ಬೆಂಗಳೂರು: ಸದನ ಸಮಿತಿಯ ಕಾರ್ಯಭಾರಕ್ಕೆ ಮೊದಲ ಬಾರಿಗೆ ಅಡ್ಡಿಯಾಗಿದ್ದು, ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಚಿಂತನೆ ನಡೆದಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್. ಕೆ.ಪಾಟೀಲ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿ ಭೇಟಿಗೆ ಸ್ಪೀಕರ್ ಅವಕಾಶ ನಿರಾಕರಿಸುವ ಮೂಲಕ ಶಾಸನ ಸಭೆಯ ಕರ್ತವ್ಯಕ್ಕೆ ಧಕ್ಕೆಯುಂಟು ಮಾಡಿದ್ದಾರೆ ಎಂದು ದೂರಿದ ಅವರು, ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ಸಂಬಂಧ ಜೂ.2ರ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕವಾಗಿ ಬಹಿರಂಗಪಡಿಸಿ: ಕೊರೊನಾ ಹಿನ್ನೆಲೆಯಲ್ಲಿ ಸ್ಯಾನಿಟೈಸರ್, ಮಾಸ್ಕ್ , ವೆಂಟಿಲೇಟರ್ ಗಳನ್ನು ಎಷ್ಟು ಹಣಕ್ಕೆ ಖರೀದಿ ಮಾಡಲಾಗಿದೆ ಎಂಬುದರ ಬಗ್ಗೆ ವಿವರವಾದ ವರದಿಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಒಪ್ಪಿಸಿ, ಆರೋಗ್ಯ ಮತ್ತು ವೈದ್ಯಕೀಯ ಪರಿಕರಗಳ ಖರೀದಿ ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ ಎಂದು ಸಚಿವ ಬಿ.ಶ್ರೀರಾಮುಲುಗೆ ಅವರು ಸವಾಲು ಹಾಕಿದರು.
ಸ್ಪೀಕರ್ ಸ್ಪಷ್ಟನೆ: ವಿಧಾನಮಂಡಲ ಸಮಿತಿಯ ಭೇಟಿ ಹಾಗೂ ಪರಿಶೀಲನೆ ಕೈಗೊಳ್ಳ ಬಾರದು ಎಂದು ಸೂಚಿಸಿದ್ದ ಸಂಬಂಧ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿ ಸ್ಪಷ್ಟೀಕರಣ ನೀಡಿದೆ. ಮೇಲ್ಕಂಡ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಕೈಗೊಳ್ಳಲಾ ಗಿದೆಯೇ ಹೊರತು ಯಾವುದೇ ದುರುದ್ದೇಶ ಇಲ್ಲವೆಂದು ಈ ಮೂಲಕ ಸ್ವಷ್ಟಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಭ್ರಷ್ಟಾಚಾರ ಸಾಬೀತುಪಡಿಸಲಿ: ಆರೋಗ್ಯ ಪರಿಕರಗಳು ಹಾಗೂ ಉಪಕರಣಗಳ ಖರೀದಿ ಯಲ್ಲಿ ಅವ್ಯವಹಾರ ಆಗಿಲ್ಲ. ಎಲ್ಲವೂ ಪಾರದರ್ಷಕವಾಗಿ ನಡೆದಿದ್ದು, ಈ ಬಗ್ಗೆ ಆರೋಪಿಸುವವರು ಭ್ರಷ್ಟಾಚಾರ ಸಾಬೀತುಪಡಿಸಲಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಎಚ್. ಕೆ.ಪಾಟೀಲ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಆವರು, ಕೊರೊನಾ ಸೋಂಕು ತಡೆಗಟ್ಟಲು ಕೈಗೊಂಡ ಕ್ರಮಗಳು, ಖರೀದಿಗೆ ಸಂಬಂಧಿಸಿದ ದಾಖಲೆಗಳೆಲ್ಲವೂ ಸಾರ್ವಜನಿಕ ಆಸ್ತಿಯಾಗಿದ್ದು, ಇಲಾಖೆ ಅಂತರ್ಜಾಲ ತಾಣ (ಪಬ್ಲಿಕ್ ಡೊಮೇನ್) ದಲ್ಲಿ ಲಭ್ಯ ಇದೆ ಎಂದು ತಿಳಿಸಿದ್ದಾರೆ.