Advertisement

ಈ ಬಾರಿ ಸರಕಾರಿ ಶಾಲಾ ಕಲಿಕೆಗೆ ಹೆಮ್ಮೆಯ ಸ್ಪರ್ಶ

11:07 PM May 13, 2022 | Team Udayavani |

ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳ ಆರಂಭೋತ್ಸವಕ್ಕೆ ಸಕಲ ಸಿದ್ಧತೆ ನಡೆಸಲಾಗಿದ್ದು, ಸಮುದಾಯದತ್ತ ಶಾಲೆಯನ್ನು ವಿನೂತನ ರೀತಿಯಲ್ಲಿ ನಡೆಸಲು ನಿರ್ದೇಶಿಸಲಾಗಿದೆ. ಸರಕಾರಿ ಶಾಲೆಯಲ್ಲಿ ಕಲಿಯುವುದು ಹೆಮ್ಮೆ ಎಂಬ ಭಾವನೆಯನ್ನು ವಿದ್ಯಾರ್ಥಿಗಳು-ಹೆತ್ತವರಲ್ಲಿ ಮೂಡಿಸುವ ಪ್ರಯತ್ನ ಶಿಕ್ಷಣ ಇಲಾಖೆಯದು.

Advertisement

ಶೈಕ್ಷಣಿಕ ವರ್ಷ ಆರಂಭದಲ್ಲಿ ನಡೆಸುವ ಸಮುದಾಯದತ್ತ ಶಾಲೆ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಮತ್ತು ಹೆತ್ತವರನ್ನು, ಜತೆಗೆ ಸಾರ್ವಜನಿಕರು ಹಾಗೂ ಸಮುದಾಯದ ಮುಖಂಡರನ್ನು ಆಹ್ವಾನಿಸಿ, ಸರಕಾರಿ ಶಾಲೆಯ ಅಭಿವೃದ್ಧಿಗೆ ಬೇಕಾದ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಈ ಬಾರಿ ಸಮುದಾಯದತ್ತ ಶಾಲೆ ಕಾರ್ಯಕ್ರಮದಲ್ಲಿ ಸ್ಥಳೀಯ ವಿವಿಧ ಸಂಘ- ಸಂಸ್ಥೆಗಳ ಪ್ರತಿನಿಧಿಗಳು, ಎನ್‌ಜಿಒಗಳು, ವಿದ್ಯಾಭಿ ಮಾನಿಗಳು, ದಾನಿಗಳು, ಸಾಮಾಜಿಕ, ಶೈಕ್ಷಣಿಕವಾಗಿ ಸೇವೆ ಸಲ್ಲಿಸುತ್ತಿರುವವರನ್ನು ಆಹ್ವಾನಿಸಲಾಗುತ್ತದೆ.

ಆ ಶಾಲೆಯ ಕುರಿತು ಸಮಾಜ ಬಾಂಧವರಲ್ಲಿ ಅಭಿಮಾನ, ಹೆಮ್ಮೆ ಸೃಷ್ಟಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಆ ಪರಿಸರದ ಅಭಿವೃದ್ಧಿ ಕಾರ್ಯಗಳಿಗೆ ಶಾಲೆಯೇ ಕೇಂದ್ರ ಸ್ಥಾನವಾಗುವಂತೆ ಮಾಡುವುದು, ಹಳೇ ವಿದ್ಯಾರ್ಥಿಗಳ ಸಂಘವನ್ನು ಹೆಚ್ಚು ಕ್ರಿಯಾಶೀಲ ಮಾಡುವುದರ ಸಹಿತ ಸರಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುವುದು ಹೆಮ್ಮೆ ಎಂಬ ಭಾವನೆ ಮೂಡಿಸುವ ನಿಟ್ಟಿನಲ್ಲಿ ಈ ವರ್ಷ ಕಾರ್ಯಕ್ರಮ ನಡೆಸಲು ಸೂಚನೆ ನೀಡಲಾಗಿದೆ.

ಶುಚಿತ್ವಕ್ಕೆ ಆದ್ಯತೆ
ಮೇ 16ರಿಂದ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭವಾಗಲಿದೆ. ಈ ಸಂಬಂಧ ಈಗಾಗಲೇ ನಿರ್ದೇಶನ ಕಳುಹಿಸಲಾಗಿದೆ. ಮೇ 14 ಮತ್ತು 15ರಂದು ಶಾಲಾವರಣದ ಸ್ವಚ್ಛತೆ, ಕೊಠಡಿ, ಮೂಲಸೌಕರ್ಯಗಳ ಪರಿಶೀಲನೆ ನಡೆಯಲಿದೆ. 2022-23ನೇ ಶೈಕ್ಷಣಿಕ ವರ್ಷ ವಾಡಿಕೆಗಿಂತ ಮುನ್ನವೇ ಆರಂಭವಾಗುತ್ತಿದ್ದು, ಪೂರ್ಣ ಪ್ರಮಾಣದಲ್ಲಿ ತರಗತಿಗಳು ನಡೆಯಲಿವೆ.

Advertisement

ಕಲಿಕಾ ಚೇತರಿಕೆ
ಕೊರೊನಾದಿಂದ ಕಲಿಕೆಯಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸಗಳಾಗಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕಲಿಕಾ ಚೇತರಿಕೆ ಕೈಪಿಡಿ ರೂಪಿಸಲಾಗಿದೆ. 1ರಿಂದ 9ನೇ ತರಗತಿಯ ಎಲ್ಲ ವಿಷಯಗಳ ಮರು ಹೊಂದಾಣಿಕೆ ಮಾಡಿಕೊಂಡಿರುವ ಪ್ರಮುಖ ಕಲಿಕಾ ಫ‌ಲಕಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ಸಂಬಂಧ ಎಲ್ಲ ಶಾಲೆಗಳಿಗೂ ಸುತ್ತೋಲೆ ಕಳುಹಿಸಲಾಗಿದೆ. ಶಿಕ್ಷಕರಿಗೆ ತರಬೇತಿ ಕೊಡಲಾಗಿದೆ. ಶೈಕ್ಷಣಿಕ ವರ್ಷದ ಆರಂಭದಿಂದಲೇ ಕಲಿಕಾ ಚೇತರಿಕೆ ನಡೆಯಲಿದೆ.

ಪ್ರವೇಶ ಪ್ರಕ್ರಿಯೆ
ಬಹುತೇಕ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ. ಶಾಲಾರಂಭದ ಅನಂತರವೂ ಸುಮಾರು ಒಂದು ತಿಂಗಳ ಕಾಲ ನಡೆಯಲಿದೆ. ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ಹೊಸದಾಗಿ ದಾಖಲಾಗುವ ವಿದ್ಯಾರ್ಥಿಗಳ ವರ್ಗಾವಣೆ ಪ್ರಮಾಣಪತ್ರ (ಟಿ.ಸಿ.)ವನ್ನು ಆ ಶಾಲೆಯಿಂದಲೇ ನೇರವಾಗಿ ತರಿಸಿಕೊಳ್ಳಲಾಗುತ್ತದೆ. ಎಸ್‌ಎಟಿಎಸ್‌ ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಮಾಹಿತಿ ಇರುವುದರಿಂದ ಸುಲಭವಾಗಿ ಪಡೆಯಲಾಗುವುದು ಎಂದು ಮುಖ್ಯ ಶಿಕ್ಷಕರೊಬ್ಬರು ವಿವರ ನೀಡಿದ್ದಾರೆ.

ಪದವೀಧರ ಶಿಕ್ಷಕರ ನೇಮಕಾತಿ ಸಂಬಂಧ ಮೇ 21 -22ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಹೊಸ ನೇಮಕಾತಿಯ ಅನಂತರ ಕಾರ್ಯಭಾರ ಅಥವಾ ನೇಮಕಾತಿ ಷರತ್ತುಗಳಿಗೆ ಅನುಗುಣವಾಗಿ ಅತಿಥಿ ಶಿಕ್ಷಕರನ್ನು ಮುಂದುವರಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಅಧಿಕಾರಿ ಯೊಬ್ಬರು ಮಾಹಿತಿ ನೀಡಿದ್ದಾರೆ.

ಶಾಲೆಯ ಆರಂಭೋತ್ಸವಕ್ಕೆ ಸಂಬಂಧಿಸಿ ಎಲ್ಲ ಎಸ್‌ಡಿಎಂಸಿಗಳಿಗಳಿಗೆ ನಿರ್ದೇಶನ ನೀಡಿದ್ದೇವೆ. ಸರಕಾರಿ ಶಾಲೆಗೆ ಮಕ್ಕಳು ಖುಷಿಯಿಂದ ಬರುವಂತಾಗಬೇಕು ಮತ್ತು ಸಮುದಾಯ, ಸಾರ್ವಜನಿಕ ಸಹಭಾಗಿತ್ವ ಹೆಚ್ಚೆಚ್ಚು ನಡೆಯುವಂತೆ ಕಾರ್ಯಕ್ರಮ ರೂಪಿಸಲು ತಿಳಿಸಲಾಗಿದೆ.
-ಸುಧಾಕರ್‌, ಗೋವಿಂದ ಮಡಿವಾಳ, ಡಿಡಿಪಿಐ, ದ.ಕ., ಉಡುಪಿ

 

 

Advertisement

Udayavani is now on Telegram. Click here to join our channel and stay updated with the latest news.

Next