ಮೂಡುಬಿದಿರೆ: ಮಳೆಗಾಲ ನಿರ್ಗಮಿಸುವ ಹೊತ್ತಲ್ಲಿ ಮೂಡುಬಿದಿರೆ ಪೇಟೆಯ ರಸ್ತೆಯಲ್ಲಿರುವ ಹೊಂಡ ಗುಂಡಿಗಳ ಬಗ್ಗೆ ಎಲ್ಲ ಊರುಗಳಲ್ಲೂ ದೂರುಗಳು ಕೇಳಿಬರುತ್ತ ಇವೆ. ಪ್ರಗತಿಯ ನಾಗಾಲೋಟದಲ್ಲಿರುವ ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿರುವ ರಸ್ತೆಗಳೂ ಇದಕ್ಕೆ ಹೊರತಲ್ಲ.
ಬಸ್ ನಿಲ್ದಾಣದ ನಿರ್ಗಮನ ಹಾದಿಯ ಬಾಗಿಲಲ್ಲೇ ಗೋಚರಿಸುವ ಹೊಂಡಗಳು ವಾಹನಗಳಿಗೆ ಅನಿವಾರ್ಯ ತಡೆಯೊಡ್ಡುತ್ತಿವೆ. ಮುಂದಕ್ಕೆ ಲಾವಂತಬೆಟ್ಟು ರಸ್ತೆಯಾಗಿ ಅಮರಶ್ರೀ ದಾಟಿ ಜಿವಿ ಪೈ ರಸ್ತೆ -ಮಂಗೇಶಿ ದೇವಸ್ಥಾನದೆದುರು ಹಾಕಿರುವ ಇಂಟರ್‌ಲಾಕ್ ಕಿತ್ತು ಕಿತ್ತುಹೋಗಿದ್ದು ಇಲ್ಲೂ ವಾಹನಗಳು ನಿಧಾನ ಚಲಿಸುವ ಹೊಣೆ ಹೊರುತ್ತಿವೆ. ರೋಟರಿ ಶಾಲೆ- ಪೊಲೀಸ್ ಠಾಣೆ ಬಳಿ ರಸ್ತೆ ಜೀರ್ಣವಾಗಿಬಿಟ್ಟಿದೆ.
ಜ್ಯೋತಿನಗರ ದಾಟಿ ಮೆಸ್ಕಾಂ ಬಳಿ ಮಹಾವೀರ ಕಾಲೇಜು ರಸ್ತೆ, ಜೈನ ಪೇಟೆಯಲ್ಲಿ ಜೈನಮಠದೆದುರಿನ ತಿರುವಿನಲ್ಲಿ ತೀರಾ ಅಪಾಯಕಾರಿ ಹೊಂಡಗಳಿವೆ.
ಸ್ವರಾಜ್ಯ ಮೈದಾನದ ಕಡೆಯಿಂದ ಆಳ್ವಾಸ್ ಆಸ್ಪತ್ರೆ ಇಳಿಜಾರು ಹಾದಿಯಲ್ಲಿ ಕೊರಕಲು ಬಿದ್ದು ಎಷ್ಟೋ ಸಮಯವಾಯಿತು. ರಾತ್ರಿ ಹೊತ್ತಲ್ಲಿ ಹೊಂಡಗಳು ಕಾಣಿಸುತ್ತಿಲ್ಲ.. ನಾಲ್ಕುಮಾರ್ಗ ಸಂಧಿ ಸುವಲ್ಲಿ ರಸ್ತೆಗೆ ಅಡ್ಡವಾಗಿ, ಓರೆಯಾಗಿ ಹಂಪ್ ನಿರ್ಮಿಸಿ ಮಳೆ ನೀರು ರಸ್ತೆಯಡ್ಡಕ್ಕೆ ಹರಿದು ಹೋಗುವ ಹಾಗೆ ಮಾಡಿರುವುದರಿಂದ ರಸ್ತೆ ಕೊಚ್ಚಿ ಕರಗಿ ಹೋಗಿದೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಜನತೆ ಮೌಖೀಕವಾಗಿ, ಲಿಖೀತವಾಗಿ ಪುರಸಭೆಯ ಗಮನವನ್ನು ಸೆಳೆದಿದ್ದಾರೆ. ಫಲಿತಾಂಶಕ್ಕಾಗಿ ಕಾದು ನೋಡಬೇಕಾಗಿದೆ.