Advertisement

ಇಂದು ವಿರಳ ಸಂಚಾರ ದಿನ

12:02 PM Feb 11, 2018 | |

ಬೆಂಗಳೂರು: ವಾಯು ಮಾಲಿನ್ಯ ನಿಯಂತ್ರಿಸುವ ಜತೆಗೆ ಸಾರ್ವಜನಿಕ ಸಾರಿಗೆ ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಘೋಷಿಸಿರುವ ವಿರಳ ಸಂಚಾರ ದಿನ ಆಚರಣೆಗೆ ಬೆಂಗಳೂರು ಸಜ್ಜಾಗಿದೆ. 

Advertisement

ಪ್ರತಿ ತಿಂಗಳು ಎರಡನೇ ಭಾನುವಾರ ವಿರಳ ಸಂಚಾರ ದಿನ ನಡೆಯಲಿದೆ. ಸಾರಿಗೆ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನಗರ ಸಂಚಾರ ಪೊಲೀಸ್‌ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡಿರುವ ಈ ಅಭಿಯಾನದ ಮೊದಲ ಆವೃತ್ತಿಗೆ ಭಾನುವಾರ ಚಾಲನೆ ದೊರೆಯಲಿದೆ.

ಇಂದು ಬೆಳಗ್ಗೆ 9 ಗಂಟೆಗೆ ವಿಧಾನಸೌಧದ ಮುಖ್ಯ ದ್ವಾರದಲ್ಲಿ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಚಿವರಾದ ಕೆ.ಜೆ.ಜಾರ್ಜ್‌, ರಾಮಲಿಂಗಾ ರೆಡ್ಡಿ, ರಮಾನಾಥ ರೈ, ಮೇಯರ್‌ ಆರ್‌. ಸಂಪತ್‌ರಾಜ್‌, ಶಾಸಕ ಕೆ. ಗೋವಿಂದರಾಜು, ಸಂಸದ ಪಿ.ಸಿ. ಮೋಹನ್‌, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್‌ ಭಾಗವಹಿಸಲಿದ್ದಾರೆ.

ಇದೇ ವೇಳೆ ವಿಧಾನಸೌಧ ಮುಂಭಾಗದಿಂದ ಕಂಠೀರವ ಕ್ರೀಡಾಂಗಣದವರೆಗೆ ಬೈಸಿಕಲ್‌ ಮತ್ತು ಎಲೆಕ್ಟ್ರಿಕ್‌ ವಾಹನಗಳ ಜಾಥಾ ಹೊರಡಲಿದೆ. ವಿವಿಧ ಇಲಾಖೆ ಸಿಬ್ಬಂದಿ ಸೇರಿ ಜಾಥಾದಲ್ಲಿ ಸಾವಿರ ಜನ ಪಾಲ್ಗೊಳ್ಳಲಿದ್ದಾರೆ. 

ಯೋಗರಾಜ ಭಟ್ಟರ ಕವನ: ವಿರಳ ಸಂಚಾರ ದಿನಾಚರಣೆಗೆ ನಟ ಯಶ್‌ ರಾಯಭಾರಿಯಾಗಿದ್ದು, ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಈ ಅಭಿಯಾನಕ್ಕೆ ಸಾಥ್‌ ನೀಡಿದ್ದಾರೆ. ಅಲ್ಲದೆ, ನಿರ್ದೇಶಕ ಯೋಗರಾಜ್‌ ಭಟ್‌ ಕವನ ರಚಿಸುವ ಮೂಲಕ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದ್ದಾರೆ. ವಿವಿಧ ಬಡಾವಣೆಗಳ ಕ್ಷೇಮಾಭಿವೃದ್ಧಿ ಸಂಘಗಳು, ಸರ್ಕಾರೇತರ ಸಂಘ-ಸಂಸ್ಥೆಗಳೂ ಕಾರ್ಯಕ್ರಮಕ್ಕೆ ಕೈಜೋಡಿಸಿವೆ.

Advertisement

ನಗರದಲ್ಲಿರುವ 72 ಲಕ್ಷ ವಾಹನಗಳ ಪೈಕಿ 56 ಲಕ್ಷ ಖಾಸಗಿ ವಾಹನಗಳಿವೆ. ಒಂದು ದಿನದ ಮಟ್ಟಿಗೆ ಈ ವಾಹನಗಳು ರಸ್ತೆಗಿಳಿಯದಿದ್ದರೆ, ಸಾಕಷ್ಟು ಪ್ರಮಾಣದಲ್ಲಿ ವಾಯುಮಾಲಿನ್ಯ ತಗ್ಗಲಿದೆ. ಡೀಸೆಲ್‌ ಉಳಿತಾಯ ಆಗಲಿದೆ. ಸರ್ಕಾರದ ಈ ಕ್ರಮಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆಯುವ ವಿಶ್ವಾಸ ಇದೆ ಎಂದು ಸಚಿವ ರೇವಣ್ಣ ತಿಳಿಸಿದ್ದಾರೆ.   

ಪ್ರಯಾಣ ದರದಲ್ಲಿ ರಿಯಾಯ್ತಿ: ವಿರಳ ಸಂಚಾರ ದಿನದ ಪ್ರಯುಕ್ತ ಬಿಎಂಟಿಸಿ ದೈನಂದಿನ ಪಾಸು ಮತ್ತು “ನಮ್ಮ ಮೆಟ್ರೋ’ ಸ್ಮಾರ್ಟ್‌ಕಾರ್ಡ್‌ ಹೊಂದಿದವರಿಗೆ ಪ್ರಯಾಣ ದರದಲ್ಲಿ ರಿಯಾಯ್ತಿ ಕಲ್ಪಿಸಲಾಗಿದೆ. ವಿರಳ ಸಂಚಾರ ದಿನ ಪ್ರೋತ್ಸಾಹಿಸಲು ದೈನಂದಿನ ಪಾಸಿನ ದರದಲ್ಲಿ 5 ರೂ. ರಿಯಾಯಿತಿ ನೀಡಲಾಗುತ್ತಿದೆ. ಬಸ್ಸಿನ ಬೇಡಿಕೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಹೆಚ್ಚುವರಿ ಬಸ್ಸುಗಳು ಕಾರ್ಯಾಚರಣೆ ಮಾಡಲಿವೆ. ಇದು ಮೊದಲ ಆವೃತ್ತಿಯಾಗಿದ್ದು, ಹೆಚ್ಚುವರಿ ಬಸ್ಸುಗಳ ಸಂಚಾರಕ್ಕೆ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಅದೇ ರೀತಿ, “ನಮ್ಮ ಮೆಟ್ರೋ’ ರೈಲು ಪ್ರಯಾಣಿಕರು ಸಹ ರಿಯಾಯಿತಿ ದರದಲ್ಲಿ ಸಂಚರಿಸಬಹುದು. ಸ್ಮಾರ್ಟ್‌ ಕಾರ್ಡ್‌ ಬಳಕೆದಾರರಿಗೆ ಶೇ.15ರ ಬದಲಿಗೆ ಶೇ. 25ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮಧ್ಯಂತರ ಅವಧಿಯಲ್ಲಿ ಹೆಚ್ಚಿನ ಸಂಖ್ಯೆ ರೈಲುಗಳನ್ನು ಓಡಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next