Advertisement
ಕಾಂಗ್ರೆಸ್ ನಾಯಕ ಶಂಕರ್‌ಸಿನ್ಹ ವಘೇಲಾ ಬಂಡಾಯ, ಅವರ ಬೆಂಬಲಿತ ಶಾಸಕರ ರಾಜೀನಾಮೆ, 44 ಕಾಂಗ್ರೆಸ್ ಶಾಸಕರ ರೆಸಾರ್ಟ್‌ಯಾನದಂಥ ಹಲವು ನಾಟಕೀಯ ಬೆಳವಣಿಗೆಗಳಿಗೆ ಕಾರಣವಾದ ರಾಜ್ಯಸಭೆ ಚುನಾವಣೆ ಮಂಗಳವಾರ ಮುಗಿಯಲಿದ್ದು, ಎಲ್ಲ ಹೈಡ್ರಾಮಾಗಳಿಗೂ ತೆರೆಬೀಳುವ ಸಮಯ ಬಂದಿದೆ.
Related Articles
1. ಅಹ್ಮದ್ ಪಟೇಲ್:
ಗೆಲ್ಲಲು ಬೇಕಿರುವ ಮತಗಳು- 45
ಸದ್ಯ ರೆಸಾರ್ಟ್‌ನಲ್ಲಿರುವ ಶಾಸಕರ ಸಂಖ್ಯೆ- 44
ಇಲ್ಲಿ ಕಾಂಗ್ರೆಸ್‌ನ ಎಲ್ಲ 44 ಶಾಸಕರೂ ಅಡ್ಡಮತದಾನ ಮಾಡದೇ ಅಥವಾ ನೋಟಾ ಆಯ್ಕೆ ಒತ್ತದೇ ಪಟೇಲ್ ಪರ ಮತ ಚಲಾಯಿಸಿದರೂ ಕಾಂಗ್ರೆಸ್‌ಗೆ ಒಂದು ಮತದ ಕೊರತೆ ಎದುರಾಗುತ್ತದೆ. ಇಬ್ಬರು ಎನ್‌ಸಿಪಿ ಶಾಸಕರು ಮತ್ತು ಜೆಡಿಯು ಹಾಗೂ ಗುಜರಾತ್ ಪರಿವರ್ತನ್ ಪಾರ್ಟಿಯ ತಲಾ ಒಬ್ಬ ಶಾಸಕರ ಬೆಂಬಲದ ಆಸೆಯಲ್ಲಿ ಕಾಂಗ್ರೆಸ್ ಇದೆ. ಗಮನಾರ್ಹ ಅಂಶವೆಂದರೆ, ಪಟೇಲ್ ನಾಮಪತ್ರ ಸಲ್ಲಿಕೆ ವೇಳೆ ಜೆಡಿಯು ಮತ್ತು ಎನ್‌ಸಿಪಿ ಅವರಿಗೆ ಸಾಥ್ ನೀಡಿತ್ತು. ಇನ್ನು ವಘೇಲಾ ಸೇರಿದಂತೆ ಅವರ ಬಣದಲ್ಲಿರುವ 7 ಮಂದಿ ಶಾಸಕರ ಬಗ್ಗೆಯೂ ಕಾಂಗ್ರೆಸ್ ಸಣ್ಣಮಟ್ಟಿಗಿನ ನಿರೀಕ್ಷೆ ಇಟ್ಟುಕೊಂಡಿದೆ.
Advertisement
2. ಅಮಿತ್ ಶಾ ಮತ್ತು ಸ್ಮತಿ ಇರಾನಿ:ವಿಧಾನಸಭೆಯಲ್ಲಿ ಬಿಜೆಪಿ 121 ಶಾಸಕರನ್ನು ಹೊಂದಿರುವ ಕಾರಣ ಇವರಿಬ್ಬರ ಗೆಲುವು ಕಟ್ಟಿಟ್ಟ ಬುತ್ತಿ. 3. ಬಲ್ವಂತ್‌ಸಿಂಗ್ ರಜಪೂತ್:
ರಾಜ್ಯಸಭೆಗೆ ಇದ್ದ ಮೂರು ಹುದ್ದೆಗಳಿಗೆ ನಾಲ್ಕನೇ ಅಭ್ಯರ್ಥಿಯಾಗಿ ಬಲ್ವಂತ್‌ಸಿಂಗ್‌ರನ್ನು ಬಿಜೆಪಿ ಕಣಕ್ಕಿಳಿಸಿದೆ. ಅಹ್ಮದ್ ಪಟೇಲ್‌ರನ್ನು ಸೋಲಿಸಲೆಂದೇ ಕಾಂಗ್ರೆಸ್ ಬಂಡಾಯ ಶಾಸಕ ಬಲ್ವಂತ್‌ರನ್ನು ಕಣಕ್ಕಿಳಿಸಲಾಗಿದೆ. ಲೆಕ್ಕಾಚಾರದ ಪ್ರಕಾರ ಇವರಿಗೆ ಕೇವಲ 31 ಮತಗಳು ಮಾತ್ರವೇ ಸಿಗಲಿದೆ. ವಘೇಲಾ ಅವರು ಬಂಡಾಯವೇಳುವ ಮುನ್ನ ಕಾಂಗ್ರೆಸ್ ಶಾಸಕರ ಸಂಖ್ಯೆ 57 ಇತ್ತು. ವಘೇಲಾ ಬಳಿಕ 6 ಶಾಸಕರು ರಾಜೀನಾಮೆ ನೀಡಿದ್ದರಿಂದ ಕಾಂಗ್ರೆಸ್‌ನ ಬಲಾಬಲ 51ಕ್ಕೆ ಕುಸಿಯಿತು. ಗೆಲ್ಲುವ ವಿಶ್ವಾಸ ಶೇ.100 ರಷ್ಟಿದೆ: ಅಹ್ಮದ್ ಪಟೇಲ್
ನಾನು 44 ಮತಗಳಿಂದಲ್ಲ, ಇನ್ನೂ ಹೆಚ್ಚಿನ ಮತಗಳನ್ನು ಪಡೆದು ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ ಎಂದು ಅಹ್ಮದ್ ಪಟೇಲ್ ಅವರು ಸೋಮವಾರ ಹೇಳಿದ್ದಾರೆ. ಇದು ಯಾರದ್ದೂ ಪ್ರತಿಷ್ಠೆಯ ಚುನಾವಣೆಯಲ್ಲ. ಆದರೆ ನನಗೆ ನಮ್ಮ ಶಾಸಕರ ಮೇಲೆ ಸಂಪೂರ್ಣ ನಂಬಿಕೆಯಿದೆ. 44 ಕಾಂಗ್ರೆಸ್ ಶಾಸಕರಲ್ಲದೆ, ಜೆಡಿಯು ಮತ್ತು ಎನ್‌ಸಿಪಿ ಸದಸ್ಯರೂ ನನ್ನ ಬೆಂಬಲಕ್ಕಿದ್ದಾರೆ. ಕಾಂಗ್ರೆಸ್‌ನ ಇತರೆ ಶಾಸಕರೂ ನನಗೆ ಮತ ನೀಡುತ್ತಾರೆ. ವಘೇಲಾ ಅವರು ಕೂಡ ನನ್ನನ್ನು ಬೆಂಬಲಿಸಲಿದ್ದಾರೆ ಎಂದಿದ್ದಾರೆ ಪಟೇಲ್. ಇದೇ ವೇಳೆ, ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, “ಆಡಳಿತಾರೂಢ ಬಿಜೆಪಿಯು ಕಾಂಗ್ರೆಸ್‌ನ ಶಾಸಕರಿಗೆ ಮತ್ತು ಕುಟುಂಬ ಸದಸ್ಯರಿಗೆ ಚಿತ್ರಹಿಂಸೆ ನೀಡಿ, ಪಕ್ಷಾಂತರ ಮಾಡುವಂತೆ ಕುಮ್ಮಕ್ಕು ನೀಡುತ್ತಿದೆ. ಇದರಿಂದಾಗಿಯೇ ಶಾಸಕರು ಬೆಂಗಳೂರಿಗೆ ಹೋಗಬೇಕಾಗಿ ಬಂತು’ ಎಂದು ಆರೋಪಿಸಿದ್ದಾರೆ. ಗುಜರಾತ್ ರೆಸಾರ್ಟ್‌ನಲ್ಲಿ ಶಾಸಕರು
ಬೆಂಗಳೂರಿನಿಂದ ತೆರಳಿರುವ ಕಾಂಗ್ರೆಸ್‌ನ 44 ಶಾಸಕರು ಸೋಮವಾರ ಬೆಳಗ್ಗೆ ಗುಜರಾತ್‌ನ ಆನಂದ್ ಜಿಲ್ಲೆಯ ನಿಜಾನಂದ ರೆಸಾರ್ಟ್ ತಲುಪಿದ್ದಾರೆ. ಅವರು ಇಲ್ಲಿಯೇ ಕುಟುಂಬ ಸದಸ್ಯರೊಂದಿಗೆ ರಕ್ಷಾಬಂಧನ ಹಬ್ಬವನ್ನೂ ಆಚರಿಸಿದ್ದಾರೆ. ಮಂಗಳವಾರ ನೇರವಾಗಿ ಹಕ್ಕು ಚಲಾಯಿಸಲು ತೆರಳಲಿದ್ದಾರೆ. ಪ್ರತಿ ಮತವೂ ಆಯಾ ಶಾಸಕನ ವೈಯಕ್ತಿಕ ಆಸ್ತಿಯಿದ್ದಂತೆ. ಅಹ್ಮದ್ ಪಟೇಲ್ ಜತೆ ನನಗೆ ಉತ್ತಮ ಬಾಂಧವ್ಯವಿದೆ. ಆದರೆ, ನಾನು ಅವರಿಗೆ ಮತ ಹಾಕುತ್ತೇನೋ, ಇಲ್ಲವೋ ಎನ್ನುವುದು ನನ್ನ ಮನಸ್ಸಿಗೆ ಬಿಟ್ಟಿದ್ದು. ಅದೀಗ ಸೀಕ್ರೆಟ್ ಆಗಿಯೇ ಇರಲಿ.
– ಶಂಕರ್‌ಸಿನ್ಹ ವಘೇಲಾ, ಕಾಂಗ್ರೆಸ್ ಬಂಡಾಯ ಶಾಸಕ ಯೆಚೂರಿಗೆ ತಪ್ಪಿದ ಅವಕಾಶ
ಮಂಗಳವಾರ ರಾಜ್ಯಸಭೆಯ 9 ಸೀಟುಗಳಿಗೆ ಚುನಾವಣೆ ನಡೆಯಲಿದೆ. ಆ ಪೈಕಿ 6 ಸೀಟುಗಳು ಪಶ್ಚಿಮ ಬಂಗಾಳದ್ದು. ಇದು ಒಂದು ಕಾಲದಲ್ಲಿ ಸಿಪಿಎಂನ ಭದ್ರಕೋಟೆ ಎಂದೇ ಪರಿಗಣಿತವಾದ ರಾಜ್ಯ. ಆದರೆ, ಇದೀಗ ಸಿಪಿಎಂ ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಸಂಖ್ಯಾಬಲ ಹೊಂದಿರದ ಕಾರಣ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರನ್ನು ಮೇಲ್ಮನೆಗೆ ಕಳುಹಿಸಲು ಪಕ್ಷಕ್ಕೆ ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ, ಸಿಪಿಎಂನೊಳಗಿನ ಆಂತರಿಕ ಬಿಕ್ಕಟ್ಟು ಕೂಡ ಯೆಚೂರಿ ಅವರಿಗೆ ಅವಕಾಶ ತಪ್ಪಿಸಿದೆ ಎನ್ನಲಾಗಿದೆ.