Advertisement

ಉಡುಪಿಯತ್ತ ಪ್ರವಾಸಿಗರ ದಂಡು; ವಾಸ್ತವ್ಯಕ್ಕೆ ಪರದಾಟ

01:41 PM Dec 28, 2022 | Team Udayavani |

ಉಡುಪಿ: ಕ್ರಿಸ್ಮಸ್‌ ರಜೆ, ವರ್ಷಾಂತ್ಯ ಸಂಭ್ರಮ ಹಿನ್ನೆಲೆಯಲ್ಲಿ ಉಡುಪಿಯತ್ತ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಕೃಷ್ಣಮಠಕ್ಕೆ 20ರಿಂದ 25 ಸಾವಿರ ಮಂದಿವರೆಗೆ ಭಕ್ತರು ಭೇಟಿ ನೀಡುತ್ತಿದ್ದಾರೆ. ಜತೆಗೆ ಮಲ್ಪೆ, ಸೇಂಟ್‌ ಮೇರಿಸ್‌ ಐಲ್ಯಾಂಡ್‌, ಕಾಪು ಬೀಚ್‌ಗಳಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಾಗಿದೆ. ಕೃಷ್ಣಮಠ, ಕಡಲ ಕಿನಾರೆಗಳು ಪ್ರವಾಸಿಗರಿಂದ ತುಂಬಿದೆ.

Advertisement

ಒಂದೆಡೆ ಪ್ರವಾಸಿಗರು, ಇನ್ನೊಂದೆಡೆ ಶೈಕ್ಷಣಿಕ ಪ್ರವಾಸದ ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಉಡುಪಿಗೆ ಆಗಮಿಸುತ್ತಿದ್ದಾರೆ. ಕೃಷ್ಣ ದೇವರ ದರ್ಶನ, ಕಡಲತೀರ, ನೈಸರ್ಗಿಕ ತಾಣಗಳಿಗೆ ಭೇಟಿ ಜತೆಗೆ ಮಣಿಪಾಲ ಕೆಎಂಸಿ ಮ್ಯೂಸಿಯಂ, ಪ್ಲ್ಯಾನಿಟೋರಿಯಂ ವೀಕ್ಷಣೆಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ.

ಉಡುಪಿ-ಮಲ್ಪೆ ಮುಖ್ಯ ರಸ್ತೆಯಲ್ಲಿ ವಾಹನಗಳ ದಟ್ಟಣೆ ವಿಪರೀತ ಹೆಚ್ಚಾಗಿದ್ದು ವಾರಾಂತ್ಯದಲ್ಲಿ ಕರಾವಳಿ ಬೈಪಾಸ್‌, ಕಲ್ಸಂಕ, ಇಂದ್ರಾಳಿ, ಮಲ್ಪೆಯಲ್ಲಿ ಟ್ರಾಫಿಕ್‌ ದಟ್ಟಣೆ ಹೆಚ್ಚಳವಾಗಿದೆ.

ಕೃಷ್ಣಮಠಕ್ಕೆ ಸಾವಿರಾರು ಮಂದಿ ಭೇಟಿ
ಕೃಷ್ಣಮಠಕ್ಕೆ 20ರಿಂದ 25 ಸಾವಿರದವರೆಗೂ ಭಕ್ತರು ನಿತ್ಯ ಭೇಟಿ ನೀಡುತ್ತಿದ್ದಾರೆ. ಬೆಳಗ್ಗೆ 6 ಗಂಟೆಗೆ ಆರಂಭವಾಗುವ ದೇವರ ದರ್ಶನಕ್ಕೆ ರಾತ್ರಿ 9 ಕಳೆದರೂ ಸಾಕಷ್ಟು ಉದ್ದದ ಸರತಿಯಲ್ಲಿ ಭಕ್ತರು ನಿಂತಿರುತ್ತಾರೆ. ನಿತ್ಯಕ್ಕೆ 8ರಿಂದ 10 ಸಾವಿರ ಮಂದಿಗೆ ಊಟದ ವ್ಯವಸ್ಥೆ ಆಗುತ್ತಿದೆ. ಎಂಟು ಮಠದ ಎಲ್ಲ ಛತ್ರಗಳು ಜ.2ರವರೆಗೆ ಭರ್ತಿಯಾಗಿವೆ. ಕೊಠಡಿ ಸಿಗದ ಶಾಲಾ ಮಕ್ಕಳಿಗೆ ರಾಜಾಂಗಣದಲ್ಲಿ ವ್ಯವಸ್ಥೆ ಮಾಡಿಕೊಡುತ್ತಿದ್ದೇವೆ ಎಂದು ಕೃಷ್ಣ ಮಠದ ಮೂಲಗಳು ತಿಳಿಸಿವೆ.

ವಾಸ್ತವ್ಯಕ್ಕೆ ಪರದಾಟ
ಜಿಲ್ಲೆಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಲಾಡ್ಜ್, ಹೋಂ ಸ್ಟೇ, ಛತ್ರ ಗಳು, ರೆಸಾರ್ಟ್‌, ಸರ್ವಿಸ್‌ ಅಪಾರ್ಟ್‌ಮೆಂಟ್‌ ಭರ್ತಿಯಾಗಿವೆ. ಶೇ.80ಕ್ಕೂ ಹೆಚ್ಚಿನ ಕೊಠಡಿ ಮುಂಚಿತವಾಗಿ ಬುಕ್‌ ಆಗಿದ್ದರಿಂದ ಕೊಠಡಿ ಕಾದಿರಿಸದೆ ನೇರವಾಗಿ ಬಂದ ಪ್ರವಾಸಿಗರು ವಾಸ್ತವ್ಯಕ್ಕೆ ಪರದಾಡುವಂತಾಗಿದೆ. ಹೆಚ್ಚು ಹಣ ಕೊಟ್ಟರೂ ಕೊಠಡಿ ಸಿಗುತ್ತಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next