ಹೊಸದಿಲ್ಲಿ: “ಉತ್ತರಪ್ರದೇಶ, ಉತ್ತರಾಖಂಡ ಮತ್ತು ಗೋವಾದಲ್ಲಿ ಮತ್ತೆ ಬಿಜೆಪಿಯ ವಿಜಯ ಪತಾಕೆ ಹಾರಲಿದ್ದು, ಪಂಜಾಬ್‌ನಲ್ಲಿ ಕಾಂಗ್ರೆಸ್ ತೀವ್ರ ಮುಖಭಂಗ ಎದುರಿಸಲಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಪಂಜಾಬ್ ರಾಜ್ಯವು ಆಮ್ ಆದ್ಮಿ ಪಕ್ಷದ ಪಾಲಾಗಲಿದೆ.’ ಟೈಮ್ಸ್ ನೌ ನಡೆಸಿದ ಜನಾಭಿಪ್ರಾಯ ಸಂಗ್ರಹದ ವರದಿ ಈ ಭವಿಷ್ಯ ನುಡಿದಿದೆ.
ಪಂಚರಾಜ್ಯಗಳಲ್ಲಿ ಚುನಾವಣೆಯ ಕಾವು ಏರುತ್ತಿರುವಂತೆಯೇ, ಜನಮತ ಸಂಗ್ರಹ ಮಾಡಲಾಗಿದ್ದು, ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರಕ್ಕೆ ಬಹುಮತ ಖಚಿತ ಎಂದು ಹೇಳಲಾಗಿದೆ. 403 ಕ್ಷೇತ್ರಗಳ ಪೈಕಿ 227-254 ಸೀಟ್‌ಗಳನ್ನು ಪಡೆಯುವ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೇರಲಿದೆ. ಕಳೆದ ಚುನಾವಣೆಗಿಂತ ಈ ಬಾರಿ ಕಡಿಮೆ ಸೀಟುಗಳು ಬರಲಿದ್ದು, ಎಸ್ಪಿಗೆ 136-151 ಸೀಟುಗಳು ಲಭ್ಯವಾಗಲಿದೆ. ರಾಮಮಂದಿರ ಮತ್ತು ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯು ಕಮಲ ಪಕ್ಷಕ್ಕೆ ಹೆಚ್ಚಿನ ಲಾಭ ತಂದುಕೊಡಲಿದೆ ಎಂದು ಸಮೀಕ್ಷೆ ಹೇಳಿದೆ.
ಪಂಜಾಬ್‌ನಲ್ಲಿ 41-47 ಸೀಟು ಗಳಿಸುವ ಮೂಲಕ ಮತ್ತೂಂದು ರಾಜ್ಯವು ಆಮ್ ಆದ್ಮಿ ಪಕ್ಷದ ತೆಕ್ಕೆಗೆ ಬೀಳಲಿದೆ. ಉತ್ತರಾಖಂಡದಲ್ಲಿ ಹಾಲಿ ಸಿಎಂ ಪುಷ್ಕರ್ ಸಿಂಗ್ ಧಮಿ ಬಗ್ಗೆ ಜನರ ಒಲವಿದ್ದು, 44-50 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ.
ಇದನ್ನೂ ಓದಿ:ಅನಗತ್ಯ ಸುತ್ತಾಡುವರಿಗೆ ಪೊಲೀಸರಿಂದ ದಂಡ
ಗೋವಾದಲ್ಲಿ ಆಪ್ ಉತ್ತಮ ಪ್ರದರ್ಶನ: ಗೋವಾದಲ್ಲಿ ಸಿಎಂ ಪ್ರಮೋದ್ ಸಾವಂತ್ ವಿರುದ್ಧದ ಭ್ರಷ್ಟಾಚಾರ ಆರೋಪವು ಬಿಜೆಪಿಗೆ ಹೊಡೆತ ನೀಡಲಿದೆಯಾದರೂ, ಬಹುಮತ ಪಡೆಯುವಲ್ಲಿ ಯಶಸ್ವಿಯಾಗಲಿದೆೆ. ಕಾಂಗ್ರೆಸ್ ಹಾಗೂ ಟಿಎಂಸಿಗೆ ಹೋಲಿಸಿದರೆ ಆಮ್ ಆದ್ಮಿ ಪಕ್ಷ ಉತ್ತಮ ಪ್ರದರ್ಶನ ನೀಡಲಿದೆ. 8-11 ಸ್ಥಾನಗಳಲ್ಲಿ ಆಪ್ ಜಯ ಸಾಧಿಸುವ ಮೂಲಕ ರಾಜ್ಯದಲ್ಲಿ ಬೇರೂರುವ ಸಾಧ್ಯತೆಯಿದೆ ಎಂದಿದೆ ವರದಿ.
ಉತ್ತರಪ್ರದೇಶ ಚುನಾವಣೆಯಲ್ಲಿ ಕೇವಲ ಧರ್ಮ ಮತ್ತು ಜಾತಿಯೇ ಪ್ರಮುಖ ವಿಚಾರವಾಗಿದೆ. ಇವುಗಳ ಬಗ್ಗೆ ಚರ್ಚಿಸಬಾರದು ಎಂದು ನಾನು ಹೇಳುವುದಿಲ್ಲ. ಆದರೆ, ನೈಜ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ಕೊಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ.
-ಪ್ರಿಯಾಂಕಾ ವಾದ್ರಾ, ಕಾಂಗ್ರೆಸ್ ನಾಯಕಿ