Advertisement

ಛಾಯಾಗ್ರಾಹಕರಿಗೆ ಆರೋಗ್ಯ ಚೀಟಿ ನೀಡಲು ಚಿಂತನೆ

12:52 AM Aug 20, 2019 | Lakshmi GovindaRaj |

ಬೆಂಗಳೂರು: ಛಾಯಾಗ್ರಾಹಕರಿಗೆ ಆರೋಗ್ಯ ಚೀಟಿ ಹಾಗೂ ಸಂಘಕ್ಕೆ ಧನ ಸಹಾಯ ನೀಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಮೇಯರ್‌ ಗಂಗಾಂಬಿಕೆ ಭರವಸೆ ನೀಡಿದರು. ಬೆಂಗಳೂರು ಛಾಯಾಗ್ರಾಹಕರ ಸಂಘ ಸೋಮವಾರ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ವಿಶ್ವ ಛಾಯಾಗ್ರಾಹಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಛಾಯಾಚಿತ್ರ ತೆಗೆಯಲು ತಮ್ಮ ಜೀವವನ್ನು ಲೆಕ್ಕಿಸದೇ ತೆರಳುವ ಛಾಯಾಗ್ರಾಹಕರಿಗೆ ಜೀವನದ ಭದ್ರತೆ ಅವಶ್ಯಕವಾಗಿದೆ. ಹೀಗಾಗಿ ಅವರ ಸಂಘಕ್ಕೆ ನೆರವು ನೀಡಲು ಪಕ್ಷಾತೀತವಾಗಿ ಎಲ್ಲ ನಾಯಕರು ಪ್ರಯತ್ನಿಸಲಾಗುವುದು. ಕೆಲ ಚಿತ್ರಗಳು ಶಾಶ್ವತವಾಗಿ ಉಳಿದು ಅವು ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುತ್ತವೆ. ಛಾಯಾಗ್ರಾಹಕರಿಂದ ನಮ್ಮ ಜೀವನದ ಮರೆಯಲಾರದ ಕ್ಷಣಗಳು ಸೆರೆಯಾಗುತ್ತವೆ. ಎಷ್ಟೇ ವರ್ಷಗಳು ಕಳೆದರೂ ಛಾಯಾಚಿತ್ರಗಳು ಹಳೆಯ ನೆನಪುಗಳಿಗೆ ಸಾಕ್ಷಿಯಾಗಿರುತ್ತವೆ ಎಂದು ತಿಳಿಸಿದರು.

ಉಪಮೇಯರ್‌ ಭದ್ರೇಗೌಡ ಮಾತನಾಡಿ, ಹವ್ಯಾಸಿ ಛಾಯಾಗ್ರಾಹಕರಿಗೆ ಹೋಲಿಸಿದರೆ ಪತ್ರಿಕಾ ಛಾಯಾಗ್ರಾಹಕರಿಗೆ ಸ್ವಾತಂತ್ರ ಕಡಿಮೆ ಇರುತ್ತದೆ. ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ಇವರಿಗೆ ನೆರವು ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ತಂತ್ರಜ್ಞ ನರಸಿಂಹ ಅವರನ್ನು ಸನ್ಮಾನಿಸಲಾಯಿತು.

ಹೇಳಿಕೆಗಳಿಗಿಂತ ಛಾಯಾಚಿತ್ರಕ್ಕೆ ಮಹತ್ವ: ಛಾಯಾಗ್ರಾಹಕರ ಸಂಘದ ವತಿಯಿಂದ ಆಯೋಜಿಸಿದ್ದ “ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಛಾಯಾಚಿತ್ರ ಪತ್ರಿಕೋದ್ಯಮದ ಮುಂದಿರುವ ಸವಾಲುಗಳು’ ವಿಚಾರ ಸಂಕಿರಣದಲ್ಲಿ ಸೈಬರ್‌ ಕ್ರೈಂ ಪೊಲೀಸ್‌ ಠಾಣಾಧಿಕಾರಿ ಕೆ.ಎನ್‌.ಯಶವಂತಕುಮಾರ್‌ ಮಾತನಾಡಿ, ಛಾಯಾಚಿತ್ರಗಳನ್ನು ಡಿಜಿಟಲ್‌ ಸಾಕ್ಷಿಗಳೆಂದು ಪರಿಗಣಿಸಲಾಗುತ್ತದೆ.

ಅಪರಾಧ ಪ್ರಕರಣಗಳಲ್ಲಿ ಹೇಳಿಕೆಗಳಿಗಿಂತ ಛಾಯಾಚಿತ್ರಗಳು ಹೆಚ್ಚು ದೃಢತೆ ಹೊಂದಿರುತ್ತದೆ ಎಂದರು. ಹಿರಿಯ ಛಾಯಾಗ್ರಾಹಕ ಕೆಂಪಣ್ಣ ಮಾತನಾಡಿ, ವೀರಪ್ಪನ್‌ ಸೆರೆಯಿಂದ ಮರಳಿದ ನಟ ಡಾ. ರಾಜ್‌ಕುಮಾರ್‌ ಅವರು ವಿಮಾನ ನಿಲ್ದಾಣಕ್ಕೆ ಬಂದ ಕೂಡಲೇ ನೆಲಕ್ಕೆ ನಮಸ್ಕರಿಸಿದ ಅಪರೂಪದ ಚಿತ್ರ ಮನೆ ಮಾತಾಗಿತ್ತು. ಇಂತಹ ಛಾಯಾಚಿತ್ರಗಳು ಸೆರೆಹಿಡಿಯಬೇಕಾದರೆ ಛಾಯಾಗ್ರಾಹಕನಿಗೆ ಮೈಯೆಲ್ಲಾ ಕಣ್ಣಾಗಿರಬೇಕು.

Advertisement

ಆಸಕ್ತ ವಿದ್ಯಾರ್ಥಿಗಳು ಹಿರಿಯ ಛಾಯಾಗ್ರಾಹಕನ ಮಾರ್ಗದರ್ಶನ ಪಡೆದರೆ ಅತ್ಯುತ್ತಮ ಫೋಟೊ ಕ್ಲಿಕ್ಕಿಸಬಹುದು ಎಂದು ಸಲಹೆ ನೀಡಿದರು. ಬೆಂಗಳೂರು ವಿವಿ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ಮಾತನಾಡಿ, ಒಂದು ಚಿತ್ರ ಸಾವಿರ ಪದಕ್ಕೆ ಸಮವಾಗಿದ್ದು, ಛಾಯಾಚಿತ್ರಗಳನ್ನು ವರ್ಣಿಸಲು ಪದಗಳೇ ಸಿಗುವುದಿಲ್ಲ. ಫೋಟೊ ಸುದ್ದಿಯ ಸಾರಾಂಶ ತಿಳಿಸುತ್ತದೆ. ನನ್ನ ಪ್ರಕಾರ ನಮ್ಮ ಕಣ್ಣುಗಳೇ ಮೊದಲ ಕ್ಯಾಮೆರಾ ಎಂದು ವರ್ಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next