Advertisement
ಕಿಂಡಿಅಣೆಕಟ್ಟು ನಿರ್ಮಿಸಿ, ಸೂಕ್ತ ಕಾಲದಲ್ಲಿ ಜಲಸಂರಕ್ಷಣೆ ಮಾಡಿಕೊಂಡಲ್ಲಿ ನೀರಿನ ಒರತೆಯು ಜೀವಜಲವಾಗಿ ಮಾರ್ಪಡುತ್ತದೆ ಎಂದು ಇಲ್ಲಿನ ತೋಕೂರು ಗ್ರಾಮದಲ್ಲಿ ಹೊಸದಾಗಿ ನಿರ್ಮಾಣವಾದ ಎರಡು ಕಿಂಡಿ ಅಣೆಕಟ್ಟುಗಳು ಪ್ರತ್ಯಕ್ಷ ಸಾಕ್ಷಿಯಾಗಿವೆ.
Related Articles
ಪಡುಪಣಂಬೂರು ಗ್ರಾ.ಪಂ. ನ ತೋಕೂರಿನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಕೋರ್ದಬ್ಬು ದೈವಸ್ಥಾನದ ಬಳಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ(ನರೇಗಾ)ಯಲ್ಲಿ ತಲಾ 4.90 ಲಕ್ಷ ರೂ. ವೆಚ್ಚದಲ್ಲಿ 20:80 ಅನುಪಾತದಲ್ಲಿ ಗ್ರಾಮದ ಸಾಮಾನ್ಯ ತೋಡಿನಲ್ಲಿ ಹರಿಯುತ್ತಿರುವ ನೀರು ವ್ಯರ್ಥವಾಗಿ ಸಮುದ್ರ ಸೇರುವುದನ್ನು ಹಿಡಿದಿಟ್ಟುಕೊಂಡು ಈ ಕಿಂಡಿಅಣೆಕಟ್ಟನ್ನು ನಿರ್ಮಿಸಿದರು.
Advertisement
5 ಮೀ. ಉದ್ದ, 3 ಮೀ. ಅಗಲದಲ್ಲಿ ನಿರ್ಮಿಸಿದ ಅನಂತರ ಇದಕ್ಕೆ 9 ಅಡಿ ಆಳದಲ್ಲಿ ಹಲಗೆಯನ್ನು ಹಾಕಿದ ಹತ್ತೇ ದಿನದಲ್ಲಿ ಕಿಂಡಿ ಅಣೆಕಟ್ಟು ತುಂಬಿ ತುಳುಕಿ ನೀರು ಮೇಲ್ಮಟ್ಟದಲ್ಲಿ ಹರಿಯುವಂತಾಗಿದೆ. ಇದರಿಂದ ಸುಮಾರು 3 ಕಿ.ಮೀ. ವ್ಯಾಪ್ತಿಯಲ್ಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಸುಧಾರಣೆಯಾಗಿ ಕೃಷಿ ತೋಟಗಳಲ್ಲಿ ನೀರಿನ ಒರತೆ ಮೇಲ್ಮಟ್ಟದಲ್ಲಿ ಹರಿದಿದೆ. ಎರಡೂ ಕಡೆಗಳಲ್ಲಿ ಸುಮಾರು 50 ಮನೆಗಳು ಆಸುಪಾಸಿನಲ್ಲಿದೆ. ಇದರೊಂದಿಗೆ ದೇವಸ್ಥಾನದ ಕೆರೆಗೂ ನೀರಿನ ಒರತೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಕಂಬಳಬೆಟ್ಟುವಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸುವ ಯೋಜನೆಯನ್ನು ಗ್ರಾ.ಪಂ. ರೂಪಿಸಿದೆ.
ನರೇಗಾ ಅನುದಾನದ ಸದ್ಬಳಕೆಪಂಚಾಯತ್ಗೆ ಆರ್ಥಿಕ ಸಂಪನ್ಮೂಲದ ಕೊರತೆ ಒಂದು ಕಡೆ, ಇತರ ಜನಪ್ರತಿನಿಧಿಗಳ ಅನುದಾನ ಸಿಗುವುದು ಸಹ ಒಂದೆರಡು ಸೀಮಿತ ಯೋಜನೆಗಳಿಗೆ ಮಾತ್ರ. ಆದರೆ ನರೇಗಾ ಯೋಜನೆಯಿಂದ ಸಾಕಷ್ಟು ಉಪಯೋಗವಾಗಿದೆ. ಇದನ್ನೇ ಮುಖ್ಯವಾಗಿ ಬಳಸಿಕೊಂಡು ಯೋಜನೆ ರೂಪಿಸಲಾಯಿತು. ಭವಿಷ್ಯದಲ್ಲಿ ನೀರಿನ ಸಮಸ್ಯೆಗಳು ಬಾರದಂತೆ ವರ್ಷದ ಹಿಂದೆಯೇ ಜಾರಿಗೆ ತಂದ ಯೋಜನೆ ಹಂತ ಹಂತವಾಗಿ ಯಶಸ್ಸು ಕಾಣುವಂತಾಗಿದೆ. ಇದು ಇನ್ನಷ್ಟು ಮುಂದುವರಿದು ಕುಡಿಯುವ ನೀರಿನ ಬವಣೆ ಶಾಶ್ವತವಾಗಿ ನಿವಾರಿಸಬೇಕು.
– ಮೋಹನ್‌ದಾಸ್, ಅಧ್ಯಕ್ಷರು,
ಪಡುಪಣಂಬೂರು ಗ್ರಾ.ಪಂ. ಗ್ರಾಮಸ್ಥರಿಂದಲೇ ಗ್ರಾಮಕ್ಕಾಗಿ
ಗ್ರಾಮಸ್ಥರು ಮುಕ್ತವಾಗಿ ನರೇಗಾ ಯೋಜನೆಯನ್ನು ಗ್ರಾಮದ ನೆರವಿಗೆ ಬಳಸಿಕೊಂಡಿರುವುದರಿಂದ ಇಂದು ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಒಳ ಹರಿವು ಹೆಚ್ಚಲು ಕಾರಣವಾಗಿದೆ. ಪಂಚಾಯತ್ ಮಾತ್ರ ಪರಸ್ಪರ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ಇದು ಇನ್ನಷ್ಟು ಗ್ರಾಮಕ್ಕೆ ಮಾದರಿಯಾಗಬೇಕು.
– ಲೋಕನಾಥ ಭಂಡಾರಿ,
ಕಾರ್ಯದರ್ಶಿ , ಪಡುಪಣಂಬೂರು ಗ್ರಾ.ಪಂ. ಬಾವಿಯಲ್ಲಿ ನೀರು ಹೆಚ್ಚಾಯಿತು
ಎಪ್ರಿಲ್- ಮೇ ತಿಂಗಳಿನಲ್ಲಿಯೇ ಬಾವಿಯಲ್ಲಿ ನೀರು ಬತ್ತಿಹೋಗುತ್ತಿತ್ತು. ಈ ಬಾರಿ ಮಳೆಗಾಲದವರೆಗೂ ನೀರು ಸಿಕ್ಕಿದೆ. ಈ ವರ್ಷದಲ್ಲಿಯೂ ಬಾವಿಯಲ್ಲಿ ಈಗಲೇ ನೀರು ಹೆಚ್ಚಾಗಿರುವುದು ಪರೋಕ್ಷವಾಗಿ ಕಿಂಡಿ ಅಣೆಕಟ್ಟೇ ಮೂಲ ಕಾರಣವಾಗಿದೆ.
-ಗೋಪಾಲ ಮೂಲ್ಯ, ಗ್ರಾಮಸ್ಥರು. ನರೇಂದ್ರ ಕೆರೆಕಾಡು