ಮೈಸೂರು: ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ನಗರದ ಸಂಸದರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ ಸುಮಾರು 80 ಸಾವಿರ ಕುಟುಂಬಗಳು ತಂಬಾಕು ಬೆಳೆಯುತ್ತಿದ್ದು, ಹಲವಾರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ಬೆಳೆಯು ಲಕ್ಷಾಂತರ ಜನಕ್ಕೆ ಉದ್ಯೋಗ ನೀಡಿ, ಸಹಸ್ರಾರು ಕೋಟಿ ವಿವಿಧ ರೀತಿಯ ತೆರಿಗೆ ಕೇಂದ್ರ ಸರ್ಕಾರಕ್ಕೆ ಬರುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ಈ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ತಂಬಾಕು ಬೆಳೆಯುವ ಪ್ರದೇಶಗಳಿಗೆ ಲೋಕಸಭಾ ಸದಸ್ಯರು ಭೇಟಿ ನೀಡಿಲ್ಲ. ಜೊತೆಗೆ ಜವಾಬ್ದಾರಿಯುತವಾಗಿ ಸ್ಪಂದಿಸಿಲ್ಲ. ಇದು ನೋವು ಮತ್ತು ಬೇಸರದಿಂದ ತಂದಿದೆ. ಈಗಲಾದರೂ ಈ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರಕ್ಕೆ ಮುಂದಾಗಬೇಕು. ನ.28ರಂದು ಪಿರಿಯಾಪಟ್ಟಣದಲ್ಲಿ ಆಯೋಜಿಸಿರುವ ತಂಬಾಕು ಬೆಳೆಗಾರರ ಸಮಾವೇಶಕ್ಕೆ ಬರಬೇಕು ಎಂದು ಒತ್ತಾಯಿಸಿದರು.
ಬೇಡಿಕೆಗಳು: ಪ್ರತಿ ಕೆಜಿ ತಂಬಾಕಿಗೆ ಕನಿಷ್ಠ 200 ರೂ. ಬೆಲೆ ನೀಡಬೇಕು. ನೋಂದಾಯಿತವಾಗಿರುವ ಎಲ್ಲ ಕಂಪನಿಗಳು ಮಾರುಕಟ್ಟೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ತಂಬಾಕಿಗೆ ಕನಿಷ್ಠ ಖಾತ್ರಿ ಬೆಲೆ ನಿಗದಿ ಮಾಡಬೇಕು. ಅನ್ಯಾಯದ ದಂಡವನ್ನು ಕೈಬಿಡಬೇಕು. ಕಾರ್ಡುದಾರರಿಗೆ ಲೈಸನ್ಸ್ ನೀಡಬೇಕು. ಕಳ್ಳ ಸಾಗಾಣಿಕೆ ಮೂಲಕ ದೇಶಕ್ಕೆ ಬರುವ ಸಿಗರೇಟ್, ತಂಬಾಕು ಉಪ ಉತ್ಪನ್ನವನ್ನು ತಡೆಯಬೇಕು. ತಂಬಾಕು ರಪ್ತಿಗೆ ಹೆಚ್ಚು ಒತ್ತು ನೀಡಬೇಕು.
ಅತಿವೃಷ್ಟಿ, ಅನಾವೃಷ್ಟಿಯಿಂದ ತಂಬಾಕು ಬೆಳೆ ನಷ್ಟವಾದ್ದಲ್ಲಿ ಪರಿಹಾರ ನೀಡಬೇಕು. ತಂಬಾಕು ಬೆಳೆಯುವ ರೈತರು ಮತ್ತು ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಉಚಿತ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿದರು. ಮನವಿ ಸ್ವೀಕರಿಸಿದ ಸಂಸದರು, “ಈ ಸಮಸ್ಯೆಗೆ ಸ್ಪಂದಿಸಲಾಗುವುದು. ಜತೆಗೆ, ತಂಬಾಕು ಬೆಳೆಗಾರರ ಸಮಾವೇಶಕ್ಕೆ ಬಂದು ಸಮಸ್ಯೆ ಕುರಿತು ಚರ್ಚಿಸಲಾಗುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಮುಗಿಸಲಾಯಿತು.
ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಮುಖಂಡರಾದ ಎಂ.ಎಸ್.ಅಶ್ವಥ್ ನಾರಾಯಣರಾಜೇ ಅರಸ್, ಎಚ್.ಸಿ.ಲೋಕೇಶ್ ರಾಜೇ ಅರಸ್, ಹೊಸೂರ ಕುಮಾರ್, ಹೊಸಕೋಟೆ ಬಸವರಾಜು, ನೇತ್ರಾವತಿ ಇನ್ನಿತರರು ಪ್ರತಿಭಟನೆಯಲ್ಲಿದ್ದರು.