Advertisement
ಅಂದು ಕಾಲೇಜಿಗೆ ಬರುವಾಗ ನೀನು ನನ್ನ ಪಕ್ಕ ಕೂರದಿದ್ದರೆ ಇಷ್ಟೆಲ್ಲಾ ಆಗುತ್ತಲೇ ಇರಲಿಲ್ಲವೇನೋ. ನಾನು ಮನೆಯಿಂದ ಹಾಸ್ಟೆಲ್‌ಗೆ ಬರುತ್ತಿದ್ದೆ. ಕೈಯಲ್ಲಿ ಮಣಭಾರದ ಲಗೇಜು. ಪಿಟಿಪಿಟಿ ಮಳೆ ಬೇರೆ. ಅಂತೂ ಇಂತೂ ಜ್ಯೋತಿ ಸ್ಟಾಪ್‌ಗೆ ಬಂದು ನಿಂತಿದ್ದೆ. ಪಕ್ಕ ನೀನೂ ನನ್ನ ಥರಾನೇ ಲಗೇಜಿನೊಂದಿಗೆ ನಿಂತಿದ್ದೆ. ಅಲ್ಲಿ ತುಂಬಾ ಕಾಲೇಜು ಹುಡುಗರಿದ್ದರೂ ನೀನು ಎಲ್ಲರಂತಿರಲಿಲ್ಲ. ಆಚೆಈಚೆ ನೋಡುತ್ತ ನಿನ್ನ ಮುಖ ನೋಡಿಬಿಟ್ಟೆ. ಆ ಕ್ಷಣವೇ ನಿನ್ನ ಮುಖದಲ್ಲಿ ಮೂಡಿದ ಮುಗುಳ್ನಗು ನೋಡಿ ಖುಷಿಯಾಗಿಬಿಟ್ಟಿತು. ನಂಗೇನು ಗೊತ್ತಿತ್ತು, ಆ ಖುಷಿ ಎಂದೂ ಮರೆಯಾಗಲ್ಲ ಅಂತ. ನಗುವಿನ ನಂತರ ಮಾತುಕತೆ ಆರಂಭವಾಗುವುದು ಇದ್ದದ್ದೇ. ಹಾಗೇ ಹರಟುತ್ತಾ ಇಬ್ಬರೂ ಹೊರಟಿದ್ದು ಉಡುಪಿಗೆ ಎಂದು ತಿಳಿಯಿತು. ಬಸ್ಸು ಬಂದೊಡನೆ ನೀನು ನನ್ನ ಲಗೇಜು ಎತ್ತಿಕೊಂಡು ಓಡಿಬಿಟ್ಟೆ. ನಾನು ದಂಗಾಗಿ ನೋಡಿದರೆ ಅದನ್ನು ಬಸ್ಸಿನೊಳಗಿಟ್ಟು ನಕ್ಕು ಕರೆದೆ ನೀನು.
Related Articles
Advertisement
ಇನ್ನೂ ಅರ್ಧ ಗಂಟೆ ಬಾಕಿಯಿತ್ತು. ನೀನು ಕೈಯಲ್ಲಿ ಹಿಡಿದ ರೆಡ್ಮಿ ಮೊಬೈಲ್ ನನಗೆ ನೆನಪಾದದ್ದು ನಾನು ಮೊಬೈಲ್ ಬಿಟ್ಟು ಬಂದ ವಿಷಯ. ಇಯರ್‌ಫೋನು ಸಿಕ್ಕಿಸಿಕೊಳ್ಳುತ್ತಿದ್ದಾಗ ಈಚೆ ನೋಡಿ “ಬೇಕಾ’ ಎಂದು ಕೇಳಿದಾಗ ನನಗೆ ಸಂಕೋಚವಾಗಿತ್ತು. ಅದನ್ನು ಅರ್ಥಮಾಡಿಕೊಂಡು ನೀನು ನಕ್ಕು ನನ್ನ ಕೈಗೆ ಕೊಟ್ಟುಬಿಟ್ಟೆ. ಹಾಡು ಕೇಳುತ್ತ ಯಾವಾಗ ನಿನ್ನ ಹೆಗಲಮೇಲೆ ನಿದ್ದೆಹೋದೆನೋ ಗೊತ್ತಿಲ್ಲ. ಎಲ್ಲೋ ನಡುವಲ್ಲಿ ನೀನು ಮತ್ತೆ ಅದನ್ನು ಇಸ್ಕೊಂಡದ್ದು ಅಷ್ಟೇ ನೆನಪು. ನಂತರ ಉಡುಪಿ ಬಸ್‌ಸ್ಟಾಂಡ್ ನಂತರವೇ ಎಚ್ಚರವಾಗಿದ್ದು. ಎದ್ದು ನೋಡಿದರೆ ನೀನಿರಲಿಲ್ಲ. ಇಳಿದಿರಬೇಕು. ನಿದ್ರೆಯಿಂದ ಎಬ್ಬಿಸಿ “ಬಾಯ್’ ಆದರೂ ಮಾಡಬಹುದಿತ್ತು. ಅಷ್ಟರಲ್ಲಿ ನನ್ನ ಸ್ಟಾಪ್ ಬಂತು. ಬ್ಯಾಗ್ ಹಾಕಿಕೊಳ್ಳೋಣವೆಂದು ಹೊರಟರೆ ಬ್ಯಾಗಿನಲ್ಲಿ ಒಂದು ಸ್ಟೈಲೀ ಇತ್ತು. ಒಂದು ವಾಕ್ಯದೊಂದಿಗೆ : ಇದು ನಿನ್ನ ಜತೆ ಕಳೆದ ಖುಷಿಯ ಕ್ಷಣಗಳಿಗಾಗಿ ಫ್ರೆಂಡ್. ಅದನ್ನು ನೋಡಿದಾಗಲೆಲ್ಲಾ ಅದೇ ತರ ಮುಖದಲ್ಲಿ ಒಂದು ಫ್ರೆಂಡ್ಲಿ ಸ್ಟೈಲ್ ಮೂಡುತ್ತದೆ.ಅಪರ್ಣಾ ಬಿ. ವಿ . ತೃತೀಯ ಬಿಎಸ್ಸಿ, ಎಂಜಿಎಂ ಕಾಲೇಜು, ಉಡುಪಿ