Advertisement

ಬಲೆಗೆ ಬೀಳುತ್ತಿದೆ ಟನ್‌ಗಟ್ಟಲೆ ಕಾರ್ಗಿಲ್‌ ಮೀನು

11:06 PM Sep 30, 2020 | mahesh |

ಮಲ್ಪೆ: ಕಳೆದ ಋತುವಿನಲ್ಲಿ ಭಾರೀ ಸುದ್ದಿ ಮಾಡಿದ ಕಾರ್ಗಿಲ್‌ ಮೀನುಗಳು ಈ ಸಲವೂ ಭಾರೀ ಪ್ರಮಾಣದಲ್ಲಿ ಮೀನುಗಾರರ ಬಲೆಗೆ ಬಿದ್ದಿವೆ. ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟುಗಳಿಗೆ ಅಪಾರ ಪ್ರಮಾಣದಲ್ಲಿ ಕಾರ್ಗಿಲ್‌ ಮೀನು ಗಳು ಬಲೆಗೆ ಬೀಳುತ್ತಿವೆ. ಇವುಗಳು ತಿನ್ನಲು ಯೋಗ್ಯವಿಲ್ಲದ್ದರಿಂದ ಫಿಶ್‌ಮೀಲ್‌ಗೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿವೆ.

Advertisement

10 ರಿಂದ 40 ಟನ್‌ ಮೀನು
ಪ್ರಸ್ತುತ ಮಲ್ಪೆ ಬಂದರಿನಲ್ಲಿ ಇದು ಕೆ.ಜಿ.ಗೆ 15 ರೂ.ಗೆ ಮಾರಾಟವಾಗುತ್ತಿವೆ. ಬೋಟುಗಳಿಗೆ 10ರಿಂದ 40 ಟನ್‌ಗಳಷ್ಟು ಮೀನುಗಳು ದೊರೆಯುತ್ತಿವೆ. ಒಂದೆರಡು ಬೋಟಿಗೆ 70 ಟನ್‌ ದೊರೆತಿದ್ದೂ ಇದೆ. ವಿಪರೀತ ವಾಸನೆ ಹೊಂದಿರುವ ಕಪ್ಪು ಬಣ್ಣದ ಮೀನನ್ನು ಬೇರೆ ಮೀನುಗಳ ಜತೆ ಸೇರಿಸಿದರೆ ಅದರ ಬಣ್ಣ ಮತ್ತು ರುಚಿಯನ್ನು ಕಳೆದುಕೊಳ್ಳುತ್ತದೆ. ವಾರದ ಹಿಂದೆ ಅರಬೀ ಸಮುದ್ರದಲ್ಲಿ ಗಾಳಿಯ ರಭಸ ಹೆಚ್ಚಾಗಿತ್ತು. ಹೀಗಾಗಿ ಲಕ್ಷ ದ್ವೀಪಗಳಲ್ಲಿರುವ ಕಾರ್ಗಿಲ್‌ ಮೀನುಗಳು ಉತ್ತರ ದಿಕ್ಕಿನತ್ತ ಚಲಿಸಿರುವುದರಿಂದ ಇವು ಹೆಚ್ಚು ಲಭ್ಯವಾಗಲು ಕಾರಣ ಎನ್ನಲಾಗಿದೆ.

ಹವಳ ಬಂಡೆಯಡಿ ಇವುಗಳ ವಾಸ
ಈ ಮೀನಿನ ವೈಜ್ಞಾನಿಕ ಹೆಸರು ಒಡನಸ್‌ ನಿಗರ್‌, 1999ರ ಕಾರ್ಗಿಲ್‌ ಯುದ್ದದ ಸಮಯದಲ್ಲಿ ಹೊಸದಾಗಿ ಕಾಣಸಿಕ್ಕಿದ್ದರಿಂದ ಸ್ಥಳೀಯವಾಗಿ “ಕಾರ್ಗಿಲ್‌’ ಎಂದು ಕರೆಯುತ್ತಾರೆ. ಇವುಗಳು ಸಮುದ್ರದಲ್ಲಿ 30ರಿಂದ 40 ಮೀ. ಆಳದಲ್ಲಿರುವ ಹವಳದ ಬಂಡೆಯಡಿ ವಾಸವಾಗಿದ್ದು ಅಲ್ಲಿಯೇ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ನಡೆಸುತ್ತವೆ. ಹವಳದ ಬಂಡೆಗಳು ಮಹಾರಾಷ್ಟ್ರ, ಗೋವಾ, ಗುಜರಾತ್‌, ಕೇರಳ, ಲಕ್ಷದ್ವೀಪ ಮತ್ತು ಕರ್ನಾಟಕ ಭಾಗದ ಸಮುದ್ರದಲ್ಲೂ ಕಂಡುಬರುತ್ತದೆ.

ಆಹಾರ ಅರಸುತ್ತ ಬರುವ ಮೀನುಗಳು
ಜೂಪ್ಲಾನ್‌ಟನ್‌ ಎನ್ನುವ ಸೂಕ್ಷ್ಮ ಸಮುದ್ರ ಜೀವಿ ಇದರ ಮುಖ್ಯ ಆಹಾರ. ಬಂಗುಡೆ, ಬೂತಾಯಿ ಮೀನುಗಳು ಕೂಡ ಈ ಆಹಾರವನ್ನೇ ಸೇವಿಸುತ್ತವೆ. ಆದರೆ ಇದೀಗ ಸಮುದ್ರದಲ್ಲಿ ಬಂಗುಡೆ, ಬೂತಾಯಿ ಮೀನುಗಳ ಸಂಖ್ಯೆ ತೀರ ಇಳಿಮುಖವಾಗಿದ್ದರಿಂದ ಅವುಗಳ ಆಹಾರ ಕಾರ್ಗಿಲ್‌ ಮೀನಿನ ಪಾಲಾಗುತ್ತಿದ್ದು ದೊಡ್ಡ ಪ್ರಮಾಣದಲ್ಲಿ ಗುಂಪಾಗಿ ಆಹಾರವನ್ನು
ಅರಸುತ್ತ ಬರುತ್ತವೆ.
-ಡಾ| ಶಿವಕುಮಾರ್‌ ಹರಗಿ, ಸಹಾಯಕ ಪ್ರೊಫೆಸರ್‌, ಕಡಲಶಾಸ್ತ್ರ ವಿಭಾಗ, ಕಾರವಾರ

Advertisement

Udayavani is now on Telegram. Click here to join our channel and stay updated with the latest news.

Next