ಮುಂಬಯಿ : ಮಹಾನಗರಿಯಲ್ಲಿನ ರಸ್ತೆ ಸ್ಥಿತಿಗತಿ ಅತ್ಯಂತ ಶೋಚನೀಯವಾಗಿರುವುದನ್ನು ಪ್ರತಿಭಟಿಸಲು ಬೀದಿಗಿಳಿದ ಎಂಎನ್‌ಎಸ್ ಕಾರ್ಯಕರ್ತರು ರಾಜ್ಯ ಸಚಿವಾಲಯಗಳ ಕಟ್ಟಡದ ಹೊರಗಿನ ಒಂದು ಬದಿಯ ರಸ್ತೆಯನ್ನು ಅಗೆದು ಆಡಳಿತೆಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೊರಗೆಡಹಿದ್ದಾರೆ.
ದೇಶದ ವಾಣಿಜ್ಯ ರಾಜಧಾನಿ ಎನಿಸಿಕೊಂಡಿರುವ ಮುಂಬಯಿ ಮಹಾನಗರಿಯ ರಸ್ತೆಗಳು ಹೊಂಡ ಗುಂಡಿಗಳಿಂದ ಕೂಡಿದ್ದು ಈಚಿನ ಜಡಿಮಳೆ, ಕೃತಕ ನೆರೆ ರಸ್ತೆ ಪರಿಸ್ಥಿತಿಯನ್ನು ಶೋಚನೀಯಗೊಳಿಸಿದೆ.
ಇದನ್ನು ಪ್ರತಿಭಟಿಸಿಲು ನಿನ್ನೆ ರಾತ್ರಿ ಬೀದಿಗಿಳಿದು ಬಿಎಂಸಿ ವಿರುದ್ಧ ಘೋಷಣೆಗಳನ್ನು ಕೂಗಿದ ಎಂಎನ್‌ಎಸ್ ಕಾರ್ಯಕರ್ತರು ಮಂತ್ರಾಲಯದ ಹೊರಗಡೆಯ ಒಂದು ಬದಿಯ ರಸ್ತೆಯನ್ನು ಅಗೆಯಲು ಮುಂದಾದರು.
ಘಟನೆಗೆ ಸಂಬಂಧಿಸಿ ಕೂಡಲೇ ಕಾರ್ಯಾಚರಣೆಗಿಳಿದ ಸ್ಥಳೀಯ ಪೊಲೀಸರು ರಸ್ತೆ ವಿಧ್ವಂಸಕ ಕೃತ್ಯವನ್ನು ನಿಯಂತ್ರಿಸಿ ನಾಲ್ವರನ್ನು ಬಂಧಿಸಿದರು.
ಎಂಎನ್‌ಎಸ್ ನ ಸುಮಾರು 12 ಮಂದಿ ಕಾರ್ಯಕತರು ಬೀದಿಗಿಳಿದು ಪ್ರತಿಭಟನೆ ನಡೆಸಿದಾಗ ಒಬ್ಟಾತ ರಾಷ್ಟ್ರ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡಿದ್ದ. ಉಳಿದ 10 -12 ಮಂದಿ ರಸ್ತೆ ಅಗೆಯಲು ತೊಡಗಿ ಅವಶೇಷಗಳನ್ನು ಮುಖ್ಯ ರಸ್ತೆಗೆ ಎಸೆದು ವಾಹನಗಳು ಹೋಗದಂತೆ ಮಾಡಿದರು.