ಬೆಂಗಳೂರು: ಕರ್ನಾಟಕ ಕ್ವಾಲಿಫೈಡ್ ಹೋಮಿಯೋಪಥಿ ಡಾಕ್ಟರ್ ಅಸೋಸಿಯೇಷನ್ಸ್ (ಕೆಕ್ಯೂಎಚ್‌ಡಿಎ)ನ ರಜತ ಮಹೋತ್ಸವ ಅಂಗವಾಗಿ ನಿಮ್ಹಾನ್ಸ್ ಆಸ್ಪತ್ರೆಯ ಸಮ್ಮೇಳನಾ ಕೇಂದ್ರದಲ್ಲಿ ಸೆ.8 ರಿಂದ 10ರವರೆಗೆ ಮೂರು ದಿನಗಳ ಅಂತಾರಾಷ್ಟ್ರೀಯ ಹೋಮಿಯೋಪಥಿಕ್ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ. ಬಿ.ಡಿ. ಪಟೇಲ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “8 ರಂದು ಹೋಮಿಯೋಪಥಿ ಸಂಶೋಧನಾ ಕೇಂದ್ರ ಕೌನ್ಸಿಲ್‌ನ ಮಹಾನಿರ್ದೇಶಕ ಡಾ. ಆರ್.ಕೆ. ಮನ್‌ಚಂದ್ ಅವರು ವೈಜ್ಞಾನಿಕ ಅಧಿವೇಶನ ಉದ್ಘಾಟಿಸಲಿದ್ದು, 9ರಂದು ಕೇಂದ್ರ ಆಯುಷ್ ಸಚಿವ ಶ್ರೀಪಾದ್ ಯೆಸೊ ನಾಯ್ಕ ಅವರು ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಅಂತಿಮ ದಿನ ಪದ್ಮಶ್ರೀ ಡಾ. ಬಿ.ಎಂ. ಹೆಗ್ಡೆ ಅವರು ಸಮಾರೋಪ ನುಡಿಗಳನ್ನಾಡಲಿದ್ದಾರೆ,’ ಎಂದರು.
“ವೈದ್ಯ ಪದ್ಧತಿ ಎಂದರೆ ಅಲೋಪಥಿ ಎಂಬಂತಾಗಿದೆ. ಆದರೆ, ಹೋಮಿಯೋಪಥಿಯಲ್ಲೂ ಎಲ್ಲ ರೋಗಗಳನ್ನು ಗುಣಪಡಿಸುವ ಔಷಧಗಳಿವೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಸಮ್ಮೇಳನದ ಮುಖ್ಯ ಉದ್ದೇಶ “ಕೇಸ್ ಆ್ಯಂಡ್ ಕಾನ್ಸೆಪ್ಟ್’ ರೋಗಗಳ ನಿದರ್ಶನಪೂರ್ವಕ ನಿರೂಪಣೆ ಹಾಗೂ ಅದಕ್ಕೆ ಚಿಕಿತ್ಸೆ ನೀಡಿ ಗುಣಪಡಿಸಿದ ಹೋಮಿಯೋಪಥಿ ವೈಜ್ಞಾನಿಕ ಪುರಾವೆ ಒದಗಿಸುವುದು.
ಸಮ್ಮೇಳದಲ್ಲಿ ದೇಶದ ಖ್ಯಾತ ಹೋಮಿಯೋಪಥಿ ವೈದ್ಯರು, ವಿದೇಶಿ ವೈದ್ಯರು ಮತ್ತು ವಿಜ್ಞಾನಿಗಳು ವಿಷಯ ಮಂಡಿಸಲಿದ್ದಾರೆ. ಈ ಸಂದರ್ಭದಲ್ಲಿ ಹೋಮಿಯೋಪಥಿಯನ್ನು ಜನಮನಕ್ಕೆ ತಲುಪಿಸುವ ಕಾರ್ಯದಲ್ಲಿ ನಿರತರಾಗಿರುವ ಹೆಸರಾಂತ ಡಾ. ಅನುರುದ್ ವರ್ಮ, ಡಾ. ಅರವಿಂದ್ ಕೋತೆ, ಡಾ. ಮನಿಶ್ ಭಾರ್ತಿ, ಡಾ. ಮೋಹನ್ ಅಮಲಾಪುರಂ, ಡಾ. ರಾಮೇಶ್ವರಂ ರಾವ್, ಡಾ. ಉಮೇಶ್ ವನಹಳ್ಳಿ, ಡಾ. ಉತ್ತಮ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು,’ ಎಂದು ಅವರು ವಿವರಿಸಿದರು.
ಹೋಮಿಯೋ ಆಚಾರ್ಯ ಪ್ರಶಸ್ತಿ: ಹೋಮಿಯೋಪಥಿಯ ಅತ್ತುತ್ತಮ ಒಬ್ಬ ಶಿಕ್ಷಕರಿಗೆ ನೀಡುವ “ಹೋಮಿಯೋ ಆಚಾರ್ಯ ಪ್ರಶಸ್ತಿ’ ಈ ವರ್ಷ ಮಂಗಳೂರಿನ ಫಾದರ್ ಮುಲ್ಲರ್ಸ್ ಹೋಮಿಯೋಪಥಿಕ್ ಕಾಲೇಜಿನ ಪ್ರಾಂಶುಪಾಲ ಡಾ. ಶಿವಪ್ರಸಾದ್‌ರವರಿಗೆ ನೀಡಲಾಗುತ್ತದೆ ಎಂದು ಸಂಘದ ಕಾರ್ಯದರ್ಶಿ ಪ್ರೊ.ಡಾ. ಹೆಚ್.ಎಲ್. ಸ್ವಾಮಿ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಡಾ. ಪಿ.ಡಿ. ಪ್ರವೀಣ್ ಕುಮಾರ್, ಡಾ. ಬಿ.ಟಿ. ರುದ್ರೇಶ್, ಡಾ. ಬಿ.ಆರ್. ಶ್ರೀನಿವಾಸ್, ಡಾ. ಶ್ರೀನಿವಾಸುಲು, ಡಾ. ಪ್ರೀತಿ ಸತೀಶ್ ಉಪಸ್ಥಿತರಿದ್ದರು.