Advertisement

ಬಿಜೆಪಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳ ಬೇಗುದಿ

06:15 AM Mar 17, 2018 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆಯ ಟಿಕೆಟ್‌ ಹಂಚಿಕೆಯಲ್ಲಿ ಬಿಜೆಪಿ ಈ ಬಾರಿ ಅನುಸರಿಸುತ್ತಿರುವ ನೀತಿಯಿಂದಾಗಿ ಟಿಕೆಟ್‌ ಆಕಾಂಕ್ಷಿಗಳಲ್ಲಿ ಬೇಗುದಿ ಆರಂಭವಾಗಿದೆ.

Advertisement

ಈಗಾಗಲೇ ಅಭ್ಯರ್ಥಿಗಳ ಅನಧಿಕೃತ ಪಟ್ಟಿಯೊಂದು ಓಡಾಡುತ್ತಿದೆ. ಅದನ್ನು ಆಧರಿಸಿ ಕೆಲವರು ಚುನಾವಣೆಗೆ ಕೆಲಸ
ಆರಂಭಿಸಿದರೆ, ಆ ಪಟ್ಟಿ ಅಂತಿಮವಲ್ಲ. ಇನ್ನೂ ಸಾಕಷ್ಟು ಬದಲಾವಣೆಗಳಿವೆ. ಹೀಗಾಗಿ ನೀವೂ ಕೆಲಸ ಮಾಡಿ ಎಂದು
ಪಟ್ಟಿಯಲ್ಲಿಲ್ಲದ ಆಕಾಂಕ್ಷಿಗಳಿಗೆ ಪಕ್ಷದಿಂದ ಸಂದೇಶ ರವಾನೆಯಾಗುತ್ತಿದ್ದು, ಆಕಾಂಕ್ಷಿಗಳು ಗೊಂದಲಕ್ಕೆ ಸಿಲುಕಿದ್ದಾರೆ.

ಸಾಮಾನ್ಯವಾಗಿ ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆ ಮಾಡಲಾಗುತ್ತದೆಯಾದರೂ ಬಹುತೇಕ ಕ್ಷೇತ್ರಗಳಲ್ಲಿ ಇಂಥವರಿಗೇ ಟಿಕೆಟ್‌ ಎಂದು ಅಭ್ಯರ್ಥಿಗಳಿಗೆ ಸಂದೇಶ ಹೋಗಿರುತ್ತದೆ. ಅದರಂತೆ ಚುನಾವಣೆಗೆ ನಾಲ್ಕೈದು ತಿಂಗಳಿರುವಾಗಲೇ ಅವರು ಸಿದ್ಧತೆ ಆರಂಭಿಸುತ್ತಾರೆ. ಆದರೆ, ಈ ಬಾರಿ ಪರಿಸ್ಥಿತಿ ಭಿನ್ನವಾಗಿದ್ದು, ಹೆಚ್ಚಿನ ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್ ಸಿಗಬಹುದೆಂಬ ಸುಳಿವು ಸಿಗುತ್ತಿಲ್ಲ. ತನಗೇ ಟಿಕೆಟ್‌ ಸಿಗಬಹುದೆಂದು ಭಾವಿಸಿ ಕೆಲಸ ಆರಂಭಿಸಿದರೆ, ಮತ್ತೂಬ್ಬ ಟಿಕೆಟ್‌ ಆಕಾಂಕ್ಷಿಗೆ ಬೇರೆಯದ್ದೇ ಆದ ಸಂದೇಶ ರವಾನೆಯಾಗಿರುತ್ತದೆ. ಹೀಗಾಗಿ ಆಕಾಂಕ್ಷಿಗಳೆಲ್ಲರೂ ಟಿಕೆಟ್‌ಗಾಗಿ ಕ್ಷೇತ್ರದಲ್ಲಿ ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ.

ಈ ಬಾರಿ ಚುನಾವಣೆ ಅಧಿಸೂಚನೆ ಹೊರಡುವ ವೇಳೆಗೆ ಬಹುತೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಲು ಬಿಜೆಪಿ
ಯೋಚಿಸುತ್ತಿದೆ. ಒಂದು ವೇಳೆ ಅಭ್ಯರ್ಥಿ ಘೋಷಣೆಯಾದ ಬಳಿಕ ಯಾರಾದರೂ ಬಂಡಾಯ ಏಳುವುದು, ಪಕ್ಷಾಂತರ ಮಾಡುವುದಕ್ಕೆ ಮುಂದಾದರೆ ಅದರಿಂದ ಪಕ್ಷಕ್ಕೆ ಹೆಚ್ಚಿನ ಹಾನಿಯಾಗದಂತೆ ನೋಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಶಾ ನೀತಿಯೇ ಕಾರಣ: ಈ ಗೊಂದಲಕ್ಕೆ ಕಾರಣವಾಗಿರುವುದು ಅಭ್ಯರ್ಥಿಗಳ ಆಯ್ಕೆ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅನುಸರಿಸುತ್ತಿರುವ ನೀತಿ. ಈ ಬಾರಿ ಅಭ್ಯರ್ಥಿಯ ಗೆಲ್ಲುವ ಸಾಮರ್ಥ್ಯದ ಜತೆಗೆ ಅವರು ಪಕ್ಷ ಸಂಘಟನೆಯಲ್ಲಿ ಯಾವ ರೀತಿ ತೊಡಗಿಸಿ ಕೊಳ್ಳುತ್ತಾರೆ ಎಂಬುದನ್ನೂ ಪರಿಗಣಿಸಲಾಗುತ್ತದೆ.

Advertisement

ಅಲ್ಲದೆ, ಯಾವುದೇ ನಾಯಕನ ಹಿಂದೆ ಹೋಗದೆ ಪಕ್ಷದ ಜತೆ ನಿಲ್ಲುವವರಿಗೆ ಮಣೆ ಹಾಕಲಾಗುತ್ತದೆ.ಇದೆಲ್ಲಕ್ಕಿಂತ ಮುಖ್ಯವಾಗಿ ಕಾರ್ಯಕರ್ತರಿಗೆ ಅಭ್ಯರ್ಥಿಯ ಸ್ಪಂದನೆ ಚೆನ್ನಾಗಿರಬೇಕು ಎಂಬುದು ಅಮಿತ್‌ ಶಾ ಅವರ ನೀತಿ.

ಬಿಜೆಪಿಯಲ್ಲಿ ಯಾರೇ ಸ್ಪರ್ಧಿಸಿದರೂ ಗೆಲ್ಲುತ್ತಾರೆ ಎಂಬ ಪರಿಸ್ಥಿತಿ ಇರುವ ಕ್ಷೇತ್ರಗಳಲ್ಲಿ ಯಾರು ಸಂಘಟ ನಾತ್ಮಕವಾಗಿ ಕ್ರಿಯಾಶೀಲರಾಗಿರುತ್ತಾರೋ ಅಂಥವರಿಗೆ ಮಣೆ ಹಾಕಲು ತೀರ್ಮಾನಿಸಲಾಗಿದೆ. ಇದರ ಉದ್ದೇಶ ಚುನಾವಣೆ ಬಳಿಕವೂ ಪಕ್ಷ ಸಂಘಟನೆಯಲ್ಲಿ ಲೋಪ ಉಂಟಾಗಬಾರದು. ಮುಂಬರುವ ಲೋಕಸಭೆ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಪಕ್ಷಕ್ಕೆ ಹಿನ್ನಡೆಯಾಗಬಾರದು ಎಂಬುದು.

ಯುಗಾದಿ ಬಳಿಕ ಮೊದಲ ಪಟ್ಟಿ
ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ 120 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮವಾಗಿದೆ. ಹಾಲಿ ಶಾಸಕರು ಮತ್ತು ಗೆಲ್ಲಬಹುದೆಂಬ ನಿರೀಕ್ಷೆಯಿರುವ ಅಭ್ಯರ್ಥಿಗಳ ಹೆಸರು ಈ ಪಟ್ಟಿಯಲ್ಲಿದೆ. ಜತೆಗೆ ಕೆಲವು ಪ್ರಭಾವಿ ಹೊಸ ಮುಖಗಳೂ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಇವೆಲ್ಲವೂ ಒಬ್ಬರೇ ಪ್ರಬಲ ಆಕಾಂಕ್ಷಿ ಇರುವ ಕ್ಷೇತ್ರಗಳಾಗಿದ್ದು, ಬಹುತೇಕ ಯುಗಾದಿ ಹಬ್ಬದ ನಂತರ ಪಟ್ಟಿ ಅಂತಿಮಗೊಳ್ಳಲಿದೆ. ಇದಾದ ಬಳಿಕ 2ನೇ ಪಟ್ಟಿ ಸಿದಟಛಿಪಡಿಸಲಾಗುವುದು. ಈ ಸಂದರ್ಭದಲ್ಲಿ ಒಂದಕ್ಕಿಂತ ಹೆಚ್ಚು ಪ್ರಬಲ ಆಕಾಂಕ್ಷಿಗಳಿರುವ ಕ್ಷೇತ್ರಗಳಿಗೆ ಸಮೀಕ್ಷಾ ವರದಿ, ಬೂತ್‌ಮಟ್ಟದಿಂದ ಬಂದಿರುವ ವರದಿ ಹಾಗೂ ಆರ್‌ಎಸ್‌ಎಸ್‌ ಕಡೆಯಿಂದ ಬರುವ ಮಾಹಿತಿಗಳನ್ನು ಆಧರಿಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುತ್ತದೆ. ಇದಲ್ಲದೆ, ಸೂಕ್ತ ಅಭ್ಯರ್ಥಿಗಳಿಲ್ಲದ ಕ್ಷೇತ್ರದಲ್ಲಿ ಆಪರೇಷನ್‌ ಕಮಲದ ಮೂಲಕ ಅನ್ಯ ಪಕ್ಷದವರನ್ನು ಆಹ್ವಾನಿಸಿ ಟಿಕೆಟ್‌ ನೀಡಲಾಗುತ್ತಿದ್ದು, ಈ ಪಟ್ಟಿ 2ನೇ ಹಂತದಲ್ಲಿ ಅಥವಾ 3ನೇ ಹಂತದಲ್ಲಿ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next