Advertisement

ಗೋವಿಗಾಗಿ ಮೇವು ಅಭಿಯಾನಕ್ಕೆ ಚಾಲನೆ

03:08 PM Jun 09, 2020 | mahesh |

ಶಿವಮೊಗ್ಗ: ನಗರದ ಬಾಪೂಜಿ ಆಯುರ್ವೇದಿಕ್‌ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾದ “ನಮ್ಮೂರು-ನಮ್ಮ ಗೋವುಗಳು-ಗೋವಿಗಾಗಿ ಮೇವು’ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಸೋಮವಾರ ಮೇವಿನ ಬೀಜ ಬಿತ್ತುವ ಮೂಲಕ ಚಾಲನೆ ನೀಡಿದರು. ನಮ್ಮ ಕನಸಿನ ಶಿವಮೊಗ್ಗ, ಶ್ರೀಗಂಧ, ವಿಶ್ವ ಹಿಂದೂ ಪರಿಷತ್‌, ಗೋ ಸಂರಕ್ಷಣಾ ವೇದಿಕೆ, ವಾಸವಿ ಪಬ್ಲಿಕ್‌ ಶಾಲೆ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಗೋವಿಗೆ ಮೇವು ನೀಡುವುದು ಪವಿತ್ರ ಕೆಲಸ.

Advertisement

ಸಾರ್ವಜನಿಕರೆಲ್ಲರೂ ಇದನ್ನು ತಮ್ಮ ಕರ್ತವ್ಯವೆಂದು ಭಾವಿಸಿ ಖಾಲಿ ಇದ್ದ ಸೈಟ್‌ಗಳ ಮಾಲೀಕರ ಮನವೊಲಿಸಿ ಅಲ್ಲಿ ಮೇವನ್ನು ಬೆಳೆಯಬೇಕು. ಬೆಳೆದ ಮೇವನ್ನು ಮೇವಿನ ಬ್ಯಾಂಕಿಗೆ ನೀಡುವ ಮೂಲಕ ಸೇವೆ ಸಲ್ಲಿಸಬಹುದಾಗಿದೆ. ಇದು ನಮ್ಮ ಸ್ವಂತ ತಾಯಿಗೆ ಮಾಡಿದ ಸೇವೆ ಎಂದು ಭಾವಿಸಬೇಕು. ಗೋ ತಾಯಿಗೆ ಮೇವನ್ನು ಒದಗಿಸಿದರೆ ನಮ್ಮ ಕುಟುಂಬಕ್ಕೂ ಶ್ರೇಯಸ್ಸು ಲಭ್ಯವಾಗುತ್ತದೆ. ಈ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು. ಆರ್‌ಎಸ್‌ಎಸ್‌ ಪ್ರಮುಖ ಪಟ್ಟಾಭಿರಾಮ್‌ ಮಾತನಾಡಿ, ಗೋವು ಮತ್ತು ಭೂಮಿಗೆ ಭಾರತದಲ್ಲಿ ಹಿಂದಿನ
ಕಾಲದಿಂದಲೂ ಪೂಜ್ಯಸ್ಥಾನ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಇವೆರಡೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಮತ್ತೆ ನಾವು ಹಿಂದಿನ ಭಾರತದ ಸ್ಥಾನಕ್ಕೆ ಹೋಗಬೇಕಾದರೆ ಇವೆರಡನ್ನೂ
ಪೂಜಿಸುವುದು ಅನಿವಾರ್ಯ ಎಂದರು.

ಗೋವು ಮತ್ತು ಬ್ರಾಹ್ಮಣ ಶ್ರೇಷ್ಠ ಎಂದು ಶಾಸನಗಳು ಹೇಳಿವೆ. ಇವೆರಡೂ ಕೂಡ ತಮ್ಮ ಸ್ವಾರ್ಥವನ್ನು ಬಿಟ್ಟು ಸಮಾಜಕ್ಕಾಗಿ ಅರ್ಪಿತವಾಗಿವೆ. ಗೋ ದಾನಕ್ಕೆ ನಮ್ಮ ದೇಶದಲ್ಲಿ ಅತ್ಯಂತ ಮಹತ್ವವಿದೆ. ಹಿಂದಿನ ಕಾಲದಲ್ಲಿ ಪೂರ್ವಿಕರು ಗೋಮಾಳಕ್ಕಾಗಿಯೇ ಜಮೀನುಗಳನ್ನು ದಾನ ಮಾಡುತ್ತಿದ್ದರು. ಭೂಮಿ ಮತ್ತು ಗೋವನ್ನು ಸಂರಕ್ಷಿಸಿದರೆ ದೇಶದ ವಿಕಾಸವಾಗುತ್ತದೆ ಎಂದರು.

ಮೇವು ಅಭಿಯಾನಕ್ಕೆ ಚಾಲನೆ ಎಸ್‌.ಕೆ.ಶೇಷಾಚಲ ಮಾತನಾಡಿ, ಪ್ರತಿ ಮನೆಯಲ್ಲೂ ಒಂದು ಕುಂಡದಲ್ಲಾದರು ಮೇವನ್ನು ಬೆಳೆದರೆ ಒಂದು ಹಸುವಿಗೆ ಮೇವು ಒದಗಿಸಬಹುದು. ಮೇವನ್ನು ಪ್ರತಿಯೊಬ್ಬರು ಟೆರೇಸ್‌ ಮೇಲೆ ಬೆಳೆದರೆ ಅದನ್ನು ಸಂಗ್ರಹಿಸಿ ಗೋವುಗಳಿಗೆ ಒದಗಿಸುವ ಯೋಜನೆ ಮಾಡಲಾಗಿದೆ. ಖಾಲಿ ಜಾಗಗಳು ಮತ್ತು ಕೊಳೆಗೇರಿಗಳಲ್ಲಿ ಮೇವು ಬೆಳೆಸಿದರೆ ಶಿವಮೊಗ್ಗದಲ್ಲಿ ಹಸಿರು ಕ್ರಾಂತಿಯಾಗುವುದರ ಜೊತೆಗೆ ಗೋವುಗಳಿಗೆ ಮೇವು ದೊರೆಯುತ್ತದೆ ಎಂದರು.

ಬಾಪೂಜಿ ಸಂಸ್ಥೆಯ ಎಂ.ಪಿ. ಆರಾಧ್ಯ, ವಿಶ್ವಹಿಂದೂ ಪರಿಷತ್‌ನ ರಮೇಶ್‌ ಬಾಬು, ನಮ್ಮ ಕನಸಿನ ಶಿವಮೊಗ್ಗ ಗೋಪಿನಾಥ್‌, ಬಿ.ಆರ್‌. ಮಧುಸೂದನ್‌, ಸುರೇಖಾ ಮುರಳೀಧರ್‌, ಅ.ನಾ. ವಿಜಯೇಂದ್ರ ರಾವ್‌ ಮೊದಲಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next