ಭೇರ್ಯ: ಚುನಾವಣೆ ದೃಷ್ಟಿಯಿಂದ ಪಕ್ಷ ಸೇರಿ ಅಭ್ಯರ್ಥಿಯಾಗಿ ಚುನಾವಣೆ ಕಳೆದ ಮೇಲೆ ಪಕ್ಷದಿಂದ ಹೊರ ಹೋಗುವವರಿಗೆ ಯಾವುದೇ ಕಾರಣಕ್ಕೂ ಹೈಕಮಾಂಡ್ ಟಿಕೆಟ್ ನೀಡುವುದಿಲ್ಲ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಿರ್ಲೆ ಶ್ರೀನಿವಾಸ್‌ಗೌಡ ತಿಳಿಸಿದರು. ಭೇರ್ಯದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಹೊರಗಡೆಯಿಂದ ಬಂದವರಿಗೆ ಟಿಕೆಟ್ ನೀಡಲಾಗಿದೆ. ಆದರೆ ಚುನಾವಣೆ ಕಳೆದ ಮೇಲೆ ಪಕ್ಷ ಬಿಟ್ಟು ಹೋಗಿರುವವರೇ ಹೆಚ್ಚು ಎಂದರು. ರಾಜ್ಯ ಬಿಜೆಪಿ ಘಟಕದಿಂದ ಅಭ್ಯರ್ಥಿಗಳ ಆಯ್ಕೆಗಾಗಿ ಸರ್ವೇ ಮಾಡಿ ನಂತರ ಯಾರು ಅಭ್ಯರ್ಥಿ ಎಂದು ಘೋಷಣೆ ಮಾಡಲಿದ್ದಾರೆ. ಆದರೂ, ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ತಾನೂ ಆಕಾಂಕ್ಷಿ ಎಂದರು.
1999 ವಿಧಾನಸಭಾ ಚುನಾವಣೆಯಿಂದ ಪಕ್ಷಕ್ಕೆ ಬಂದ ಎಸ್.ಎ.ಗೋವಿಂದರಾಜ್, ಶಾಸಕರಾದ ಸಾ.ರಾ.ಮಹೇಶ್, ಕೆ.ಸಿ.ಪುಟ್ಟಸಿದ್ದಶೆಟ್ಟಿ, ದೊಡ್ಡಸ್ವಾಮೀಗೌಡರು ಸೇರಿದಂತೆ ಬಿಜೆಪಿಯಿಂದ ಸ್ಪರ್ಧಿಸಿ ನಂತರದಲ್ಲಿ ಪಕ್ಷ ಬಿಟ್ಟು ಹೋದರು ಎಂದರು.
ಪ್ರಧಾನಿ ಮೋದಿಯವರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಾಧನೆಗಳನ್ನು ಜನರಿಗೆ ತಿಳಿಸುವುದರ ಜತೆಗೆ ಬಿಜೆಪಿ ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಜನರಿಗೆ ಮನದಟ್ಟು ಮಾಡಲಾಗುತ್ತಿದೆ. ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿ ಯಾರೇ ಆದರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸೊಣ ಎಂದರು.
ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಪ್ರಭಾಕರ್‌ಜೈನ್, ತಾಲೂಕು ಬಿಜೆಪಿ ಉಪಾಧ್ಯಕ್ಷ ಬಸವರಾಜಪ್ಪ, ಜಿಲ್ಲಾ ಯುವಮೋರ್ಚಾ ಕಾರ್ಯಕಾರಿ ಸದಸ್ಯ ಅಶ್ವಿನ್, ಭೇರ್ಯ ಶಕ್ತಿಕೇಂದ್ರ ಮಾಜಿ ಅಧ್ಯಕ್ಷ ಅರಕೆರೆ ತೇಜಸ್ ಇದ್ದರು.