ಮುಂಬೈ: ಕೊರೊನಾ ನಿಯಂತ್ರಣಕ್ಕೆ ಬರುತ್ತಿರುವುದು ಎಲ್ಲರಿಗೂ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ. ಆದರೆ, ಕೊರೊನಾ 2ನೇ ಅಲೆಗೆ ತತ್ತರಿಸಿದ್ದ ಮಹಾರಾಷ್ಟ್ರದಲ್ಲಿ ಈ ಭೀತಿ ಇನ್ನೂ ಹೋದಂತಿಲ್ಲ. ಮೂರನೇ ಅಲೆ ಸದ್ಯದಲ್ಲೇ ಬರುವ ಬಗ್ಗೆ ಆತಂಕಗೊಂಡಿರುವ ಅಲ್ಲಿನ ಅನೇಕ ಜನರು, ಎರಡು ಡೋಸ್ ಲಸಿಕೆ ಪಡೆದಿದ್ದರೂ ಮೂರನೇ ಡೋಸ್ ಲಸಿಕೆ ಹಾಕಿಸಿಕೊಳ್ಳತೊಡಗಿದ್ದಾರೆ ಎಂದು “ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಕಳೆದ ಕೆಲವು ವಾರಗಳಿಂದ ಆರೋಗ್ಯ ಇಲಾಖೆಯ ಕೆಲವು ಸಿಬ್ಬಂದಿಗಳು, ಅಧಿಕಾರಿಗಳು, ಕೆಲವು ರಾಜಕಾರಣಿಗಳು ತಮಗೆ ಹಾಗೂ ತಮ್ಮ ಕುಟುಂಬದವರಿಗೆ ಮೂರನೇ ಡೋಸ್ ಲಸಿಕೆಗಳನ್ನು ಕೆಲವು ಆಸ್ಪತ್ರೆಗಳಲ್ಲಿ ಕೊಡಿಸುತ್ತಿದ್ದಾರೆ. ಈ ವರ್ಷ ಫೆಬ್ರವರಿ ಹೊತ್ತಿಗೆ ಎರಡು ಡೋಸ್ ಲಸಿಕೆ ಪಡೆದವರೇ ಹೆಚ್ಚಾಗಿ ಈ ಮೂರನೇ ಡೋಸ್ ಮೊರೆ ಹೋಗುತ್ತಿರುವುದು ಗಮನಾರ್ಹ. ಈ ಲಸಿಕೆಗಾಗಿ ಕೊವಿನ್ ವೆಬ್‌ಸೈಟ್‌ನಲ್ಲಿ ಯಾವುದೇ ನೋಂದಣಿ ಮಾಡಿಸುತ್ತಿಲ್ಲ. ಇನ್ನು, ಲಸಿಕೆ ನೀಡುವಾಗ ಅರ್ಜಿ ತುಂಬುವ ವೇಳೆ ತಮ್ಮ ಮೊಬೈಲ್ ಸಂಖ್ಯೆ ಬದಲು ಬೇರೆ ಯಾರಧ್ದೋ ಮೊಬೈಲ್ ಸಂಖ್ಯೆ ಹಾಕುತ್ತಿದ್ದಾರೆ. ಅಚ್ಚರಿಯೆಂದರೆ, ಈ ಪಟ್ಟಿಯಲ್ಲಿ ವೈದ್ಯರೂ ಇದ್ದಾರೆ. ಇತ್ತೀಚೆಗೆ, ಯುವ ರಾಜಕಾರಣಿಯೊಬ್ಬರು, ತಮ್ಮ ಪತ್ನಿ ಹಾಗೂ ತಮ್ಮ ಕಚೇರಿ ಸಿಬ್ಬಂದಿಗೆ ಮೂರನೇ ಲಸಿಕೆ ಹಾಕಿಸಿದ್ದಾರೆ.
ಇದನ್ನೂ ಓದಿ : ಮೆಟ್ರೋ ಪ್ರಯಾಣಿಕರಿಗೆ ಶುಭ ಸುದ್ದಿ : ರಾತ್ರಿ 10ರವರೆಗೆ ಸಂಚರಿಸಲಿದೆ ರೈಲು ಸಂಚಾರ
ಕಾರಣವೇನು?: ಮೂರನೇ ಲಸಿಕೆ ಪಡೆದವರಲ್ಲಿ ಬಹುತೇಕ ಮಂದಿ, ತಾವು ಇತ್ತೀಚೆಗೆ ಪ್ರತಿಕಾಯಗಳ (ಆ್ಯಂಟಿಬಾಡಿ) ಪರೀಕ್ಷೆ ಮಾಡಿಸಿಕೊಂಡಿದ್ದು, ತಮ್ಮಲ್ಲಿ ಪ್ರತಿಕಾಯಗಳ ಸಂಖ್ಯೆಯನ್ನು ಕಡಿಮೆಯಾಗಿರುವುದು ಕಂಡುಕೊಂಡಿದ್ದಾರೆ. ಮೂರನೇ ಡೋಸ್ ಪಡೆದುಕೊಳ್ಳಲು ಇದೇ ಕಾರಣ ಎಂದು ಪತ್ರಿಕೆ ತನ್ನ ವರದಿಯಲ್ಲಿ ಹೇಳಿಕೊಂಡಿದೆ.
ಇದೇ ವೇಳೆ, ಗುರುವಾರದಿಂದ ಶುಕ್ರವಾರದ ಅವಧಿಯಲ್ಲಿ 34,403 ಹೊಸ ಪ್ರಕರಣ ಮತ್ತು ಇದೇ ಅವಧಿಯಲ್ಲಿ 320 ಮಂದಿ ಅಸುನೀಗಿದ್ದಾರೆ. ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.97.64 ಆಗಿದೆ.