ಬೀದರ್: ಬಿಜೆಪಿ ಸರ್ಕಾರದ ಕೊನೆಯ ಎರಡು ವರ್ಷಗಳ ಅಧಿಕಾರವಧಿಯಲ್ಲಿ ಆರ್ಥಿಕ ನೆರವಿಲ್ಲದೆ ಕಾಮಗಾರಿ ಮಾಡಿರುವುದೇ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಕಾರಣವೇ ಹೊರತು ಗ್ಯಾರಂಟಿ ಯೋಜನೆಗಳ ಜಾರಿಯಿಂದಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಗುತ್ತಿಗೆದಾರರ ಬಿಲ್ ಬಾಕಿ ಸಮಸ್ಯೆ ಪ್ರತಿ ಜಿಲ್ಲೆಗಳಲ್ಲಿಯೂ ಇದೆ. ಅವರು ಕೆಲಸ ಮಾಡಿದ್ದು, ಬಿಲ್ ಪಾವತಿಸಬೇಕಿರುವುದು ನಿಜ. ಈ ಸಮಸ್ಯೆಗೆ ಮೂಲ ಕಾರಣವನ್ನು ಯಾರು ಹೇಳುತ್ತಿಲ್ಲ. ಹಣಕಾಸು ಇಲಾಖೆ ಯಾವ ಇಲಾಖೆಗೆ ಎಷ್ಟು ಹಂಚಿಕೆಯಾಗಿದೆ, ಅಷ್ಟನ್ನೇ ನೀಡುತ್ತದೆ. ಆದರೆ, ಬಿಜೆಪಿ ಸರ್ಕಾರದ ಇದ್ದಾಗ ಅನುದಾನ ಇಲ್ಲದೆ ಕೆಲಸಗಳನ್ನು ಮಾಡಲಾಗಿದೆ. ಬಿಜೆಪಿ ಮಾಡಿದ ಆ ಎಡವಟ್ಟಿನಿಂದ ಬಿಲ್ ಸಮಸ್ಯೆ ಸೃಷ್ಟಿಯಾಗಿದೆ ಎಂದು ಆರೋಪಿಸಿದರು.
ಲೋಕೋಪಯೋಗಿ ಇಲಾಖೆಯದ್ದೆ 14 ಸಾವಿರ ಕೋಟಿ ರೂ. ವ್ಯತ್ಯಾಸ ಇದ್ದು, ಇದಕ್ಕೆ ಯಾವುದೇ ಅನುದಾನ ಇಲ್ಲ. ಹೀಗಾಗಿ ಮುಂದೆ ಹೆಚ್ಚುವರಿ ಹಣ ಕೇಳುತ್ತಾ ಕೇಳುತ್ತಾ, ಅದನ್ನು ಸರಿದೂಗಿಸಬೇಕಾದ ಅನಿವಾರ್ಯತೆಯಿದೆ. ಗ್ಯಾರಂಟಿ ಯೋಜನೆಗಳಿಗೆ ಬಜೆಟ್ನಲ್ಲಿ ಪ್ರತ್ಯೇಕ ಅನುದಾನ ಘೋಷಿಸಲಾಗಿದ್ದು, ಗ್ಯಾರಂಟಿಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ಸಿನದ್ದು 60 ಪರ್ಸೆಂಟ್ ಸರ್ಕಾರ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಗಾಳಿಯಲ್ಲಿ ಗುಂಡು ಹೊಡೆದಂತೆ. ಎಚ್ಡಿಕೆ ಅಷ್ಟೆ ಅಲ್ಲದೆ ಬಹಳಷ್ಟು ಜನ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯದ್ದು 40 ಪರ್ಸೆಂಟ್ ಸರ್ಕಾರ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಯ್ಯ ಆರೋಪಿಸಿ, ಪ್ರಧಾನಿಗೆ ಪತ್ರ ಬರೆದಿದ್ದರು. ಈಗ ಕುಮಾರಸ್ವಾಮಿ ಬಳಿ ದಾಖಲೆಗಳಿದ್ದರೆ ಮೊದಲು ಸಿಎಂಗೆ ನೀಡಲಿ ಎಂದು ಸಚಿವ ಜಾರಕಿಹೋಳಿ ತಿರುಗೇಟು ನೀಡಿದರು.
ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಪಾಂಚಾಳ್ ಡೆತ್ನೋಟ್ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರಿಲ್ಲ. ಬದಲಾಗಿ ಪ್ರಿಯಾಂಕ್ ಅವರ ಆಪ್ತ ಎಂದು ಬರೆದಿದ್ದಿದೆ. ಇದೂ ಸಹ ಸಿಐಡಿ ತನಿಖೆಯಿಂದ ಗೊತ್ತಾಗುತ್ತದೆ. ಸಾವಿಗೆ ಯಾರು ಕಾರಣ, ಯಾವ ಬಿಲ್ ಬಾಕಿ ಉಳಿದಿತ್ತು ಮತ್ತು ಸಚಿನ್ ಗುತ್ತಿಗೆದಾರನೋ ಅಥವಾ ಇಲ್ಲವೋ ಎಲ್ಲವೂ ಬಹಿರಂಗವಾಗಲಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.