Advertisement

ನಗರದ ಮೂರು ಕಡೆ ಸುಲಿಗೆಕೋರರ  ಅಟ್ಟಹಾಸ

06:31 AM Feb 13, 2019 | Team Udayavani |

ಬೆಂಗಳೂರು: ನಗರದಲ್ಲಿ ದರೋಡೆ, ಸುಲಿಗೆ ಪ್ರಕರಣಗಳು ಮಿತಿ ಮೀರಿದೆ. ಪ್ರತ್ಯೇಕ ಪ್ರಕರಣಗಳಲ್ಲಿ ಸಾರಾಯಿ ಪಾಳ್ಯದ ಬಳಿ 1.50 ಲಕ್ಷ ರೂ. ದರೋಡೆ ಮತ್ತು ಡಬಲ್‌ರೋಡ್‌ ರಸ್ತೆಯ ಪೆಟ್ರೋಲ್‌ ಬಂಕ್‌ ಬಳಿ ದರೋಡೆ ಯತ್ನ ನಡೆದಿದೆ. ದಾಸರಹಳ್ಳಿ ಬಳಿ ದರೋಡೆ ಹಲ್ಲೆನಡೆಸಿ ಮೊಬೈಲ್‌ ದೋಚಿದ್ದಾರೆ. 

Advertisement

ನಾಲ್ವರು ಅಪರಿಚಿತ ದುಷ್ಕರ್ಮಿಗಳು ಚಿಲ್ಲರೆ ಅಂಗಡಿಗಳಿಗೆ ಸಿಗರೇಟ್‌ ಹಂಚಿಕೆದಾರನನ್ನು (ಡಿಸ್ಟ್ರಿಬ್ಯೂಟರ್‌) ಹಿಂಬಾಲಿಸಿ ಆತನನ್ನು ಬೈಕ್‌ನಿಂದ ಕೆಳಗೆ ಬೀಳಿಸಿ 1.50 ಲಕ್ಷ ರೂ. ದರೋಡೆ ಮಾಡಿರುವ ಘಟನೆ ಸಾರಾಯಿಪಾಳ್ಯ ರಸ್ತೆಯಲ್ಲಿ ನಡೆದಿದೆ.

ಅಶ್ವತ್ಥ್ನಗರದ ನಿವಾಸಿ ಸೈಯದ್‌ ಹಣ ಕಳೆದುಕೊಂಡವರು. ಸಿಗರೇಟ್‌ ಡಿಸ್ಟ್ರಿಬ್ಯೂಟರ್‌ ಆಗಿರುವ ಸೈಯದ್‌ ಸೋಮವಾರ ಸಂಜೆ ಕೆಲವು ಅಂಗಡಿಗಳಿಂದ ಹಣ ಸಂಗ್ರಹಿಸಿ ಬ್ಯಾಗ್‌ನಲ್ಲಿಟ್ಟುಕೊಂಡು ಸಂಜೆ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು.

ಈ ವೇಳೆ ಎರಡು ಪ್ರತ್ಯೇಕ ಬೈಕ್‌ಗಳಲ್ಲಿ ಅವರನ್ನು ಹಿಂಬಾಲಿಸಿರುವ ನಾಲ್ವರು ದುಷ್ಕರ್ಮಿಗಳು ಸಾರಾಯಿಪಾಳ್ಯದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆಸಿದ್ದು ಸೈಯದ್‌ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಅವರನ್ನು ಬೈಯುತ್ತಾ ಜಗಳ ಆರಂಭಿಸಿದ ದುಷ್ಕರ್ಮಿಗಳು ಕೆಲವೇ ಕ್ಷಣಗಳಲ್ಲಿ ಹಣವಿದ್ದ ಬ್ಯಾಗ್‌ ಕಸಿದುಕೊಂಡು ಪರಾರಿಯಾಗಿದ್ದಾರೆ. ಸೈಯದ್‌ ಹೆಣ್ಣೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಚಾಕುವಿನಿಂದ ಇರಿದು ಸುಲಿಗೆ ಯತ್ನ: ಡಬಲ್‌ರೋಡ್‌ ರಸ್ತೆಯ ಪೆಟ್ರೋಲ್‌ ಬಂಕ್‌ ಸಮೀಪ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಸುಲಿಗೆಗೆ ವಿಫ‌ಲ ಯತ್ನ ನಡೆಸಿರುವ ದುಷ್ಕರ್ಮಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

Advertisement

ಆಂಜನೇಯಲು ಗಾಯಗೊಂಡ ಗಾಯಗೊಂಡ ವ್ಯಕ್ತಿ. ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿರುವ ಆಂಜನೇಯಲು ಕೆಲಸ ಮುಗಿಸಿಕೊಂಡು ಸೋಮವಾರ ತಡರಾತ್ರಿ ಡಬಲ್‌ರೋಡ್‌ ಸಮೀಪ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಹಿಂಬಾಲಿಸಿದ ದುಷ್ಕರ್ಮಿಯೊಬ್ಬ ಅವರ ಬಳಿ ಮೊಬೈಲ್‌ ಹಾಗೂ ಹಣ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಇದಕ್ಕೆ ಪ್ರತಿರೋಧ ತೋರಿದ್ದಕ್ಕೆ ಆಂಜನೇಯಲು ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ವಾಹನ ಸವಾರರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಕಂಬಿಯಿಂದ ಹಲ್ಲೆ: ಮತ್ತೂಂದು ಘಟನೆಯಲ್ಲಿ ದಾಸರಹಳ್ಳಿ ರಸ್ತೆ ಸಮೀಪ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿದ ದುಷ್ಕರ್ಮಿ ಮೊಬೈಲ್‌ ಕಿತ್ತುಕೊಳ್ಳಲು ಯತ್ನಿಸಿ ಕಬ್ಬಿಣದ ಕಂಬಿಯಿಂದ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

ಸೆಕ್ಯೂರಿಟಿ ಗಾರ್ಡ್‌ ಆಗಿರುವ ಚಂದ್ರಶೇಖರಯ್ಯ ಫೆ.11ರ ಬೆಳಗ್ಗೆ 5.30ರ ಸುಮಾರಿಗೆ ಕೆಲಸಕ್ಕೆ ಹೋಗಲು ನಡೆದುಕೊಂಡು ಹೋಗುತ್ತಿದ್ದಾಗ ಅವರನ್ನು ಬೈಕ್‌ನಲ್ಲಿ ಹಿಂಬಾಲಿಸಿದ ದುಷ್ಕರ್ಮಿ ಅವರನ್ನು ಅಡ್ಡಗಟ್ಟಿ ಮೊಬೈಲ್‌ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪ್ರತಿರೋಧ ತೋರಿದ್ದಕ್ಕೆ ಅವರಿಗೆ ಕಬ್ಬಿಣದ ಕಂಬಿಯಿಂದ ತಲೆಗೆ ಒಡೆದು ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next