Advertisement

ಸೆಲ್ಫಿಗೆ ಮತ್ತೆ ಮೂವರು ವಿದ್ಯಾರ್ಥಿಗಳು ಬಲಿ

06:25 AM Oct 04, 2017 | Harsha Rao |

ರಾಮನಗರ: ರೈಲು ಹಳಿಯ ಮೇಲೆ ಸೆಲ್ಫಿ ತೆಗೆಯುತ್ತಿದ್ದ ವೇಳೆ  ಮೂವರು ವಿದ್ಯಾರ್ಥಿಗಳು ರೈಲಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮಂಗಳವಾರ ಬೆಳಗ್ಗೆ ವಂಡರ್‌ ಲಾ ಗೇಟ್‌ ಬಳಿ ಸಂಭವಿಸಿದೆ.

Advertisement

ಬೆಂಗಳೂರು ನಗರದ ಹುಳಿಮಾವು ನಿವಾಸಿ ಜೆ. ರೋಹಿತ್‌ (18), ಕೋರಮಂಗಲ ನಿವಾಸಿ ಪ್ರಭು ಆನಂದ್‌ (18), ಬನಶಂಕರಿ ನಿವಾಸಿ ಪ್ರತೀಕ್‌ ರಾಯ್ಕರ್‌ (20) ಮೃತಪಟ್ಟಿರುವ ವಿದ್ಯಾರ್ಥಿಗಳು. ಇವರು ಬೆಂಗಳೂರಿನ ಜಯನಗರದ ನ್ಯಾಶನಲ್‌ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

ವಿಚಿತ್ರವೆಂದರೆ, ಕಳೆದ ತಿಂಗಳ 24ರಂದು ಇದೇ ಕಾಲೇಜಿನ ವಿದ್ಯಾರ್ಥಿಯೊಬ್ಬ ಸೆಲ್ಫಿ ತೆಗೆದು ಕೊಳ್ಳುತ್ತಿರುವಾಗಲೇ ನೀರಿನಲ್ಲಿ ಮುಳುಗಿ ಮೃತ ನಾಗಿದ್ದ. ಮತ್ತೆ ಅದೇ ಕಾಲೇಜಿನ ಮೂವರು ವಿದ್ಯಾರ್ಥಿಗಳು ಸೆಲ್ಫಿ ಗೀಳಿಗೆ ಸಾವನ್ನಪ್ಪಿರುವುದು ಮಾತ್ರ ವಿಷಾದದ ಸಂಗತಿ.

ಮಂಗಳವಾರ ಬೆಳಗ್ಗೆ  ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದ್ದ  ಏಳೆಂಟು ಮಂದಿಯ ತಂಡದಲ್ಲಿ ಈ ವಿದ್ಯಾರ್ಥಿಗಳು ಇದ್ದರು. ಮಂಚನಾಯ್ಕನಹಳ್ಳಿ ಸಮೀಪ ವಂಡರ್‌ ಲಾಗೆ ತೆರಳುವ ರಸ್ತೆಯಲ್ಲಿ ರೈಲು ಹಳಿ ದಾಟಲು ಸೇತುವೆ ಇದ್ದು, ಇವರು ಚಲಿಸುವ ರೈಲಿನ ಜತೆಗೆ ಸೆಲ್ಫಿ ತೆಗೆದುಕೊಳ್ಳಲು ಸೇತುವೆಗೆ ಇಳಿದಿದ್ದಾರೆ. ಬೆಂಗಳೂರು-ಮೈಸೂರು ನಡುವೆ ದ್ವಿಪಥ ರೈಲು ಮಾರ್ಗ ಇದೆ. ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಚಾಮುಂಡಿ ಎಕ್ಸ್‌ ಪ್ರಸ್‌ ರೈಲಿನ ಜತೆ ಸೆಲ್ಫಿ ತೆಗೆದುಕೊಳ್ಳಲು ಮೂವರು ವಿದ್ಯಾರ್ಥಿಗಳು ಇನ್ನೊಂದು ಮಾರ್ಗದ ಹಳಿ ಮೇಲೆ ನಿಂತಿದ್ದರು. ಇದೇ ವೇಳೆಗೆ ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ಬಂದ ಗೋಲ್‌ಗ‌ುಂಬಜ್‌ ಎಕ್ಸ್‌ಪ್ರೆಸ್‌ ರೈಲು ವಿದ್ಯಾರ್ಥಿಗಳನ್ನು  ಬಲಿ ತೆಗೆದುಕೊಂಡಿದೆ. ಸೆಲ್ಫಿ  ತೆಗೆದುಕೊಳ್ಳುವಾಗ ಚಾಮುಂಡಿ ಎಕ್ಸ್‌ಪ್ರೆಸ್‌ ರೈಲಿನ ಸದ್ದಿಗೆ, ಗೋಲ್‌ಗ‌ುಂಬಜ್‌ ರೈಲಿನ ಸದ್ದು ಬಹುಶಃ ವಿದ್ಯಾರ್ಥಿಗಳಿಗೆ  ಕೇಳಿಸಲಿಲ್ಲ ಎಂದು ಹೇಳಲಾಗಿದೆ.

ವಾರದ ಹಿಂದಷ್ಟೇ ವಿದ್ಯಾರ್ಥಿ ಬಲಿ
ಸೆ. 24ರಂದು ರಾಮನಗರದ ರಾಮಗೊಂಡ್ಲು ಗ್ರಾಮಕ್ಕೆ ಎನ್‌ಸಿಸಿ ಕ್ಯಾಂಪ್‌ಗೆಂದು ಹೋಗಿದ್ದ ವಿದ್ಯಾರ್ಥಿಗಳು ಕಲ್ಯಾಣಿಗೆ ಇಳಿದು ಸೆಲ್ಫಿ ತೆಗೆದುಕೊಳ್ಳುವಾಗ ವಿಶ್ವಾಸ್‌ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದ. ವಿಚಿತ್ರವೆಂದರೆ ಅಂದೂ ಸೆಲ್ಫಿ ದುರಂತಕ್ಕೆ ಬಲಿಯಾದದ್ದು ನ್ಯಾಶನಲ್‌ ಕಾಲೇಜಿನ ವಿದ್ಯಾರ್ಥಿಯೇ. ಅಂದು ಉಳಿದ ವಿದ್ಯಾರ್ಥಿಗಳು ಖುಷಿಯಿಂದ ಸೆಲ್ಫಿ ತೆಗೆದು ಕೊಳ್ಳುತ್ತಿರುವಾಗ ವಿಶ್ವಾಸ್‌ ಮುಳುಗು ತ್ತಿರುವ ದೃಶ್ಯವೂ ಸೆರೆಯಾಗಿತ್ತು. ಈಗ ಮತ್ತೆ ಅದೇ ಕಾಲೇಜಿನ ಮೂವರು ವಿದ್ಯಾರ್ಥಿಗಳು ಸೆಲ್ಫಿ ಹುಚ್ಚಿಗೆ ಪ್ರಾಣ ಕಳೆದುಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next