Advertisement

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್

08:36 PM Nov 26, 2024 | Esha Prasanna |

ಸಾಗರ: ಸಿಎಸ್ಆರ್ ಅನುದಾನದಡಿ ಮುಂದಿನ ನವೆಂಬರ್ (2025) ವೇಳೆಗೆ ಮಂಗನ ಕಾಯಿಲೆ (ಕೆಎಫ್‌ಡಿ)ಗೆ ಲಸಿಕೆ (ವ್ಯಾಕ್ಸಿನ್) ಪ್ರಯೋಗ ಆಗುವ ಸಾಧ್ಯತೆಯಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದರು.

Advertisement

ತಾಲೂಕಿನ ಮಂಗನ ಕಾಯಿಲೆ ಪೀಡಿತ ಅರಳಗೋಡು ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಸಾಗರ, ಹೊಸನಗರ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ ಭಾಗದಲ್ಲಿ ಕಾಯಿಲೆಯು ತೀವ್ರವಾಗಿ ಕಾಣಿಸುತ್ತಿದ್ದು, ಈ ಕಾಯಿಲೆಯಿಂದ ಯಾವುದೇ ವ್ಯಕ್ತಿ ಸಾಯಬಾರದು ಎಂಬ ಉದ್ದೇಶದಿಂದ ಐಸಿಎಂಆರ್ (ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರಿಸರ್ಚ್‌) ಜತೆ ಈಗಾಗಲೇ ಚರ್ಚೆ ನಡೆಸಿದ್ದು, ಹೈದರಾಬಾದಿನ ಸಂಸ್ಥೆಯೊಂದಿಗೆ ಮಾತುಕತೆ ನಡೆದಿದೆ ಎಂದರು.

ಸಿಬ್ಬಂದಿಗೆ ಕಟ್ಟಡ ನಿರ್ಮಾಣ ಬಗ್ಗೆ ಪರಿಶೀಲನೆ: 
ತಾಲೂಕಿಗೆ ಒಂದು ಸಂಚಾರಿ ಮೆಡಿಕಲ್ ಯೂನಿಟ್ ವ್ಯವಸ್ಥೆ ಮಾಡಿಕೊಡಬೇಕು ಎಂದು ಸ್ಥಳೀಯರ ಬೇಡಿಕೆಯಂತೆ ಆಸ್ಪತ್ರೆ ಸಮೀಪ ಕೆಎಫ್‌ಡಿ ವೈದ್ಯಕೀಯ ಸಿಬ್ಬಂದಿ ಉಳಿದುಕೊಳ್ಳುವ ಕಟ್ಟಡ ನಿರ್ಮಾಣದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಮುಂಬರುವ ದಿನಗಳಲ್ಲಿ ಕೆಎಫ್‌ಡಿಯಿಂದ ಯಾರೊಬ್ಬರ ಜೀವವು ಹಾನಿಯಾಗದಂತೆ ತಡೆಗಟ್ಟಲು ಇಲಾಖೆ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಈ ವರ್ಷ  ವೈರಾಣು ಹರಡದಂತೆ ತಡೆಯಲು ತಳ ಹಂತದ ಹಾಗೂ ಎಲ್ಲ ವಿಭಾಗದ ಸಿಬ್ಬಂದಿಗಳು ಸಿದ್ಧರಾಗಿರಬೇಕು ಎಂದು ಸೂಚಿಸಿದರು.

ಕೆಎಫ್‌ಡಿಯಿಂದ ಮೃತಪಟ್ಟವರಿಗೆ ಕನಿಷ್ಠ 10 ಲಕ್ಷ ರೂ. ಪರಿಹಾರ ಘೋಷಿಸಿ: 
ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಗ್ರಾಪಂ ಸದಸ್ಯರು ಸೇರಿ ಒಂದೇ ವರ್ಷದಲ್ಲಿ 23 ಮಂದಿ ಕೆಎಫ್ ಡಿಯಿಂದ ಮೃತಪಟ್ಟಿರುವುದು ದುರಂತ. ಬೇಸಿಗೆ ಸಮೀಪಿಸುತ್ತಿದ್ದಂತೆ ರೋಗ ಉಲ್ಬಣವಾಗುವುದು ಖಚಿತ. ಕ್ಯಾಸನೂರಿನಲ್ಲಿ ಕಾಣಿಸಿಕೊಂಡು ಕಾಯಿಲೆ ಈಗ ರಾಜ್ಯದ ಹಲವು ಭಾಗಕ್ಕೆ ಹರಡಿದೆ ಎಂದರು.

ಸ್ಥಳೀಯ ಆಸ್ಪತ್ರೆಗೆ ಹೆಚ್ಚಿನ ಸಿಬ್ಬಂದಿಯ ಅಗತ್ಯವಿದೆ,  ಜಿಲ್ಲೆಗೆ ಪ್ರಯೋಗಾಲಯ, ಸಂಶೋಧನಾ ಕೇಂದ್ರ ನೀಡಬೇಕೆಂಬುದು ಜನರ ಬೇಡಿಕೆ ಇದೆ. ಮಂಗನ ಕಾಯಿಲೆಯಿಂದ ಮೃತಪಟ್ಟವರಿಗೆ ಕನಿಷ್ಠ 10 ಲಕ್ಷ ಪರಿಹಾರ ಹಾಗೂ ರಾಜ್ಯದ ಯಾವುದೇ ಆಸ್ಪತ್ರೆಗೆ ತೆರಳಿದರೂ ಮಂಗನ ಕಾಯಿಲೆಗೆ ಉಚಿತ ಚಿಕಿತ್ಸೆ ಸೌಲಭ್ಯ ಕೊಡಬೇಕು. ರಾತ್ರಿ ಪಾಳಿಯಲ್ಲಿ ವೈದ್ಯರು, ಸಿಬ್ಬಂದಿ ಸಿಗಬೇಕು ಎಂದು ಒತ್ತಾಯಿಸಿದರು.

Advertisement

ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ನಟರಾಜ್ ಕೆ.ಎಸ್ ಮಾತನಾಡಿ, ಕಳೆದ ವರ್ಷ 63 ಪ್ರಕರಣ ಪತ್ತೆಯಾಗಿತ್ತು, ಒಬ್ಬರು ಮೃತಪಟ್ಟಿದ್ದರು. ಮಳೆಗಾಲದಲ್ಲಿ ಕಾಯಿಲೆ ಪ್ರಮಾಣ ಕಡಿಮೆ ಇರುತ್ತದೆ. ಸ್ಥಳೀಯ ಆಸ್ಪತ್ರೆ ಮೇಲ್ದರ್ಜೆಗೆ ಸೇರಿದಂತೆ 24 ಗಂಟೆಯೂ ಆಂಬ್ಯುಲೆನ್ಸ್, ಮೊಬೈಲ್ ಮೆಡಿಕಲ್ ಯೂನಿಟ್ , ಶಾಶ್ವತ ವೈದ್ಯಕೀಯ ಸೌಲಭ್ಯವೂ ಸಿಗಬೇಕು ಎಂದು ಜನರ ಆಗ್ರಹವಿದೆ ಎಂದು ಹೇಳಿದರು.

ಬಾಲ್ಕಿಶ್ ಬಾನು, ರವಿ ಕುಮಾರ್, ಸುಂದರೇಶ್, ಪಲ್ಲವಿ, ಅರಳಗೋಡು ಗ್ರಾಪಂ ಅಧ್ಯಕ್ಷೆ ಲಕ್ಷ್ಮಿ ದಿನೇಶ್, ವೈ.ಆರ್ ರಾಜೇಶ್ ಗ್ರಾಪಂ ಉಪಾಧ್ಯಕ್ಷ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next