Advertisement
ಹೊಸ ಮುಖಗಳಿಗೆ ಅವಕಾಶ ಕೊಡಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ 70 ವರ್ಷ ದಾಟಿದವರನ್ನು “ಮಾರ್ಗದರ್ಶಿ’ ಮಂಡಳಿಗೆ ಸೇರಿಸುವ ಆತಂಕವೂ ಕಾಡುತ್ತಿದೆ. ಟಿಕೆಟ್ ಕೈ ತಪ್ಪುವ ಭೀತಿಯಿಂದ ಕೆಲವರು ಮೊದಲೇ ಶಸ್ತ್ರತ್ಯಾಗ ಮಾಡಿ ಪುತ್ರರಿಗೆ ಪಟ್ಟ ಕಟ್ಟುವ ಘೋಷಣೆ ಮಾಡಿ ಬಚಾವ್ ಆಗಿದ್ದರೆ ಮತ್ತೆ ಕೆಲವರಿಗೆ ಟಿಕೆಟ್ “ಅರ್ಧಚಂದ್ರ’ ಎಂಬಂತಾಗಿದೆ.
ಪ್ರಸಕ್ತ ವಿಧಾನಸಭೆಯಲ್ಲಿ ಮಾಜಿ ಮುಖ್ಯ ಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ಮಾಜಿ ಸ್ಪೀಕರ್ ರಮೇಶ್‌ಕುಮಾರ್, ಮಾಜಿ ಸಚಿವ ಆರ್.ವಿ. ದೇಶಪಾಂಡೆ ಸೇರಿದಂತೆ 70 ವರ್ಷ ದಾಟಿದ 34ಸದಸ್ಯರಿದ್ದಾರೆ.
ಆರೋಗ್ಯ ಕಾರಣಗಳಿಂದ ಬಿಜೆಪಿಯಲ್ಲಿ ಬಿ.ಎಸ್.ಯಡಿ ಯೂರಪ್ಪ, ಕಾಂಗ್ರೆಸ್‌ನಲ್ಲಿ ಎಂ.ವೈ.ಪಾಟೀಲ್, ಜೆಡಿಎಸ್‌ನಲ್ಲಿ ನಾಗನಗೌಡ ಕಂದಕೂರ್ ಸ್ಪರ್ಧಿಸದಿರಲು ತೀರ್ಮಾನಿಸಿದ್ದಾರೆ. ಸಿದ್ದರಾಮಯ್ಯ, ದೇಶಪಾಂಡೆ. ರಮೇಶ್‌ಕುಮಾರ್ ಸ್ಪರ್ಧೆಗೆ ಸೈ ಎಂದಿದಾರೆ. ಕಾಂಗ್ರೆಸ್‌ನ ವೆಂಕಟರಮಣಪ್ಪ, ವಿ.ಮುನಿಯಪ್ಪ ತಮ್ಮ ಪುತ್ರರಿಗೆ ಟಿಕೆಟ್ ಬೇಡಿಕೆ ಇಟ್ಟಿದ್ದು, ಕೊಡದಿದ್ದರೆ ನಮಗೇ ಕೊಡಿ ಎಂದೂ ಹೇಳುತ್ತಿದ್ದಾರೆ. ಜೆಡಿಎಸ್‌ನ ಕೋಲಾರ ಶಾಸಕ ಕೆ. ಶ್ರೀನಿವಾಸಗೌಡ ಸ್ಪರ್ಧೆ ಮಾಡದೆ ಕಾಂಗ್ರೆಸ್‌ನಿಂದ ಸ್ಪರ್ಧೆಗೆ ಮುಂದಾಗಿರುವ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ.
Related Articles
Advertisement
ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಯಾವುದೇ ವಯಸ್ಸಿನ ಮಿತಿ ಇಲ್ಲದ ಕಾರಣ ಅಲ್ಲಿ 70 ವರ್ಷ ದಾಟಿದವರಿಗೆ ಚಿಂತೆಯಿಲ್ಲ. ಆದರೂ ವಯಸ್ಸಾದವರಿಗೆ ಟಿಕೆಟ್ ಕೊಟ್ಟಿದ್ದು ಸಾಕು, ಹೊಸ ಮುಖಗಳಿಗೆ ಅವಕಾಶ ಕೊಡಿ ಎಂಬ ಬೇಡಿಕೆಯೂ ಇದೆ.
ಈ ಬಾರಿ ಸ್ಪರ್ಧೆಗೆ ಹಿಂದೇಟು ಹಾಕುತ್ತಿರುವ ಅಫjಲ್‌ಪುರದ ಎಂ.ವೈ.ಪಾಟೀಲ್, ಪಾವಗಡದ ವೆಂಕಟರಮಣಪ್ಪ, ಶಿಡ್ಲಘಟ್ಟದ ವಿ.ಮುನಿಯಪ್ಪ ತಮ್ಮ ಪುತ್ರರಿಗೆ ಟಿಕೆಟ್ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಸ್ಥಳೀಯವಾಗಿ ವಿರೋಧ ಇದೆ. ಹಾಲಿ ಶಾಸಕರು ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಣೆಯಾದ ಬೆನ್ನಲ್ಲೇ ಪ್ರತಿ ಕ್ಷೇತ್ರದಲ್ಲಿ ಐದರಿಂದ ಆರು ಆಕಾಂಕ್ಷಿಗಳು ಹುಟ್ಟಿಕೊಂಡು ಟಿಕೆಟ್‌ಗಾಗಿ ಹೈಕಮಾಂಡ್ ಮಟ್ಟದಲ್ಲಿ ಕಸರತ್ತು ನಡೆಸುತ್ತಿದಾರೆ.