ಭಾರತಕ್ಕೆ ಅಕ್ರಮವಾಗಿ ನುಸುಳುವ ಬಾಂಗ್ಲಾದೇಶಿಯರು ಬಂಗಾಲದಿಂದ ರಾಜ್ಯಕ್ಕೆ ಆಗಮಿಸುವ ವಲಸಿಗ ಕಾರ್ಮಿಕರೊಂದಿಗೆ ಸೇರಿಕೊಳ್ಳುತ್ತಾರೆ. ರಾಜ್ಯದಲ್ಲಿ ಸಂಭವಿಸಿದ ದರೋಡೆ ಪ್ರಕರಣಗಳ ತನಿಖೆ ವೇಳೆ ಸಹಸ್ರಾರು ಅಕ್ರಮ ಬಾಂಗ್ಲಾ ವಲಸಿಗರು ಇಲ್ಲಿ ವಾಸ್ತವ್ಯ ಹೂಡಿರುವ ವಿಚಾರ ಬೆಳಕಿಗೆ ಬಂದಿದೆ. ಅವರು ಬಾಂಗ್ಲಾದೇಶಕ್ಕೆ ಮಾಡುತ್ತಿರುವ ಫೋನ್ ಕರೆಗಳ ವಿವರಗಳನ್ನು ಕೂಡ ಸೈಬರ್ ಪೊಲೀಸರು ಕಲೆಹಾಕಿದ್ದಾರೆ.
Advertisement
ಮಲಯಾಳ ದೈನಿಕವೊಂದರ ಸುದ್ದಿ ಸಂಪಾದಕ ವಿನೋದ್ ಚಂದ್ರನ್ ಮತ್ತು ಅವರ ಪತ್ನಿಯ ಮೇಲೆ ದಾಳಿ ನಡೆಸಿ ದರೋಡೆಗೈಯಲಾದ ಪ್ರಕರಣದ ತನಿಖೆ ವೇಳೆ ಕಣ್ಣೂರು ಒಂದರಲ್ಲೇ ನೂರಾರು ಬಾಂಗ್ಲಾದೇಶಿಯರು ಅಕ್ರಮವಾಗಿ ವಾಸಿಸುತ್ತಿರುವ ವಿಚಾರ ಪೊಲೀಸರ ಗಮನಕ್ಕೆ ಬಂದಿತು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅಸಂಖ್ಯ ದೂರವಾಣಿ ಕರೆಗಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಾಂಗ್ಲಾದೇಶಕ್ಕೆ 1,000ಕ್ಕೂ ಅಧಿಕ ಕರೆಗಳನ್ನು ಮಾಡಲಾಗಿರುವುದು ಬೆಳಕಿಗೆ ಬಂದಿದೆ. ಬಾಂಗ್ಲಾದೇಶಿಯರನ್ನು ಪತ್ತೆ ಮಾಡುವುದಕ್ಕೆ ಗೃಹ ಖಾತೆ ತನ್ನಲ್ಲಿರುವ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿಲ್ಲವೆಂದು ಆಪಾದಿಸಲಾಗಿದೆ. ಬಾಂಗ್ಲಾದೇಶಿಯರು ಜೀವನೋಪಾಯ ಅರಸುತ್ತ ಬಂಗಾಲಿಗಳೊಂದಿಗೆ ರಾಜ್ಯಕ್ಕೆ ಆಗಮಿಸುತ್ತಾರೆ. ಆದರೆ ಅವರು ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದಕ್ಕೆ ಪೊಲೀಸರಿಗೆ ಈತನಕ ಯಾವುದೇ ಪುರಾವೆ ಸಿಕ್ಕಿಲ್ಲ.
ಬಾಂಗ್ಲಾದೇಶಿಯರು ಪಾಲ್ಗೊಂಡ ಎರಡು ಪ್ರಮುಖ ದರೋಡೆ ಪ್ರಕರಣಗಳು ರಾಜ್ಯದಲ್ಲಿ ಸಂಭವಿಸಿವೆ. ಒಂದು ಘಟನೆ ಎರ್ನಾಕುಳಂನಲ್ಲಿ ಸಂಭವಿಸಿದರೆ ಇನ್ನೊಂದು ಘಟನೆ ಕಣ್ಣೂರಿನಲ್ಲಿ ಸಂಭವಿಸಿತ್ತು. ಎರಡೂ ಪ್ರಕರಣಗಳಲ್ಲಿ ಒಂದೇ ತಂಡ ಭಾಗಿಯಾಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಕರ್ನಾಟಕ ಹಾಗೂ ತಮಿಳುನಾಡಿನಿಂದಲೂ ಇದೇ ಬಗೆಯ ದರೋಡೆ ಪ್ರಕರಣಗಳು ವರದಿಯಾಗಿವೆ. ಕಣ್ಣೂರು ಪ್ರಕರಣದ ದುಷ್ಕರ್ಮಿಗಳನ್ನು ಬಹುತೇಕ ಗುರುತಿಸಲಾಗಿದ್ದು ಈಗ ಅವರು ಬಾಂಗ್ಲಾದೇಶದಲ್ಲಿದ್ದಾರೆಂದು ನಂಬಲಾಗಿದೆ. ಆದರೆ ಉಭಯ ರಾಷ್ಟ್ರಗಳ ನಡುವೆ ಗಡೀಪಾರು ಒಪ್ಪಂದ ಇಲ್ಲದಿರುವುದರಿಂದ ಪೊಲೀಸರು ಸಂದಿಗ್ಧಕ್ಕೆ ಸಿಲುಕಿದ್ದಾರೆ. ದರೋಡೆ ತಂಡಗಳು ರೈಲ್ವೇ ಹಳಿಗಳ ಪಕ್ಕದಲ್ಲಿರುವ ಮನೆಗಳನ್ನು ಗುರಿಯಾಗಿಸುತ್ತಾರೆಂದು ಪೊಲೀಸರು ಕಂಡುಕೊಂಡಿದ್ದಾರೆ. ಮೊದಲು ಮನೆಯನ್ನು ಪತ್ತೆ ಮಾಡುವುದು ಹಾಗೂ ದರೋಡೆ ಎಸಗಿದ ಕೂಡಲೇ ಪ್ರದೇಶದಿಂದ
ತಪ್ಪಿಸಿಕೊಳ್ಳುವುದು ಅವರ ಕಾರ್ಯಾಚರಣಾ ಶೈಲಿಯಾಗಿದೆ. ಈ ತಂಡವನ್ನು ಸೆರೆಹಿಡಿದಲ್ಲಿ ಅನೇಕ ದರೋಡೆ ಪ್ರಕರಣಗಳ ಕುರಿತು ಸುಳಿವು ಸಿಗಬಹುದೆಂಧು ಪೊಲೀಸರು ಭಾವಿಸಿದ್ದಾರೆ.
Related Articles
ಬಾಂಗ್ಲಾದೇಶಿಯರು ತಮ್ಮ ಊರಿಗೆ ನೇರವಾಗಿ ಹಣ ಕಳುಹಿಸುವುದಿಲ್ಲ. ಈ ರೀತಿ ಮಾಡಿದರೆ ಸಿಕ್ಕಿ ಬೀಳುವ ಅಪಾಯ ಇರುವುದರಿಂದ ಬಂಗಾಲದಲ್ಲಿರುವ ಕೆಲ ಏಜೆಂಟರ ಮೂಲಕ ಅವರು ಹಣವನ್ನು ಕಳುಹಿಸುತ್ತಾರೆ. ಇಲ್ಲಿಂದ ಕದ್ದ ಮೊಬೈಲ್ ಫೋನ್‌ಗಳನ್ನು ಕೂಡ ಅವರು ತಮ್ಮ ದೇಶಕ್ಕೆ ತಲಪಿದ ಬಳಿಕವೇ ಬಳಸುತ್ತಾರೆ. ದಿಲ್ಲಿಯ ಸೀಮಾಪುರಿ ಸುತ್ತಮುತ್ತ ಕೇಂದ್ರೀಕೃತಗೊಂಡಿರುವ ಚಿನ್ನವಹಿವಾಟು ವ್ಯವಸ್ಥೆಯನ್ನು ಕೂಡ ಅವರು ಹೊಂದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Advertisement