Advertisement

Special School: ವಿಶೇಷ ಚೇತನ ಮಕ್ಕಳ ಬೋಧಕರಿಗೆ 10 ತಿಂಗಳಿಗಷ್ಟೇ ವೇತನ

03:35 AM Dec 13, 2024 | Team Udayavani |

ಉಡುಪಿ: ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ವಿಶೇಷ ಶಾಲೆ ಗಳಲ್ಲಿ 300 ಮಂದಿ ನೇರ ಗುತ್ತಿಗೆ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಈ ವರ್ಷದಿಂದ ಅವರ 2 ತಿಂಗಳ ವೇತನಕ್ಕೆ ಕತ್ತರಿ ಬೀಳಲಿದೆ.

Advertisement

ನೇರ ಗುತ್ತಿಗೆ ಶಿಕ್ಷಕರಿಗೆ 2018ರಿಂದ ಹೈಕೋರ್ಟ್‌ ಆದೇಶದನ್ವಯ ಪ್ರತಿ ವರ್ಷದ ಜೂ.1 ರಿಂದ ಮೇ 31ರ ವರೆಗೆ ವೇತನ ನೀಡಬೇಕು ಎಂದು ಹಿಂದಿನ ಶಾಲಾ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳ ಆದೇಶ ತಿಳಿಸುತ್ತದೆ. 2023ರ ಆದೇಶದವರೆಗೂ ಇದು ಜಾರಿಯಲ್ಲಿತ್ತು. ಆದರೆ 2024ರ ಗುತ್ತಿಗೆ ಆದೇಶದಲ್ಲಿ 12 ತಿಂಗಳು ಬದಲಾಗಿ 10 ತಿಂಗಳಿಗೆ ಸೀಮಿತ ಗೊಳಿಸಲಾಗಿದೆ.

ಹಿಂದೆ ಮೇ 31ರ ಇದ್ದ ಗುತ್ತಿಗೆ ಅವಧಿಯನ್ನು ಹೊಸ ಆದೇಶದಲ್ಲಿ ಮಾರ್ಚ್‌ 31 ಕ್ಕೆ ನಿಗದಿಪಡಿಸಲಾಗಿದೆ. ಹೀಗಾಗಿ ಎರಡು ತಿಂಗಳು ಕಡಿತಗೊಂಡಿದೆ. ಇವರಿಗೆ ಡಿಡಿಪಿಐ ಕಚೇರಿ ಯಿಂದ ಪಡೆಯುವ ವೇತನ ಹೊರತು ಪಡಿಸಿ ಪಿಎಫ್, ಇಎಸ್‌ಐ ಸಹಿತ ಯಾವುದೇ ಸವಲತ್ತುಗಳಿಲ್ಲ. ಪ್ರೊಫೆಷನಲ್‌ ತೆರಿಗೆ ಎಂದು 200 ರೂ. ಕಡಿತಗೊಳಿಸಲಾಗುತ್ತಿದೆ. ರಾಜ್ಯದಲ್ಲಿ 1ರಿಂದ 12ನೇ ತರಗತಿ ವರೆಗೆ 43,719 ಅಂಗವಿಕಲ ವಿದ್ಯಾರ್ಥಿಗಳು ಸಾಮಾನ್ಯ ಶಾಲೆಗೆ ದಾಖಲಾಗಿದ್ದಾರೆ.

ಪ್ರಾಥಮಿಕ 58 ಮತ್ತು ಪ್ರೌಢಶಾಲೆ ವಿಭಾಗದಲ್ಲಿ 242 ಮಂದಿ ಶಿಕ್ಷಕರಿದ್ದಾರೆ. 188 ಪುರುಷ, 112 ಮಹಿಳಾ ಶಿಕ್ಷಕರಿದ್ದು, 15ರಿಂದ 20 ವರ್ಷಗಳಿಂದ ಸ್ವಯಂಸೇವಾ ಸಂಸ್ಥೆಗಳ ಮೂಲಕ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರನ್ನು 2018ರ ಜೂ.1 ರಿಂದ ನೇರಗುತ್ತಿಗೆಗೆ ವಹಿಸಲಾಗಿದೆ. ಪ್ರಾಥಮಿಕ ಶಿಕ್ಷಕರಿಗೆ 15 ಸಾವಿರ ರೂ., ಪ್ರೌಢ ಶಿಕ್ಷಕರಿಗೆ 25 ಸಾವಿರ ರೂ. ಮಾಸಿಕ ಗೌರವಧನ ಪ್ರಸ್ತುತ ನೀಡಲಾಗುತ್ತಿದೆ.

ಶಾಲೆಗಳಲ್ಲಿ ಇವರದ್ದೇ ಪ್ರಮುಖ ಪಾತ್ರ
ಅಂಗ ವೈಕಲ್ಯವಿರುವ ಮಕ್ಕಳಿಗೆ ಬೋಧಿಸಲು ವಿಶೇಷ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಿ ಕೊಳ್ಳಬೇಕು ಎಂದು ರಿಟ್‌ ಅರ್ಜಿ ಯೊಂದನ್ನು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ 2021ರಲ್ಲಿ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆಗಳಿಗೆ ತಲಾ ಇಬ್ಬರು ಶಿಕ್ಷಕರನ್ನು ಮಾತ್ರ ನಿಯೋಜಿಸಲಾಗಿತ್ತು. ವೇತನ ಕಡಿಮೆ ಎಂಬ ಕಾರಣಕ್ಕೆ ಹೆಚ್ಚಿನ ಶಿಕ್ಷಕರು ಕೆಲಸವನ್ನು ಬಿಟ್ಟಿದ್ದಾರೆ. ಆದಕಾರಣ ನೇರ ಗುತ್ತಿಗೆಯಾಧಾರಿತ ವಿಶೇಷ ಸಂಪನ್ಮೂಲ ಶಿಕ್ಷಕರು ವಿಶಿಷ್ಟ ಚೇತನಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

Advertisement

ಮಹಾರಾಷ್ಟ್ರದಲ್ಲಿ ಜಾರಿ
ಸುಪ್ರೀಂಕೋರ್ಟ್‌ ಆದೇಶದ ಬಳಿಕ ಮಹಾರಾಷ್ಟ್ರದಲ್ಲಿ 4,860 ಹೊಸ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಜತೆಗೆ ಲಭ್ಯವಿರುವ ಬೋಧಕ ಹುದ್ದೆ ಗಳಲ್ಲಿ ವಿಶಿಷ್ಟ ಚೇತನ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕರ ಉದ್ಯೋಗವನ್ನು ಖಾಯಂಗೊಳಿಸಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೇರಗುತ್ತಿಗೆ ವಿಶೇಷ ಶಿಕ್ಷಕರನ್ನು ಖಾಯಂ ಮಾಡಬೇಕು ಎಂದು ನೇರ ಗುತ್ತಿಗೆ ನೌಕರರ ಸಂಘ ಸರಕಾರವನ್ನು ಆಗ್ರಹಿಸಿದೆ. ಆದರೂ ರಾಜ್ಯಸರಕಾರ ಇನ್ನೂ ಖಾಯಂಗೊಳಿಸುವ ತೀರ್ಮಾನ ಕೈಗೊಳ್ಳದಿರುವುದು ತಾತ್ಕಾಲಿಕ ಶಿಕ್ಷಕರ ಆತಂಕಕ್ಕೆ ಕಾರಣವಾಗಿದೆ.

ಸಮಸ್ಯೆಯಾಗದು
ಶಿಕ್ಷಕರ ಆತಂಕ ಗಮನಕ್ಕೆ ಬಂದಿದೆ. ಹೊಸ ಆದೇಶದಿಂದ ಶಿಕ್ಷಕರಿಗೆ ಆಗುವ ವೇತನ ಕಡಿತ ತೊಂದರೆಯನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು.
-ಮಾದೇಗೌಡ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ. ಬೆಂಗಳೂರು

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next