ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದ ನಾಲ್ಕೂ ಜಲಾಶಯಗಳಲ್ಲಿ ನೀರಿನ ಸಂಗ್ರಹ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಈ ಬಾರಿಯೂ ಬೆಳೆಗೆ ನೀರು ಸಿಗುವುದು ಕಷ್ಟ. ಕೆಆರ್‌ಎಸ್, ಹೇಮಾವತಿ, ಕಬಿನಿ ಹಾಗೂ ಹಾರಂಗಿ ಜಲಾಶಯಗಳಲ್ಲಿ 43 ಟಿಎಂಸಿ ನೀರು ಮಾತ್ರ ಲಭ್ಯವಿದ್ದು, ಕುಡಿಯುವ ನೀರು ಪೂರೈಕೆಗೆ 38 ಟಿಎಂಸಿ ಅಗತ್ಯವಾಗಿದ್ದು, ಸದ್ಯಕ್ಕೆ ಜಲಾಶಯಗಳಲ್ಲಿರುವ ನೀರು ಕುಡಿಯಲು ಮಾತ್ರ ಬಳಕೆ ಮಾಡಲು ಸರ್ಕಾರ ತೀರ್ಮಾನಿಸಿದೆ.
ಬೆಳೆಗಳಿಗೆ ನೀರು ಬಿಡಬೇಕಾದರೆ 98 ಟಿಎಂಸಿ ನೀರು ಅಗತ್ಯ. ಆದರೆ, ಅಷ್ಟು ಪ್ರಮಾಣದ ನೀರು ಜಲಾಶಯಗಳಲ್ಲಿಲ್ಲ. ಹೀಗಾಗಿ, ಮುಂದಿನ ದಿನಗಳಲ್ಲಿ ಮಳೆಯಾದರೆ ಮಾತ್ರ ಬೆಳೆಗಳಿಗೆ ನೀರು ಸಿಗುವ ಸಾಧ್ಯತೆಯಿದ್ದು, ಇಲ್ಲದಿದ್ದರೆ ಜಲಾಶಯದ ನೀರು ನಂಬಿ ರೈತರು ಬೆಳೆ ಬೆಳೆಯಲಾಗದು.
ಕಳೆದ ವರ್ಷ ಜುಲೈ 31 ಕ್ಕೆ ನಾಲ್ಕೂ ಜಲಾಶಯಗಳಲ್ಲಿ 57.83 ಟಿಎಂಸಿ ನೀರು ಇತ್ತಾದರೂ ಈ ವರ್ಷ ಜುಲೈ 31ಕ್ಕೆ 43 ಟಿಎಂಸಿ ನೀರು ಮಾತ್ರ ಶೇಖರಣೆಯಾಗಿದೆ. ತುಂಗಭದ್ರಾ ಜಲಾಶಯದಲ್ಲೂ ನೀರಿನ ಸಂಗ್ರಹ ಕಡಿಮೆ ಇರುವುದರಿಂದ ಆ ಭಾಗದಲ್ಲೂ ಬೆಳೆಗಳಿಗೆ ಪೂರ್ಣಪ್ರಮಾಣದಲ್ಲಿ ನೀರು ಸಿಗುವುದು ಅನುಮಾನ. ಆದರೆ, ಉತ್ತರ ಕರ್ನಾಟಕ ಭಾಗದ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳು ತುಂಬಿರುವುದರಿಂದ ಆ ಭಾಗದವರಿಗೆ ನೀರಿನ ಸಮಸ್ಯೆ ಎದುರಾಗದು.
ಸಿಎಂ ಜತೆ ಚರ್ಚಿಸಿ ನಿರ್ಧಾರ: ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಕಾವೇರಿ ಜಲಾನಯನ ಪ್ರದೇಶದ ನಾಲ್ಕೂ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದು, ಕುಡಿಯಲು ಪೂರೈಕೆ ಮಾಡಲು ಇಟ್ಟುಕೊಳ್ಳಬೇಕಿದೆ. ನೀರಿನ ಸಂಗ್ರಹ ಕಡಿಮೆ ಇರುವುದರಿಂದ ಮುಂದೇನು ಮಾಡಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಶೀಘ್ರ ಜನಪ್ರತಿನಿಧಿಗಳ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೆರೆ ನೀರಿನ ಕುರಿತೂ ಚರ್ಚೆ: ಕಳೆದ ವರ್ಷ ನಾಲ್ಕೂ ಜಲಾಶಯಗಳಲ್ಲಿ 57.83 ಟಿಎಂಸಿ ನೀರಿತ್ತು. ಪ್ರಸ್ತುತ 43 ಟಿಎಂಸಿ ನೀರಿದೆ. ತಮಿಳುನಾಡಿಗೆ ವಾರ್ಷಿಕ 192 ಟಿಎಂಸಿ ನೀರು ಬಿಡಬೇಕಿದೆಯಾದರೂ ಜೂನ್ ಮತ್ತು ಜುಲೈನಲ್ಲಿ ಬಿಡಬೇಕಿದ್ದ, 44 ಟಿಎಂಸಿಗೆ ಬದಲಾಗಿ 7 ಟಿಎಂಸಿ ನೀರು ಮಾತ್ರ ಬಿಡಲು ಸಾಧ್ಯವಾಗಿದೆ ಎಂದು ಸಚಿವರು ತಿಳಿಸಿದರು. ಕುಡಿಯಲು ಪೂರೈಕೆ ಮಾಡಲು ಕೆರೆಗಳಿಗೆ ನೀರು ಹರಿಸಬೇಕೇ ಬೇಡವೇ ಎಂಬ ಬಗ್ಗೆಯೂ ಜನಪ್ರನಿಧಿಗಳ ಜತೆ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.