕ್ರಮಿಸಿದಂತೆ. ಹಾಗೆಂದು ನಮ್ಮ ಪ್ರಯತ್ನಗಳೆಲ್ಲವೂ ಗುರಿ ತಲುಪುತ್ತದೆ ಎಂದು ಭಾವಿಸುವುದು ಹುಂಬತನವಾದೀತು. ಪ್ರಯತ್ನಗಳಲ್ಲಿ ಸೋಲು ಕಂಡರೆ ತೀರಾ ನಿರಾಶೆಗೊಳಗಾಗಿ ಹತಾಶರಾಗಿ ಕೈಚೆಲ್ಲಿ ಕುಳಿತುಕೊಳ್ಳಬೇಕಿಲ್ಲ. ಈ ಎಲ್ಲ ಪ್ರಯತ್ನಗಳ ಸಂದರ್ಭದಲ್ಲಿಯೂ ನಾವು ಒಂದಲ್ಲ ಒಂದು ಪಾಠ ಕಲಿತುಕೊಂಡಿರುತ್ತೇವೆ. ಅದುವೇ ಕಾಲಚಕ್ರದ ಜತೆಯಲ್ಲಿ ನಮ್ಮನ್ನು ಕರೆದೊಯ್ಯುತ್ತದೆ.
ಮಾನವ ಜೀವನ ಎಂದ ಮೇಲೆ ಏಳು-ಬೀಳು, ಸಂಘರ್ಷ, ಸಂಕಷ್ಟ ಎಲ್ಲವೂ ಸಹಜ. ಅವೆಲ್ಲವನ್ನು ಮೆಟ್ಟಿನಿಂತು, ಸವಾಲುಗಳನ್ನು ತಮ್ಮ ಸಾಮರ್ಥ್ಯಕ್ಕನುಸಾರ ಎದುರಿಸಿದಲ್ಲಿ ಫಲ ನಿಶ್ಚಿತ. ಈ ಪೈಪೋಟಿಯ ಕಾಲಘಟ್ಟದಲ್ಲಿ ಪ್ರತಿಯೋರ್ವರು ಅವರವರ ವೈಯಕ್ತಿಕ ಆರೋಗ್ಯ, ಮಾನಸಿಕ ನೆಮ್ಮದಿಯತ್ತ ಗಮನ ಹರಿಸುವುದರ ಜತೆಯಲ್ಲಿ ಒಂದಿಷ್ಟು ಸಮಯವನ್ನು ನಮ್ಮ ಮನೆಯವರು, ಬಂಧುಗಳು, ಗೆಳೆಯರು, ನೆರೆಹೊರೆಯವರಿಗೂ ಮೀಸಲಿರಿಸಬೇಕು. ಇವೆಲ್ಲವೂ ನಮ್ಮ ಮನಸ್ಸನ್ನು ಹಗುರವಾಗಿಸುವುದರ ಜತೆಯಲ್ಲಿ ಅವರ ದುಗುಡ-ದುಮ್ಮಾನವನ್ನು ಒಂದಿಷ್ಟು ಕಡಿಮೆ ಮಾಡಲು ಸಹಕಾರಿಯಾಗುತ್ತದೆ.
ಸದ್ಯ ಇಡೀ ವಿಶ್ವದಲ್ಲಿ ಭೌಗೋಳಿಕ-ರಾಜಕೀಯ ಪ್ರಕ್ಷುಬ್ಧತೆ ಕಾಣುತ್ತಿದೆ. ವಿಶ್ವದ ಅಲ್ಲಲ್ಲಿ ಯುಧ್ದೋನ್ಮಾದ, ಭೀತಿವಾದ ಹೆಚ್ಚುತ್ತಲೇ ಇದೆ. ಇದರ ಪರಿಣಾಮವಾಗಿ ಇಡೀ ವಿಶ್ವದ ಆರ್ಥಿಕತೆ ಅನಿಶ್ಚಿತತೆಯಲ್ಲಿ ಓಲಾಡುತ್ತಿದ್ದರೆ, ಬಡ ರಾಷ್ಟ್ರಗಳು ಸಂಕಷ್ಟಕ್ಕೀಡಾಗಿವೆ. ವರ್ಷಗಳುರುಳಿದಂತೆಯೇ ಪ್ರಾಕೃತಿಕ ವಿಕೋಪಗಳು ಅಧಿಕಗೊಳ್ಳುತ್ತಿದ್ದು ಇಡೀ ಜಗತ್ತಿಗೆ ಇದರ ಬಿಸಿ ತಟ್ಟತೊಡಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಂತಿಯ ಹರಿಕಾರನಾಗಿರುವ ಭಾರತದ ಪರಮ ಧ್ಯೇಯಗಳಾದ “ಸರ್ವೇ ಜನಾಃ ಸುಖೀನೋ ಭವಂತು’, “ವಸುಧೈವ ಕುಟುಂಬಕಂ’ ಮಂತ್ರ ವಿಶ್ವದೆಲ್ಲೆಡೆ ಅನುರಣಿಸಿ, ಕಾರ್ಯರೂಪಕ್ಕೆ ಬರಬೇಕಿರುವುದು ಇಂದಿನ ಅನಿವಾರ್ಯತೆ ಮಾತ್ರವಲ್ಲ ತುರ್ತು ಕೂಡ. ಇದು ಕೈಗೂಡಿದಲ್ಲಿ ಈಗ ಜಗತ್ತನ್ನು ಕಾಡುತ್ತಿರುವ ಬಹುತೇಕ ಸಂಕಷ್ಟಗಳು ನಿವಾರಣೆಯಾಗಿ ಇಡೀ ವಿಶ್ವದಲ್ಲಿ ಶಾಂತಿ ನೆಲೆಸುವುದರ ಜತೆಯಲ್ಲಿ ಜನತೆಯ ಆಶಯ, ನಿರೀಕ್ಷೆಗಳು ಸಾಕಾರಗೊಳ್ಳಲು ಸಾಧ್ಯ.