Advertisement

ಅನಾಥ ಮಕ್ಕಳಿಗೆ ಮೀಸಲಾತಿ ಕಲ್ಪಿಸಲು ಚಿಂತನೆ

01:03 PM May 12, 2022 | Team Udayavani |

ಚಿಕ್ಕಮಗಳೂರು: ಅನಾಥ ಮಕ್ಕಳಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಅನುಕೂಲತೆ ದೃಷ್ಟಿಯಿಂದ ಅನಾಥ ಮಕ್ಕಳಿಗೆ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ 1 ತಿಂಗಳಲ್ಲಿ ವರದಿ ಸಲ್ಲಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ತಿಳಿಸಿದರು.

Advertisement

ಬುಧವಾರ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಾಥ ಮಕ್ಕಳಿಗೆ ಬಾಲಮಂದಿರಗಳಲ್ಲಿ ಆಶ್ರಯ ನೀಡಿ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸ ಲಾಗಿದೆ. ಇತರೆ ಮಕ್ಕಳ ಜೊತೆ ಸ್ಪ ರ್ಧೆ ನಡೆಸಲು ಮೀಸಲಾತಿಯಿಂದ ಅನುಕೂಲವಾಗಲಿದೆ ಎಂದರು.

ತಮಿಳುನಾಡು, ತೆಲಂಗಾಣ ಸೇರಿದಂತೆ ಇತರೆ ರಾಜ್ಯಗಳಲ್ಲಿ ಅನಾಥ ಮಕ್ಕಳಿಗೆ ಮೀಸಲಾತಿ ನೀಡಲಾಗಿದೆ. ಅದರಂತೆ ರಾಜ್ಯದಲ್ಲಿನ ಅನಾಥ ಮಕ್ಕಳಿಗೆ ಮೀಸಲಾತಿ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅನಾಥ ಮಕ್ಕಳ ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

ಮೀಸಲಾತಿ ಪ್ರಮಾಣಪತ್ರ ನೀಡುವ ಸಂದರ್ಭದಲ್ಲಿ ಕೆಲವು ಗೊಂದಲಗಳು ಇದ್ದು, ಇದನ್ನು ನಿವಾರಿಸುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಗುತ್ತಿದೆ. ಮೀಸಲಾತಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯ ನರಸಿಂಹರಾಜಪುರ ತಾಲೂಕಿನಲ್ಲಿ ಶೈವರೆಡ್ಡಿ ಜನಾಂಗದಿಂದ ಮೀಸಲಾತಿ ಪಟ್ಟಿಗೆ ಸೇರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಹಾಗೇ ತರೀಕೆರೆ, ಕಡೂರು, ಮೂಡಿಗೆರೆ ತಾಲೂಕಿನಲ್ಲಿ ಮಡಿ ಒಕ್ಕಲಿಗ ಮನವಿ ಸಲ್ಲಿಸಿದ್ದು, ಅವರ ಶೈಕ್ಷಣಿಕ ಸಾಮಾಜಿಕ ಸ್ಥಿತಿಗತಿಯನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.

Advertisement

ಪಂಚಮಸಾಲಿ ವೀರಶೈವ ಜನಾಂಗವನ್ನು ಹಿಂದುಳಿದ ವರ್ಗ 2ಎಗೆ ಸೇರಿಸುವ ಬೇಡಿಕೆ ಇದೆ. ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಪರಿಶೀಲನೆ ಮತ್ತು ಉಳಿದ ಲಿಂಗಾಯುತ ಸಮುದಾಯದ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ತಿಳಿಸಿದರು.

ಕೆಲವರಿಗೆ ಮೀಸಲಾತಿ ಪಟ್ಟಿಯಲ್ಲಿದ್ದೇವೆ ಎನ್ನುವುದೇ ಗೊತ್ತಿಲ್ಲ, ಕೆಲವರಿಗೆ ಮೀಸಲಾತಿ ಪಟ್ಟಿಗೆ ಹೇಗೆ ಸೇರಿಸಬೇಕು ಎನ್ನುವುದು ಗೊತ್ತಿಲ್ಲ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಅಹವಾಲುಗಳನ್ನು ಸ್ವೀಕರಿಸಲಾಗುತ್ತಿದೆ. ಈಗಾಗಲೇ 5 ರಿಂದ 6 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು ಮುಂದಿನ ದಿನಗಳಲ್ಲಿ ಇತರೆ ಜಿಲ್ಲೆಗಳಿಗೆ ಭೇಟಿ ನೀಡಲಾಗುವುದು ಎಂದರು.

ಜಿಲ್ಲಾಧಿಕಾರಿ ಕೆ.ಎನ್. ರಮೇಶ್‌ ಮಾತನಾಡಿ, ಸಾರ್ವಜನಿಕರಿಂದ ಬಂದ ಮನವಿಗಳನ್ನು ಸ್ವೀಕರಿಸಿ ಸೌಲಭ್ಯ ವಂಚಿತರಾಗಿದ್ದಾರೆಯೇ ಅಧ್ಯಯನ ಮಾಡಿ ಆಯೋಗಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದರು. ಹಿಂದುಳಿದ ವರ್ಗ ಆಯೋಗದ ಸದಸ್ಯರಾದ ಎಚ್.ಎಸ್. ಕಲ್ಯಾಣಕುಮಾರ್‌, ಕೆ.ಟಿ. ಸುವರ್ಣ, ರಾಜಶೇಖರ್‌, ಅರುಣ್‌ ಕುಮಾರ್‌, ಶಾರದಾ ನಾಯ್ಕ, ಜಿ.ಪಂ. ಸಿಇಒ ಜಿ.ಪ್ರಭು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸೋಮಶೇಖರ್‌ ಇದ್ದರು.

ರಾಜ್ಯದಲ್ಲಿ 1123 ಜಾತಿಗಳಿದ್ದು, ಮೀಸಲಾತಿ ಪ್ರಮಾಣ ಪತ್ರದಲ್ಲಿ ಕೆಲವೊಂದು ದೋಷಗಳಿದ್ದು ದೋಷಮುಕ್ತಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಹಿಂದುಳಿದ ವರ್ಗ ಆಯೋಗ, ಜಿಲ್ಲಾಧಿಕಾರಿ ಕಚೇರಿ ಹಾಗೂ ತಹಶೀಲ್ದಾರ್‌ ಕಚೇರಿಗೆ ಸಂಪರ್ಕಿಸಬಹುದಾಗಿದೆ. ಕೆ.ಜಯಪ್ರಕಾಶ್ಹೆಗ್ಡೆ, ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next