Advertisement

Hampankatte: ಸಿಟಿ ಮಾರ್ಕೆಟ್‌ ರಸ್ತೆಗೆ ಬೇಕಿದೆ ಕಾಯಕಲ್ಪ

02:58 PM Nov 26, 2024 | Team Udayavani |

ಹಂಪನಕಟ್ಟೆ: ಹಂಪನಕಟ್ಟೆ ಸಿಗ್ನಲ್‌ (ಐಡಿಯಲ್ಸ್‌) ಬಳಿಯಿಂದ ಸೆಂಟ್ರಲ್‌ ಮಾರ್ಕೆಟ್‌ ಕಡೆಗೆ ಸಾಗುವ ಸುಮಾರು 100 ಮೀ. ಉದ್ದದ ರಸ್ತೆ ಹೊಂಡಗುಂಡಿಗಳಿಂದ ಕೂಡಿದ್ದು, ಸಾರ್ವಜನಿಕರಿಗೆ, ಲಘು ವಾಹನಗಳಿಗೆ ಸಂಚಾರಿಸಲು ದುಸ್ತರವಾಗಿದೆ. ತೇಪೆ ಹಾಕಿದರೂ ಮತ್ತೆ ಮತ್ತೆ ಗುಂಡಿಗಳು ಉಂಟಾಗುತ್ತಿದೆ. ಕಳೆದ ಹದಿನೈದು ವರ್ಷಗಳಿಂದ ಈ ರಸ್ತೆಯಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ರಸ್ತೆ ಅಭಿವೃದ್ಧಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿಬಂದಿದೆ.

Advertisement

ರಸ್ತೆಯ ಇಕ್ಕೆಲಗಳಲ್ಲಿ ಅಂಗಡಿ ಮಳಿಗೆಗಳಿದ್ದು, ಅತೀ ಹೆಚ್ಚಿನ ವ್ಯಾಪಾರ ವಹಿವಾಟು ಕೂಡ ಇಲ್ಲಿ ನಡೆಯುತ್ತದೆ. ಪ್ರತಿ ನಿತ್ಯ ಸಾವಿರಾರು ಮಂದಿ ಈ ರಸ್ತೆಯಲ್ಲಿ ಅಡ್ಡಾಡುತ್ತಾರೆ. ಆಟೋ, ದ್ವಿ ಚಕ್ರ ವಾಹನಗಳಿಗೂ ಸಂಚಾರಕ್ಕೆ ಅವಕಾಶವಿದೆ. ಆದರೆ ರಸ್ತೆಯ ಅವ್ಯವಸ್ಥೆಯಿಂದ ಸಂಚಾರಿಸುವುದೇ ತ್ರಾಸದಾಯಕವಾಗಿದೆ.

ನಗರದ ವಿವಿಧೆಡೆ ಗಲ್ಲಿ ಗಲ್ಲಿಗಳಲ್ಲೂ ಕಾಂಕ್ರೀಟ್‌ ರಸ್ತೆಯಿದ್ದರೆ, ಈ ರಸ್ತೆ ಮಾತ್ರ ಡಾಮರು ರಸ್ತೆಯಾಗಿದೆ. ಗುಂಡಿ ಎದ್ದಾಗ ಒಮ್ಮೆ ತೇಪೆ ಕಾಣುತ್ತದೆ. ಇದನ್ನು ಹೊರತು ಪಡಿಸಿ ಪೂರ್ಣ ಪ್ರಮಾಣದಲ್ಲಿ ರಸ್ತೆಯ ಅಭಿವೃದ್ಧಿ ಕೆಲಸ ಇಲ್ಲಿಯ ವರೆಗೆ ನಡೆದಿಲ್ಲ.

ಚರಂಡಿ ವ್ಯವಸ್ಥೆಯೂ ಇಲ್ಲ
ಸೂಕ್ತ ಚರಂಡಿ ವ್ಯವಸ್ಥೆ ಎನ್ನುವುದು ಈ ರಸ್ತೆಯಲ್ಲಿ ಕಾಣುವುದಿಲ್ಲ. ಪರಿಣಾಮ ಮಳೆಗಾಲದಲ್ಲಿ ರಸ್ತೆಯಲ್ಲೇ ನೀರು ಹರಿದು ಹೋಗುತ್ತದೆ. ರಸ್ತೆ ಮಟ್ಟಕ್ಕಿಂತ ಕೆಳಗಿರುವ ಕೆಲವು ಅಂಗಡಿಗಳಿಗೆ ನೀರು ನುಗ್ಗಿರುವ ಉದಾಹರಣೆಗಳೂ ಇವೆ. ಆದ್ದರಿಂದ ಶೀಘ್ರದಲ್ಲಿ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಮಹಾನಗರ ಪಾಲಿಕೆ ಮುಂದಾಗಬೇಕು ಎಂದು ಸ್ಥಳೀಯ ವರ್ತಕರು ಆಗ್ರಹಿಸಿದ್ದಾರೆ.

ಶೀಘ್ರ ರಸ್ತೆ ಅಭಿವೃದ್ಧಿ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮನಪಾ ಅಧಿಕಾರಿಗಳು, ಮಾರ್ಕೆಟ್‌ ರಸ್ತೆ ಅಭಿವೃದ್ಧಿಗೆ ಈಗಾಗಲೇ ಯೋಜನೆ ರೂಪಿಸಲಾಗಿದೆ. ಆರಂಭದಲ್ಲಿ ಒಳಚರಂಡಿಗೆ ಜಾಲವನ್ನು ಸರಿಪಡಿಸುವ ಕೆಲಸಗಳು ನಡೆಯಲಿದೆ. ಆ ಬಳಿಕ ರಸ್ತೆ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ. ಕಾಮಗಾರಿ ವೇಳೆ ಸ್ಥಳೀಯ ಅಂಗಡಿಯವರಿಗೂ ಸಮಸ್ಯೆಯಾಗುವ ಅಗತ್ಯವಿದ್ದು, ಸಹಕಾರ ಅಗತ್ಯ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next