Advertisement

Kumbra ಜಂಕ್ಷನ್‌ನಲ್ಲಿ ಈಗ ಸೆಲ್ಫಿ ಪಾಯಿಂಟ್‌ ಆಕರ್ಷಣೆ!

12:52 PM Dec 21, 2024 | Team Udayavani |

ಬಡಗನ್ನೂರು: ಪುತ್ತೂರು ತಾಲೂಕಿನ ಪ್ರಮುಖ ಜಂಕ್ಷನ್‌ಗಳಲ್ಲಿ ಒಂದಾಗಿ ಬೆಳೆಯುತ್ತಿರುವ ಕುಂಬ್ರ ಈಗ ಸೆಲ್ಫಿ ಪಾಯಿಂಟ್‌ ಮೂಲಕ ತನ್ನ ಆಕರ್ಷಣೆಯನ್ನು ಹೆಚ್ಚಿಸಿಕೊಂಡಿದೆ. ಕುಂಬ್ರ ವರ್ತಕರ ಸಂಘದ 20ನೇ ವರ್ಷಾಚರಣೆ ಸಂಭ್ರಮದಲ್ಲಿ ಸ್ವತ್ಛ ಗ್ರಾಮದ ಪರಿಕಲ್ಪನೆಯ ‘ಪೊರ್ಲುದ ಕುಂಬ್ರ’ ಸೆಲ್ಫಿ ಪಾಯಿಂಟ್‌ ರೂಪಿಸಲಾಗಿದ್ದು, ಇದೀಗ ಹಲವಾರು ಮಂದಿ ಇದನ್ನು ವೀಕ್ಷಿಸಿ ಫೋಟೊ ತೆಗೆದುಕೊಳ್ಳುತ್ತಿದ್ದಾರೆ.

Advertisement

ಕುಂಬ್ರ ಜಂಕ್ಷನ್‌ನ ಒಂದು ಬದಿಯಲ್ಲಿ ರಸ್ತೆಗೆ ಹೊಂದಿಕೊಂಡಂತೆ ರೂಪಿಸಿರುವ ಸೆಲ್ಫಿ ಪಾಯಿಂಟ್‌ನಲ್ಲಿ ಆಕರ್ಷಕ ಎತ್ತಿನ ಗಾಡಿ, ಚಕ್ರದ ಚಿಹ್ನೆಗಳುಳ್ಳ ಆಕರ್ಷಕ ಸ್ತಂಭ ಗೋಪುರಗಳನ್ನು ನಿರ್ಮಿಸಲಾಗಿದೆ. ಹಿಂದೆ ಬಾಂತಲಪ್ಪು ಎಂಬ ಹೆಸರನ್ನು ಹೊಂದಿದ್ದ ಕುಂಬ್ರದ ಇತಿಹಾಸ ಕಥೆಯನ್ನು ಹೊತ್ತ ಫ‌ಲಕವೂ ಇಲ್ಲಿದೆ. ಈ ಸೆಲ್ಫಿ ಪಾಯಿಂಟ್‌ಗೆ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ಪುತ್ತೂರು-ಸುಳ್ಯ ಮಾರ್ಗದಲ್ಲಿ ಸಂಚರಿಸುವ ಪ್ರವಾಸಿಗರು ಗಮನಿಸಿ ಫೋಟೊ ತೆಗೆದುಕೊಳ್ಳುತ್ತಿದ್ದಾರೆ.

ತುಳುನಾಡಿನ ಸಂಸ್ಕೃತಿ ಬಿಂಬಿಸುವ ಸೆಲ್ಫಿ ಪಾಯಿಂಟ್‌ ನಿರ್ಮಿಸಿದ ಆಕರ್ಷಣ್‌ ಇಂಡಸ್ಟ್ರೀಸ್‌ನವರ ಕಾರ್ಯ ಶ್ಲಾಘನೀಯ ಎನ್ನುತ್ತಾರೆ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು. ಗೆಳೆಯ ನಾರಾಯಣ ಆಚಾರ್‌ ಎತ್ತಿನಗಾಡಿ ಕಲ್ಪನೆ ಕೊಟ್ಟಿದ್ದಷ್ಟೇ ಅಲ್ಲ,

ಎತ್ತಿನ ಗಾಡಿ ನಿರ್ಮಿಸಿಯೂ ಕೊಟ್ಟಿದ್ದಾರೆ ಎನ್ನುತ್ತಾರೆ ಆಕರ್ಷಣ್‌ ಇಂಡಸ್ಟ್ರೀಸ್‌ ಮಾಲಕ ಮಹಮ್ಮದ್‌ ಸಾದಿಕ್‌ ಹಾಜಿ. ಸ್ವತ್ಛ ಕುಂಬ್ರ ಕ್ಕಾಗಿ ನಾವೆಲ್ಲರೂ ಕೈ ಜೋಡಿಸಬೇಕಾಗಿದೆ ಎನ್ನುವುದು ವರ್ತಕರ ಸಂಘದ ಅಧ್ಯಕ್ಷ ರಫೀಕ್‌ ಅಲ್‌ರಾಯ ಅವರ ಮಾತು.

Advertisement

ಕುಂಬ್ರಕ್ಕಿದೆ ಎತ್ತಿನ ಗಾಡಿ ನಂಟು!
ಮಂಗಳೂರು, ಬಂಟ್ವಾಳ, ಕಲ್ಲಡ್ಕ ಭಾಗದಿಂದ ಮಡಿಕೇರಿ, ಸುಳ್ಯ ಇತ್ಯಾದಿ ಕಡೆಗಳಿಗೆ ಸರಕು ಸಾಮಗ್ರಿಗಳನ್ನು ಎತ್ತಿನ ಗಾಡಿಯಲ್ಲಿ ಹೇರಿಕೊಂಡು ಬರುತ್ತಿದ್ದ ವ್ಯಾಪಾರಿಗಳು ರಾತ್ರಿ ವೇಳೆ ಕುಂಬ್ರದಲ್ಲಿ ತಂಗುತ್ತಿದ್ದರು. ಅದೇ ರೀತಿ ಮಡಿಕೇರಿ, ಸುಳ್ಯ ಭಾಗದಿಂದ ಬರುತ್ತಿದ್ದ ಎತ್ತಿನ ಗಾಡಿಗಳಿಗೂ ಇದುವೇ ತಂಗುದಾಣ. ಎತ್ತಿನ ಗಾಡಿಯಲ್ಲಿದ್ದವರಿಗೆ ಮತ್ತು ಎತ್ತುಗಳಿಗೆ ಇಲ್ಲಿನ ಜನರು ಆಹಾರಗಳನ್ನು ನೀಡುತ್ತಿದ್ದರು. ಇದನ್ನು ನೆನಪು ಮಾಡುವ ಸಲುವಾಗಿ ಇಲ್ಲಿ ಎತ್ತಿನ ಗಾಡಿಯನ್ನು ನಿಲ್ಲಿಸಲಾಗಿದೆ. ಒಂದು ಕಾಲದಲ್ಲಿ ವಿಟ್ಲ ಮತ್ತು ಪಂಜ ಸೀಮೆಯ ಗಡಿ ಪ್ರದೇಶವಾಗಿದ್ದ ಈಗಿನ ಕುಂಬ್ರದಲ್ಲಿ ಹಿಂದೆ ಗಡಿ ಕಲ್ಲು ಒಂದು ಇದ್ದುದರಿಂದ ‘ಬಾಂತಲಪ್ಪು’ ಎಂಬ ಹೆಸರಿತ್ತಂತೆ.

-ದಿನೇಶ್‌ ಬಡಗನ್ನೂರು

Advertisement

Udayavani is now on Telegram. Click here to join our channel and stay updated with the latest news.

Next