ಪುಣೆ : ಇಲ್ಲಿನ ವಿಶ್ವಶಾಂತಿ ಗುರುಕುಲ ವಿದ್ಯಾಲಯ ತನ್ನ ವಿದ್ಯಾರ್ಥಿನಿಯರು ತೊಡುವ ಒಳ ಉಡುಪುಗಳಿಗೆ ಸಂಬಂಧಿಸಿದಂತೆ ಹೊರಡಿಸಿರುವ ವಿಚಿತ್ರ ಪ್ರಕಟನೆಯು ಭಾರೀ ವಿವಾದಕ್ಕೆ ಕಾರಣವಾಗಿದೆ.
ವಿದ್ಯಾರ್ಥಿನಿಯರು ತೊಡುವ ಒಳ ಉಡುಪು ಬಿಳಿ ಅಥವಾ ಚರ್ಮದ ಬಣ್ಣದ್ದಾಗಿರಬೇಕು ಎಂಬ ಸೂಚನೆಯನ್ನು ಆಡಳಿತ ವರ್ಗ, ವಿದ್ಯಾಲಯದ ಹೊಸ ಶೈಕ್ಷಣಿಕ ವರ್ಷದ ಶಾಲಾ ಡೈರಿಯಲ್ಲಿ ಪ್ರಕಟಿಸಿರುವುದು ಹೆತ್ತವರನ್ನು ಅಚ್ಚರಿಗೊಳಿಸಿದೆ.
‘ಶಾಲಾ ಡೈರಿಯಲ್ಲಿನ ಈ ನಿಬಂಧನೆಗೆ ಸಹಿ ಹಾಕುವಂತೆ ಶಾಲಾ ಆಡಳಿತ ನಮ್ಮನ್ನು ಬಲವಂತಪಡಿಸಿದೆ’ ಎಂದು ಹೇಳಿರುವ ವಿದ್ಯಾರ್ಥಿನಿಯರ ಹೆತ್ತವರು ಇದಕ್ಕಾಗಿ ಪ್ರತಿಭನೆ ನಡೆಸಿದ್ದಾರೆ. ಶಾಲಾ ಆಡಳಿತವು ತನ್ನ ನೀತಿ ನಿಬಂಧನೆಗಳಿಗೆ ವಿದ್ಯಾರ್ಥಿನಿಯರು ಮಾತ್ರವಲ್ಲದೆ ಹೆತ್ತವರು ಕೂಡ ಬದ್ಧರಾಗಿರಬೇಕು ಎಂಬ ಅಪ್ಪಣೆ ಕೊಡಿಸಿದೆ.
ಇದಕ್ಕೆ ಪ್ರತಿಭಟಿಸಿರುವ ಹೆತ್ತವರನೇಕರ ಕೊಟ್ಟಿರುವ ದೂರುಗಳನ್ನು ಶಾಲಾ ಆಡಳಿತ ಕಡೆಗಣಿಸಿದೆ. ಈ ಕಟ್ಟುನಿಟ್ಟಿನ ನಿಬಂಧನೆಗಳನ್ನು ತಾನು ವಿದ್ಯಾರ್ಥಿನಿಯರ ಸುರಕ್ಷೆಗಾಗಿ ಅನುಷ್ಠಾನಿಸಿರುವುದಾಗಿ ಶಾಲಾ ಆಡಳಿತ ಹೇಳಿಕೊಂಡಿದೆ.
ಶಾಲಾ ಆಡಳಿತದ ಈ ಕ್ರಮದಿಂದ ಸಿಟ್ಟಿಗೆದ್ದಿರುವ ಹೆತ್ತವರು ಶಾಲಾ ಆವರಣದ ಹೊರಗೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ವರದಿಗಳ ಪ್ರಕಾರ ಶಾಲಾ ಆಡಳಿತವು ಪ್ರತಿಯೊಂದು ತರಗತಿಯ ವಿದ್ಯಾರ್ಥಿನಿಯರು ಯಾವ ಯಾವ ಹೊತ್ತಿನಲ್ಲಿ ನೀರು ಕುಡಿಯಲು ಅಥವಾ ವಾಶ್ ರೂಮ್ ಗೆ ಹೋಗಬೇಕು ಎಂಬ ವೇಳಾ ಪಟ್ಟಿಯನ್ನು ಕೂಡ ಪ್ರಕಟಿಸಿದೆ.
ವಿದ್ಯಾರ್ಥಿನಿಯರ ಹೆತ್ತವರು ಇದೀಗ ತಮ್ಮ ದೂರುಗಳೊಂದಿಗೆ ಪ್ರಾಥಮಿಕ ಶಾಲಾ ಶಿಕ್ಷಣ ನಿರ್ದೇಶಕರನ್ನು ಸಂಪರ್ಕಿಸಿದ್ದಾರೆ.