Advertisement

ಇಂದಿನ ಮಕ್ಕಳೇ ಮುಂದಿನ ಇಂಜಿನಿಯರುಗಳು!

12:30 AM Jan 25, 2019 | |

ನನ್ನ ಮಗ, “”ಅಮ್ಮ ನಾನೀಗ ಏನು ಮಾಡಬೇಕು” ಎಂದು ಕೇಳಿದ ಪ್ರಶ್ನೆ ನನಗೆ ನಿಜವಾಗಿಯೂ ಗಂಭೀರವಾಗಿ ಯೋಚಿಸುವಂತೆ ಮಾಡಿತ್ತು. ಹಬ್ಬ ಮತ್ತು ಬಂದ್‌ ಒಟ್ಟಿಗೇ ಬಂದದ್ದರಿಂದ ನಾಲ್ಕು ದಿನ ರಜೆ ಬಂದಿತ್ತು. ಟೆಸ್ಟ್‌ ಇಲ್ಲ ಪರೀಕ್ಷೆ ಹಾಗೂ ಹೋಮ್‌ವರ್ಕ್‌ ಕೂಡ ಇಲ್ಲ. ಮತ್ತೇನು ಮಾಡುವುದು? ಬೆಳಿಗ್ಗೆ ಏಳಿಸಿದರೆ, “”ಎದ್ದು ಏನು ಮಾಡಬೇಕು” ಅಂತಾನೆ. “”ಸೂರ್ಯ ನೋಡೋ ಎಷ್ಟು ಚೆನ್ನಾಗಿ ಹುಟ್ಟುತ್ತ ಇದ್ದಾನೆ” ಅಂದರೆ “”ಏ ಬಿಡು, ಯಾರೂ ಕಾಣದೇ ಇರುವ ಸೂರ್ಯ” ಅಂತ ಹೇಳಿ ಹೊದ್ದು ಮಲಗುತ್ತಾನೆ. “”ಮಂಜು, ನೋಡು ಎಲೆ ಮೇಲೆ ಎಷ್ಟು ಚೆನ್ನಾಗಿ ಬಿದ್ದಿದೆ” ಅಂದರೆ “”ಫೋಟೋ ತೆಗೆಯಲು ಅಪ್ಪನ ಮೊಬೈಲ್‌ ಇಲ್ಲ” ಅಂತ ಉತ್ತರ. ಸ್ವಲ್ಪ ಹೊತ್ತು ಬಿಟ್ಟು ಎಬ್ಬಿಸೋಣ ಅಂದರೆ ಮತ್ತೆ ಗೊರಕೆ. ಇವನಿಗೆ ಬೆಳಿಗ್ಗೆ ಎಬ್ಬಿಸಲು ಹೇಗೆ ಉತ್ತೇಜನ ಕೊಡಬೇಕೋ ಗೊತ್ತಿಲ್ಲ. ಬೆಳಿಗ್ಗೆ ಎದ್ದವನೇ ಟಿವಿ ಮುಂದೆ ಜಪ ಮಾಡುತ್ತಾನೆ. “”ಸ್ವಲ್ಪ ಗಿಡಕ್ಕೆ ನೀರು ಬಿಡು, ಗಿಡ ಒಣಗುತ್ತ ಇದೆ. ನಾನು ಅಡುಗೆ ಮಾಡಬೇಕು” ಎಂದರೆ, “”ನಿನಗೆ ಯಾವನು ಗಿಡ ನೆಡು ಅಂದ” ಅಂತ ಹೇಳಿ ಮತ್ತೆ ಟಿವಿ ಒಳಗೆ ನುಗ್ಗಿ ಬಿಡುತ್ತಾನೆ. ಬೆಳಿಗ್ಗೆ 9 ಗಂಟೆಗೆಲ್ಲ ದೋಸ್ತಿಗಳ ದಂಡೇ ಹಾಜರು. ಹನ್ನೊಂದು ಗಂಟೆಯಾದರೂ ತಿಂಡಿ ತಿನ್ನುವುದಿಲ್ಲ. “”ನನಗೆ ಹಸಿವೆ ಇಲ್ಲ ತಡೆದುಕೋ” ಎನ್ನುವ ಉತ್ತರ. ಆಕಸ್ಮಾತ್‌ ದೋಸ್ತರು ಬಾರದಿದ್ದರೆ ಮತ್ತೆ ಟಿವಿ ಮುಂದೆ ಗೂಟಾ. “”ಎದ್ದೇಳು, ಪುಸ್ತಕ ಬಟ್ಟೆ ಸರಿಯಾಗಿ ಜೋಡಿಸು” ಎಂದರೆ “”ವದರಬೇಡ, ತಡೆದುಕೋ ಹತ್ತು ನಿಮಿಷ ಟಿವಿ ನೋಡಿ ಬರುತ್ತೀವಿ. ಅಥವಾ ನಾವು ಸಿಡಿ ನೋಡುತ್ತಿದ್ದೀವಿ, ಪಾಠಕ್ಕೆ ಸಂಬಂಧಪಟ್ಟಿದ್ದು, ಮುಗಿದ ಮೇಲೆ ಬರುತ್ತೀನಿ” ಅಂತ ಉತ್ತರ.

Advertisement

ಮಧ್ಯಾಹ್ನ ಮತ್ತೆ ಶುರು “”ಅಮ್ಮ ನಾನು ಏನು ಮಾಡಲಿ?” “”ನಿನ್ನ ಡ್ರಾಯಿಂಗ್‌ ಸರ್‌ ಸಿಕ್ಕಿದ್ದರು. ಕ್ಲಾಸ್‌ಗೆ ಹೋಗಬೇಕಂತೆ”. “”ನನ್ನನ್ನು ಸ್ಪರ್ಧೆಗೆ ಕಳುಹಿಸುವುದಿಲ್ಲ. ನಾನು ಏಕೆ ಕ್ಲಾಸ್‌ಗೆ ಹೋಗಲಿ ಸುಮ್ಮನೆ ಟೈಮ್‌ ವೇಸ್ಟ್‌” ಅಂತ ಉತ್ತರ. “”ಎಷ್ಟೊಂದು ಕಥೆಪುಸ್ತಕ ಇದೆಯಲ್ಲ ಓದು” ಅಂದರೆ, “”ಅಯ್ಯ ಅದೇ ಯಾವುದೋ ಆಂಜನೇಯನಿಗೆ ಹುಟ್ಟಿದ ತಕ್ಷಣ ಹಸಿವಾಯಿತಂತೆ, ಸೂರ್ಯನನ್ನು ನೋಡಿ ಹಣ್ಣು ಅಂದುಕೊಂಡು ತಿನ್ನಲು ಹೋದನಂತೆ. ಆವಾಗ ಇಂದ್ರ ಆಯುಧದಲ್ಲಿ ಮುಖಕ್ಕೆ ಹೊಡೆದನಂತೆ. ಮುಖ ಊದಿಕೊಂಡಿತಂತೆ. ಏನು? ಆಂಜನೇಯ ಅಷ್ಟೊಂದು ಮಬ್ಬೇನಮ್ಮ? ಹೋಗು ಅಂತಹ ಕತೆ ಯಾರು ಓದುತ್ತಾರೆ!”

ಪ್ರತೀ ಭಾನುವಾರ ವಿದ್ಯಾರ್ಥಿ ಮಿತ್ರ ಪತ್ರಿಕೆಯಲ್ಲಿ ಸಾಧಕರ ಬಗ್ಗೆ ವಿಶೇಷ ಲೇಖನವಿರುತ್ತದೆ. ಕರ್ನಾಟಕದಿಂದ ಪಾಸಾದ ಒಂದೇ ಕೈಯಿಂದ ಐಎಎಸ್‌ ಬರೆದ ಗಿರೀಶ್‌ ಅವರ ಬಗ್ಗೆ ಲೇಖನವಿತ್ತು. ನನ್ನ ಮಗ ಮತ್ತು ಅವನ ಗೆಳೆಯರ ಗುಂಪಿಗೆ, “ಈ ಲೇಖನ ಓದಿರೋ’ ಅಂದೆ. ಈ ಲೇಖನದಿಂದ ಸ್ಫೂರ್ತಿ ಬರಲಿ ಅನ್ನುವ ಉದ್ದೇಶ ನನ್ನದು. ಪಾಪ, ಇಂಗ್ಲಿಷ್‌ ಮೀಡಿಯಂ ಹುಡುಗರು ಅರ್ಧ ಲೇಖನ ಓದುವಷ್ಟರಲ್ಲಿ ಒಂದು ಗಂಟೆ ಹಿಡಿಯಿತು. ಅವರು ತಡವರಿಸಿ ಕನ್ನಡ ಓದುವಾಗ ನನಗೆ ಒಳ್ಳೆಯ ಮಜಾ ಬರುತ್ತಿತ್ತು. “”ಓದಿ ಆಯಿತು” ಎಂದು ನನ್ನ ಮಗ “ಎಷ್ಟು ಕಷ್ಟಪಟ್ಟು ಎಡಗೈಯಿಂದ ಪರೀಕ್ಷೆ ಬರೆದು ಪಾಸಾದರು ಗಿರೀಶ್‌ ಗೊತ್ತಾಯಿತೇನೋ’ ಎಂದೆ. “ಅದಕ್ಕೆ ಏನೀಗ?” ಅಂತ ಹೇಳಿ ಇಬ್ಬರೂ ಓಡಿ ಹೋದರು. ಭಗವಂತ… ಈ ಹುಡುಗನಿಗೆ ಏನು ಮಾಡುವುದು ಅಂತ ತಲೆ ಚಚ್ಚಿಕೊಂಡೆ.

ನಾನು ಪ್ರೈಮರಿಯಲ್ಲಿ ಇದ್ದಾಗ ಟಿವಿ ಹಾಗೂ ಮೊಬೈಲು ಇರಲಿಲ್ಲ. ಶಾಲೆಯ ಮೈದಾನದಲ್ಲೋ ಅಥವಾ ನಮ್ಮನೆಯಲ್ಲೋ ಗೆಳತಿಯರೆಲ್ಲ ಸೇರಿಕೊಂಡು ದೊಡ್ಡ ಮಾವಿನ ಮರದಡಿಯಲ್ಲಿ ಕೂತು ಅಡುಗೆ ಆಟ ಆಡುತ್ತಿದ್ದೆವು. ಮನೆಯಲ್ಲಿ ಒಪ್ಪಿದರೆ ಕಾವೇರಿ ನದಿಯಲ್ಲಿ ಆಡಿ ಬರುತ್ತಿದ್ದೆವು. ಆಗ ನದಿ ಹೊಲಸು ನೀರಿನಿಂದ ಮಲಿನವಾಗಿರಲಿಲ್ಲ. ಮಳೆಗಾಲ ಶುರು ಆಯಿತೆಂದರೆ ಮುಗೀತು. ಯಾರ ಮನೆಯಲ್ಲಿ ಯಾವ ಬಣ್ಣದ ಸ್ಫಟಿಕ, ಸೇವಂತಿಗೆ, ಡೇರೆ ಹೂವಿನ ಗಿಡವಿದೆ, ಯಾವ ತರಕಾರಿ ಬೀಜವಿದೆ ಎಂದು ಸಂಗ್ರಹಿಸುತ್ತಿದ್ದೆವು. ಮನೆ ಮುಂದಿನ ಅಂಗಳದಲ್ಲಿ ನಾವೇ ಗುದ್ದಲಿ ಹಾಕಿ ತೆಗೆದುಕೊಂಡು ಮಣ್ಣು ಹದ ಮಾಡಿ ಬೀಜ ಹಾಕಿ ನೀರು ಉಣಿಸಿದ ಖುಷಿ ಇನ್ನೂ ಮರೆಯಲು ಸಾಧ್ಯವಿಲ್ಲ. ಬೆಳಿಗ್ಗೆ ಎದ್ದ ತಕ್ಷಣ ಬೀಜ ಯಾವಾಗ ಮೊಳಕೆ ಬರುತ್ತದೆ ಅಂತ ಕಾಯುವುದೇ ಕೆಲಸ. ಆಮೇಲೆ ಯಾವ ಬಣ್ಣದ ಹೂ ಬಿಡುತ್ತದೆ ಅನ್ನುವ ಕುತೂಹಲ. ಹುಡುಗಿಯರ ಜಡೆ ತುಂಬಾ ಬಣ್ಣ ಬಣ್ಣದ ಸ್ಫಟಿಕ ಹೂವು ರಾರಾಜಿಸುತ್ತಿತ್ತು. ಈಗಿನಂತೆ ಹಣೆಗೆ ಕುಂಕುಮ ಇಡಬೇಡಿ, ಹೂ ಮುಡಿಯಬೇಡಿ ಅನ್ನುವ ನಿಯಮಗಳು ಶಾಲೆಯಲ್ಲಿ ಇರಲಿಲ್ಲ. ಶಾಲೆಯ ಕೈತೋಟವನ್ನು ರಜೆ ದಿನಗಳಲ್ಲಿಯೂ ನೀರು ಹಾಕಿ ಜೋಪಾನ ಮಾಡುತ್ತಿದ್ದೆವು. ಈಗಿನ ಶಾಲೆಗಳು ಮಹಡಿಯ ಮೇಲೆ ಇರುವುದರಿಂದ ಆಟದ ಮೈದಾನವೂ ಇರುವುದಿಲ್ಲ. ಹೆಡ್‌ಮಾಸ್ಟರ್‌ ಕೊಠಡಿಯಲ್ಲಿ ಮನಿಪ್ಲಾಂಟ್‌ ಗಿಡ ಅಥವಾ ಗಿಡ ತರ ಕಾಣುವ ಪ್ಲಾಸ್ಟಿಕ್‌ ಗಿಡಗಳಿಂದ ಅಲಂಕಾರವಾಗಿರುತ್ತದೆ ಅಷ್ಟೇ. ಎಲ್ಲ ತರದ ಆಟಗಳು ಮಕ್ಕಳ ವಿಡಿಯೋ ಗೇಮ್‌ ಮೂಲಕ ನಡೆಯುತ್ತದೆ. 95 ಶೇ.ಕ್ಕಿಂತ ಮೇಲೆ ಅಂಕ ಪಡೆದರೆ ಮಾತ್ರ ಉಚಿತ ಸೀಟು ಕಾಲೇಜಿಗೆ ಸಿಗುವುದರಿಂದ ಪುಸ್ತಕ ಮುಂದೆ ಕೂರುವುದು, ಇಂಟರ್‌ನೆಟ್‌ ಅಥವಾ ಟಿವಿ ಮುಂದೆ ಧ್ಯಾನ ನಡೆಯುತ್ತದೆ.

ಬೇಸಿಗೆ ರಜೆಯಲ್ಲಿ ಮೈಸೂರಿನಲ್ಲಿರುವ ಗೆಳತಿಯ ಮನೆಗೆ ಹೋಗಿದ್ದೆ. ಅವಳು ನಂಜನಗೂಡಿಗೆ ಹೋಗುವ ರಸ್ತೆಯಲ್ಲಿ ಮನೆಕಟ್ಟಿಸುತ್ತ ಇದ್ದಾಳೆ. ಮನೆ ಪಕ್ಕದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಇದೆ. ಅಲ್ಲಿ ನರ್ಸಿಂಗ್‌ ವಿದ್ಯಾರ್ಥಿನಿಯರಿಗೆ ಪಿಜಿ ಹಾಸ್ಟೆಲ್‌ ಮಾಡಿದ್ದಾರೆ. ಒಂದೇ ತರಹದ ಬಟ್ಟೆ ಧರಿಸಿದ ಹೆಣ್ಣು ಹುಡುಗಿಯರು ಸಂಜೆಯಾಗಿದ್ದರಿಂದ ಕಟ್ಟಡದ ಬಾಲ್ಕನಿ ತುಂಬಾ ನಿಂತಿದ್ದರು. ನಾಲ್ಕನೇ ಮಹಡಿಯ ಒಂದೆರಡು ಕಿಟಕಿಯಿಂದ ಪ್ಲಾಸ್ಟಿಕ್‌ ಡಬ್ಬಿಯಲ್ಲಿ ಗಿಡಗಳು ನೇತಾಡುತ್ತಿದ್ದವು. ನಾನು ಗೆಳತಿಗೆ “”ಅಲ್ಲಿ ನೋಡೇ, ನರ್ಸಿಂಗ್‌ ಹುಡುಗಿಯರು ನಾಲ್ಕನೇ ಮಹಡಿಯಲ್ಲಿ ಅದೂ ಹಾಸ್ಟೆಲ್‌ನಲ್ಲಿ ಗಿಡ ಬೆಳೆಸಿದ್ದಾರೆ ಆಶ್ಚರ್ಯ” ಅಂದೆ. ಅವಳು “”ಗಿಡಗಳ ಮೇಲೆ ಪ್ರೀತಿ ಕಣೆ! ಅದೇ ಸಂಸ್ಕಾರ ಎಲ್ಲಿ ಹೋದರೂ ಬಿಡಲ್ಲ” ಅಂದಳು. ನಾವು ನಮ್ಮ ಮಕ್ಕಳಲ್ಲಿ ಈ ರೀತಿಯ ಸಂಸ್ಕಾರ ಹೇಗೆ ಬಿತ್ತಬೇಕು ಹೇಳಿ.

Advertisement

ಎಸ್‌. ಬಿ. ಅನುರಾಧಾ

Advertisement

Udayavani is now on Telegram. Click here to join our channel and stay updated with the latest news.

Next