ಶಹಾಬಾದ: ನಗರದ ಸರಕಾರಿ ಕನ್ಯಾ ಪ್ರೌಢಶಾಲೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಗಂಜ್ ಶಾಲೆಯಲ್ಲಿ ಕುಡಿಯುವ ನೀರು ಒದಗಿಸಬೇಕೆಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೆಷನ್ ಮತ್ತು ಆಲ್ ಇಂಡಿಯಾ ಡೆಮಾಕ್ರಟಿಕ್ ಯುಥ್ ಆರ್ಗನೈಜೆಷನ್ ಸೇರಿದಂತೆ ವಿದ್ಯಾರ್ಥಿಗಳು ಶುಕ್ರವಾರ ನಗರಸಭೆ ಎದುರು ಪ್ರತಿಭಟನೆ ನಡೆಸಿದರು.
ಎ.ಐ.ಡಿ.ಎಸ್.ಒ ನಗರ ಉಪಾಧ್ಯಕ್ಷ ತುಳಜಾರಾಮ ಎನ್.ಕೆ ಮಾತನಾಡಿ, ಸರಕಾರವು ಅನೇಕ ಯೋಜನೆಗಳ ಮೂಲಕ ಶಾಲೆಗಳಿಗೆ ಅನುದಾನ ನೀಡುತ್ತಿದೆ. ಆದರೆ ನಗರದ ಸರಕಾರಿ ಕನ್ಯಾ ಪ್ರೌಢಶಾಲೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಗಂಜ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ
ಕುಡಿಯಲು ನೀರಿಲ್ಲದೇ ತುಂಬಾ ತೊಂದರೆ ಪಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಸಿಯೂಟದ ನಂತರ ಕುಡಿಯುವ ನೀರಿಗಾಗಿ ಪಕ್ಕದ ಬಡಾವಣೆಯ ಮನೆಗಳಿಗೆ ಹೋಗಿ ನೀರು ಬೇಡುವಂತಾಗಿದೆ. ಅಲ್ಲದೇ ನಗರಸಭೆಯ ಅಧಿಕಾರಿಗಳು ನೀರಿನ ಸಮಸ್ಯೆ ಬಗೆಹರಿಸಿ ಶೈಕ್ಷಣಿಕ ವಾತಾವರಣಕ್ಕೆ ಅನುಕೂಲ ಮಾಡಿಕೊಡಬೇಕೆಂದು ಒತ್ತಯಿಸಿದರು. ಎ.ಐ.ಡಿ.ಎಸ್.ಒ ಕಾರ್ಯದರ್ಶಿ ರಮೇಶ ದೇವಕರ್ ಮಾತನಾಡಿದರು. ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧ್ಯಕ್ಷೆ ಗೀತಾ ಸಾಹೆಬಗೌಡ ಬೋಗೊಂಡಿ, ಸ್ಥಾಯಿಸಮಿತಿ ಅಧ್ಯಕ್ಷ ಕುಮಾರ ಚವ್ಹಾಣ ಶಾಲೆಗಳಿಗೆ ಭೇಟಿ ನೀಡಿ ಎರಡು ದಿನಗಳಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಕುಸಾಳೆ, ಆಯುಕ್ತರಾದ ಶರಣು ಪೂಜಾರಿ,ಎ.ಐ.ಡಿ.ವೈ.ಒ ಕಾರ್ಯದರ್ಶಿ ವಿಶ್ವನಾಥ ಸಿಂ, ಮುಖಂಡ ಜಗನ್ನಾಥ.ಎಸ್. ಎಚ್, ಸಿದ್ದು ಚೌಧರಿ, ಸದಸ್ಯರಾದ ತಿಮ್ಮಯ್ಯ ಮಾನೆ, ನೀಲಕಂಠ ಹುಲಿ .ಪ್ರವೀಣ ಬಣಮಿಕರ್ ,ಪ್ರಸಾದ ,ಮಹಾದೇವಿ, ಅಂಬಿಕಾ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.