Advertisement

ಕಾರ್ಮೋಡದ ಮಧ್ಯೆ ಧಾರಾಕಾರ ಮಳೆ

10:26 AM Aug 29, 2017 | Team Udayavani |

ವಾಡಿ: ಮಳೆಯಿಲ್ಲದೆ ಉದ್ದು ಮತ್ತು ಹೆಸರು ಬೆಳೆ ಕಳೆದುಕೊಂಡ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣ ಹಾಗೂ ನಾಲವಾರ ವಲಯ ವ್ಯಾಪ್ತಿಯಲ್ಲಿ ಸೋಮವಾರ ಉತ್ತಮ ಮಳೆಯಾಗಿದ್ದು, ಮುಗ್ಗರಿಸಿದ್ದ ತೊಗರಿ ಬೆಳೆಗೆ ಕಳೆ ಬಂದು ರೈತರು ಹಿಗ್ಗಿ ನಿಲ್ಲುವಂತಾಗಿದೆ. ಕಾರ್ಮೋಡಗಟ್ಟಿದ್ದ ಮುಗಿಲು ಮಧ್ಯಾಹ್ನದ ವೇಳೆಯೂ ನಸುಕಿನ ಅನುಭವ ನೀಡುವ ಮೂಲಕ ಭಾರಿ ಮಳೆ ಮುನ್ಸೂಚನೆ ನೀಡಿತ್ತು. ರವಿವಾರ ರಾತ್ರಿ ಸುರಿದ ಧಾರಾಕಾರ ಮಳೆ ಆರ್ಭಟ ಸೋಮವಾರವೂ
ಮುಂದು ವರೆದಿತ್ತು. ಮಧ್ಯಾಹ್ನ 2:00ರಿಂದ ಆರಂಭವಾದ ವರ್ಷಧಾರೆ, ಸತತ ಮೂರು ತಾಸು ಸುರಿದ ಪರಿಣಾಮ ಜಮೀನುಗಳು ನೀರುಂಡವು. ತೇವಾಂಶ ಕೊರತೆಯಿಂದ ಚೇತರಿಸಿಕೊಳ್ಳದ ತೊಗರಿ ಹೊಲಗಳಲ್ಲಿ ಅಪಾರ
ಪ್ರಮಾಣದ ಮಳೆ ನೀರು ಹರಿದಾಡಿತು. ಹತ್ತಿ ಹೊಲಗಳಿಗೂ ನೀರು ನುಗ್ಗಿ ಬಂದು ಬೆಳೆ ಸಾಲುಗಳನ್ನು ಆವರಿಸಿತು.
ಪಟ್ಟಣದ ಎಸಿಸಿ ಕಂಪನಿ, ಲಾಡ್ಲಾಪುರ ಗ್ರಾಮದ ಹಾಜಿಸರ್ವರ್‌ ಗುಡ್ಡ, ಸನ್ನತಿ ವಿದ್ಯುತ್‌ ಘಟಕ, ಹಳಕರ್ಟಿ ಸಾಹೇಬ ದರ್ಗಾದ ಎತ್ತರದ ಜೋಡು ಮಿನಾರ್‌ಗಳು ಕಾರ್ಮೋಡದ ಕತ್ತಲಲ್ಲಿ ಮಸುಕಾಗಿ ಕಂಡು ಬಂದವು. ಯಾದಗಿರಿ ಮಾರ್ಗದ ರಾಷ್ಟ್ರೀಯ ಡಾಂಬರ್‌ ರಸ್ತೆ ಮೇಲೆ ಮೋಡಗಳು ತೇಲಿ ಬರುತ್ತಿದ್ದ ದೃಶ್ಯ ಜನರ ಗಮನ ಸೆಳೆಯಿತು. ನೋಡ ನೋಡುತ್ತಿದ್ದಂತೆ ಸುರಿದ ಭಾರಿ ಮಳೆಯಿಂದ ಎಲ್ಲಡೆ ಜನಜೀವನ ಅಸ್ತವ್ಯಸ್ತಗೊಂಡಿತು. ಪಟ್ಟಣದಿಂದ ಸಂಜೆ ವಿವಿಧ ಗ್ರಾಮಗಳಿಗೆ ತೆರಳಬೇಕಿದ್ದ ಹೈಸ್ಕೂಲ್‌ ವಿದ್ಯಾರ್ಥಿಗಳು, ಬಸ್‌ ನಿಲ್ದಾಣ ಕೊರತೆಯಿಂದ ಹೋಟೆಲ್‌ ಗೋಡೆಗಳ ಆಸರೆ ಪಡೆದು ಮಳೆಯಲ್ಲಿಯೇ ವಾಹನಗಳಿಗಾಗಿ ಕಾಯಬೇಕಾದ ಪ್ರಸಂಗ ಎದುರಾಯಿತು. ಮಳೆ ನಿಂತರೂ ಮೋಡಗಳು ಮಾತ್ರ ಕರಗಲಿಲ್ಲ

Advertisement
Advertisement

Udayavani is now on Telegram. Click here to join our channel and stay updated with the latest news.

Next