ತಿರುವನಂತಪುರ: ವಾಕ್ ಸ್ವಾತಂತ್ರ್ಯ, ನಿಷ್ಪಕ್ಷಪಾತ ಪತ್ರಿಕೋದ್ಯಮದ ಹಕ್ಕಿಗೆ ಚ್ಯುತಿ ತರಲಿದೆ ಎನ್ನಲಾದ ವಿವಾದಿತ ಪೊಲೀಸ್ ತಿದ್ದುಪಡಿ ಕಾಯ್ದೆಗೆ ಕೇರಳ ಸರಕಾರ ತೀವ್ರ ವಿರೋಧದ ನಡುವೆಯೇ ಅಂಕಿತ ಒತ್ತಿದೆ.
ಕೇರಳ ಕ್ಯಾಬಿನೆಟ್ ಅನುಮೋದಿಸಿದ್ದ 2011ರ “118 ಎ’ ಪೊಲೀಸ್ ಕಾಯ್ದೆ ತಿದ್ದುಪಡಿ ಮಸೂದೆಗೆ ರಾಜ್ಯ ಪಾಲ ಆರೀಫ್ ಮೊಹಮ್ಮದ್ ಖಾನ್ ಸಹಿ ಹಾಕಿದ್ದಾರೆ. ಇದರ ಅನ್ವಯ, ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆ ಮತ್ತು ಮಕ್ಕಳ ವಿರುದ್ಧ ಸೈಬರ್ ಬೆದರಿಕೆಯೊಡ್ಡುವವರಿಗೆ ಕನಿಷ್ಠ 3 ವರ್ಷ ಜೈಲು ಅಥವಾ 10 ಸಾವಿರ ರೂ. ದಂಡ ಅಥವಾ ಎರಡನ್ನೂ ವಿಧಿಸಲು ಎಲ್‌ಡಿಎಫ್ ಸರಕಾರ ಮುಂದಾಗಿದೆ.
ಜಾರಿ ಆಗಿದ್ದೇಕೆ?: “ಪ್ರಸ್ತುತವಿರುವ ಕಾನೂನಿನಲ್ಲಿ ಮಹಿಳೆ ಮತ್ತು ಮಕ್ಕಳ ವಿರುದ್ಧ ಸೈಬರ್ ಬೆದರಿಕೆಯೊಡ್ಡುವ ಅಪರಾಧಿಗಳಿಗೆ ನಿರ್ದಿಷ್ಟ ಶಿಕ್ಷೆಗಳಿಲ್ಲ. ಐಪಿಸಿ ಸೆಕ್ಷನ್ 499, 500ರಲ್ಲಿ ಮಾನಹಾನಿ ಮೊಕದ್ದಮೆ ಹೂಡಲು ಅವಕಾಶವಿ ದ್ದರೂ, ಇಲ್ಲಿ ಅರ್ಜಿದಾರರೇ ಖುದ್ದಾಗಿ ಕೋರ್ಟ್ ಮೆಟ್ಟಿಲೇರಬೇಕು’ ಎನ್ನುವುದು ಕೇರಳ ಸರಕಾರದ ವಾದ. ಆದರೆ, ತಿದ್ದುಪಡಿ ತರಲಾದ ಪೊಲೀಸ್ ಕಾಯ್ದೆಯಲ್ಲಿ ಸಂತ್ರಸ್ತರ ಪರ ಯಾವುದೇ ವ್ಯಕ್ತಿ ದೂರು ಸಲ್ಲಿಸಬಹುದು ಅಥವಾ ಪೊಲೀಸ್ ಅಧಿಕಾರಿಯೇ ಖುದ್ದಾಗಿ ಆರೋಪಿ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಬಹುದು.
ನೋಟಿಸ್ ನೀಡದೆ ಪೊಲೀಸರು ಆರೋಪಿಯನ್ನು ಬಂಧಿಸಬಹುದು. ಆದರೆ ಸಿಎಂ ಕಚೇರಿ ಹೊರಡಿಸಿರುವ ಪ್ರಕಟನೆಯಲ್ಲಿ ಈ ತಿದ್ದುಪಡಿ ಕಾಯ್ದೆ ಕೇವಲ ಸಾಮಾಜಿಕ ಜಾಲತಾಣಗಳಿಗಷ್ಟೇ ಸೀಮಿತವಲ್ಲ ಎಂಬುದೂ ಸ್ಪಷ್ಟವಾಗಿದೆ. “ಮುದ್ರಣ, ದೃಶ್ಯ ಮಾಧ್ಯಮ, ಪೋಸ್ಟರ್ ಮತ್ತು ಬಿಲ್‌ಬೋರ್ಡ್‌ಗಳ ವಿರುದ್ಧವೂ ಕ್ರಮಜರಗಿಸಲು ಅವಕಾಶವಿದೆ’ ಎಂದಿದ್ದಾರೆ.
ತೀವ್ರ ಆಕ್ಷೇಪ: ಸರಕಾರ ಜಾರಿಗೆ ತಂದಿರುವ ಪೊಲೀಸ್ ತಿದ್ದುಪಡಿ ಕಾಯ್ದೆಗೆ ವಿಪಕ್ಷ ಯುಡಿಎಫ್ ಅಲ್ಲದೆ, ಎಲ್‌ಡಿಎಫ್ನ ಒಬ್ಬ ಸದಸ್ಯ, ಹಲವು ಸಂಘಟನೆಗಳ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ
ಯಾರಿಗೆ ಕಾಯ್ದೆ ಬಿಸಿ?
*ಸಾಮಾಜಿಕ ಜಾಲತಾಣ, ಸಮೂಹ ಮಾಧ್ಯಮಗಳಲ್ಲಿ ಮಹಿಳೆ- ಮಕ್ಕಳ ವಿರುದ್ಧ ಬೆದರಿಕೆ ಒಡ್ಡುವವರಿಗೆ.
*ಸಾರ್ವಜನಿಕ ಪ್ರದೇಶಗಳಲ್ಲಿ ಲೈಂಗಿಕ ಸನ್ನೆ ಮಾಡುವವರಿಗೆ.
*ಸ್ತ್ರೀ ಗೌರವಕ್ಕೆ ಚ್ಯುತಿ ತರುವವರಿಗೆ.
*ಮಹಿಳೆಯ ಖಾಸಗೀತನಕ್ಕೆ ಧಕ್ಕೆ ತರುವ ಫೋಟೋ, ವೀಡಿಯೋ ಚಿತ್ರೀಕರಿಸುವವರಿಗೆ.
ಬೇರೆ ರಾಜ್ಯಗಳಲ್ಲಿ
*ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ 354, 354 ಎ ಜತೆಗೆ ಐಟಿ ಆ್ಯಕ್ಟ್ ಅನ್ವಯ ಶಿಕ್ಷೆ ವಿಧಿಸಲಾಗುತ್ತದೆ. ಅಪರಾಧದ ಗಂಭೀರತೆ ಆಧರಿಸಿ, ಕನಿಷ್ಠ 2 ವರ್ಷ ಜೈಲು ಶಿಕ್ಷೆ ಜಾರಿ ಮಾಡಲಾಗುತ್ತದೆ.
*ಪ.ಬಂಗಾಲ ಮಹಿಳೆ ವಿರುದ್ಧದ ಸೈಬರ್ ಅಪರಾಧವನ್ನು “ವರ್ಚುವಲ್ ರೇಪ್’ ಅಂತಲೇ ಪರಿಗಣಿಸಿದೆ.
*ಮಹಾರಾಷ್ಟ್ರದಲ್ಲಿ ಐಟಿ ಆ್ಯಕ್ಟ್ ಅನ್ವಯ 5-7 ವರ್ಷ ಜೈಲು