Advertisement
ಅಳಿಕೆ ಸಮೀಪ ಮುಳಿಯದಲ್ಲಿ ನೆಲೆಸಿರುವ 72ರ ಹರೆಯದ ನಿವೃತ್ತ ಅಧ್ಯಾಪಕ ಮುಳಿಯ ಶಂಕರ ಭಟ್ ಅವರು ಮಕ್ಕಳ ಸಾಹಿತ್ಯದಿಂದ ತೊಡಗಿ ಆಧ್ಯಾತ್ಮ, ಧಾರ್ಮಿಕ ಸಹಿತ ವೈವಿಧ್ಯಮಯ ಸಾಹಿತ್ಯ ರಚನೆ ಮಾಡಿದ್ದಾರೆ. ಸುಮಾರು 19ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಪತ್ರಕರ್ತರಾಗಿ, ಗಮಕಿಯಾಗಿಯೂ ತೊಡಗಿಸಿಕೊಂಡಿದ್ದ ಅವರ ಕೃತಿ ಕೇರಳ ಶಾಲಾ ಪಠ್ಯದಲ್ಲಿ ಸೇರ್ಪಡೆಯಾಗಿದೆ. ಸಾಹಿತ್ಯದ ಪಯಣಕ್ಕಾಗಿ ಕಾವ್ಯ ಕಲಾವಿಶಾರದ ಪ್ರಶಸ್ತಿ, ಯಕ್ಷ ಕೌಸ್ತುಭ ಪ್ರಶಸ್ತಿ ಸಹಿತ ಸುಮಾರು 14 ಪ್ರಶಸ್ತಿ, ಸಮ್ಮಾನಗಳು ಸಂದಿವೆ.
ಖಂಡಿತವಾಗಿಯೂ ನೆಮ್ಮದಿ ತಂದಿದೆ. ಅಪೇಕ್ಷೆ ಇಟ್ಟುಕೊಂಡು ಕೆಲಸ ಮಾಡಿದಾಗ ಮನಸ್ಸಿಗೆ ನಿರಾಸೆಯಾಗುವುದು ಸಹಜ. ಆದರೆ ಅಪೇಕ್ಷೆಯೇ ಇಲ್ಲದೆ ಕೆಲಸ ಮಾಡಿದಾಗ ಅವಕಾಶ ಸಿಕ್ಕರೆ ಸಂತೋಷವೇ, ಸಿಗದೇ ಇದ್ದರೂ ಅಸಮಾಧಾನ ಎಂಬುದು ಇರುವುದಿಲ್ಲ. ನನ್ನ 12ನೇ ವಯಸ್ಸಿನಿಂದ ಸಾಹಿತ್ಯ ರಚನೆಯಲ್ಲಿ ತೊಡಗಿದ್ದು, ಈಗ 72ನೇ ಹರೆಯ. ಈ ಮಧ್ಯದ ಅವಧಿಯಲ್ಲಿ ಸಾಹಿತ್ಯ ಚಟುವಟಿಕೆಯಲ್ಲಿ ನಾನು ಮಾನಸಿಕ ತೃಪ್ತಿ, ಜನರ ಪ್ರೀತಿ ಕಂಡಿದ್ದೇನೆ. ಆಧ್ಯಾತ್ಮಿಕ ಸಾಹಿತ್ಯ, ಮಹಾಕಾವ್ಯಗಳು ಪ್ರಕಾಶಿತವಾಗಿದ್ದು, ಎಲ್ಲೂ ಕೂಡ ನನಗೆ ಪ್ರಕಾಶನದ ಸಮಸ್ಯೆಯಾಗಿಲ್ಲ. ಹೀಗಾಗಿ ನಾನು ನಿಜವಾಗಿಯೂ ತೃಪ್ತ ಎಂದು ಹೇಳುತ್ತೇನೆ.
Related Articles
ಸಾಹಿತ್ಯ ಸಮ್ಮೇಳನದಲ್ಲಿ ಬೇರೆ ಬೇರೆ ಮನಸ್ಸುಗಳು ಒಂದಾದಾಗ ಕನ್ನಡದ ಉಳಿವಿಗೆ ನಾವು ಏನು ಮಾಡಬಹುದು, ಮುಂದಿನ ಪೀಳಿಗೆಗೆ ಸಾಹಿತ್ಯವನ್ನು ಹೆಚ್ಚು ವರ್ಧಮಾನಕ್ಕೆ ತರುವುದಕ್ಕೆ ನಮ್ಮ ಪಾತ್ರ ಏನು ಎಂಬುದನ್ನು ಹೆತ್ತವರು, ಕನ್ನಡ ಕಾರ್ಯಕರ್ತರು ಯೋಚಿಸಲು ಅವಕಾಶ ದೊರೆಯುತ್ತದೆ. ಮಕ್ಕಳು, ಪೋಷಕರು ಕೂಡ ಕನ್ನಡ ಭಾಷೆ, ಸಂಸ್ಕೃತಿಯನ್ನು ಕಂಡುಕೊಳ್ಳುವುದಕ್ಕೆ ಆಂಶಿಕವಾಗಿಯಾದರೂ ಕಾರಣ ವಾಗಬೇಕು ಎನ್ನುವ ಕಾರಣಕ್ಕೆ, ಸಾಹಿತ್ಯವು ಮುಂದಿನ ಜನಾಂಗಕ್ಕೆ ಕೈದೀವಿಗೆಯಾಗಬೇಕು ಎನ್ನುವ ಕಾರಣಕ್ಕೆ ಸಮ್ಮೇಳನಗಳು ಅಗತ್ಯವಾಗಿದೆ.
Advertisement
-ಸಮ್ಮೇಳನಗಳಿಂದ ಜನ ಏನು ನಿರೀಕ್ಷೆ ಮಾಡಬಹುದು?ಇತರರ ಅಭಿಪ್ರಾಯವನ್ನು ಕೇಳುವ ಮನೋಧರ್ಮವಿಲ್ಲದೆ ತನ್ನ ಅಭಿಪ್ರಾಯವನ್ನು ಇತರರು ಕೇಳಬೇಕು ಎಂದು ಹಂಬಲಿಸುವುದು ಸರಿಯಾಗುವುದಿಲ್ಲ. ಸಾಹಿತ್ಯದ ಕುರಿತು ಚಿಂತನ-ಮಂಥನ ನಡೆದು ಅದನ್ನು ಜನರಿಗೆ ಕೊಡಬೇಕು. ನಮ್ಮ ದೌರ್ಬಲ್ಯ ಯಾವುದು, ಯಾಕೆ ಸಾಹಿತ್ಯ ಬೇಡವಾಗಿದೆ, ಜನ ಬಯಸುವ ಹಾಗೆ ಮಾಡಬೇಕಾದರೆ ನಾವು ಏನು ಮಾಡಬೇಕು ಎಂಬ ದಿಕ್ಸೂಚಿಯನ್ನು ಸಮ್ಮೇಳನಗಳು ಸೂಚಿಸಬೇಕು. ಅದನ್ನು ಜನರು ಸ್ವೀಕಾರ ಮಾಡಬೇಕು. -ಯುವ ಸಮುದಾಯ ಸಾಹಿತ್ಯದ ಓದು- ಬರವಣಿಗೆಯಲ್ಲಿ ತೊಡಗಲು ಏನು ಮಾಡಬಹುದು.?
ಹಲವು ವರ್ಷಗಳ ಹಿಂದಕ್ಕೆ ಹೋಲಿಸಿದರೆ ಪ್ರಸ್ತುತ ಶಾಲೆಗಳಲ್ಲಿ ಕೂಡ ಸಾಹಿತ್ಯ ಸಂಘ, ಚರ್ಚಾ ಕೂಟಗಳ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಅಧ್ಯಾಪಕರು ಓದುವುದು-ಹಾಡುವುದು ನಮ್ಮ ಘನತೆಗೆ ಧಕ್ಕೆಯಾಗುತ್ತದೆ ಎಂದು ಕೊಂಡಿದ್ದಾರೋ ಗೊತ್ತಿಲ್ಲ. ಯಾವುದೇ ಸಾಹಿತ್ಯವನ್ನು ಮಕ್ಕಳಿಗೆ ಮನಮುಟ್ಟುವ ರೀತಿಯಲ್ಲಿ ಅಭಿನಯ ಮಾಡಿದಾಗ ಅವರಿಗೆ ಸಾಹಿತ್ಯದಲ್ಲಿ ಒಲವು ಮೂಡುತ್ತದೆ. ಯುವ ಸಮುದಾಯ ತಾವು ಹಂಬಲಿಸುವ ಕ್ಷೇತ್ರದ ಜ್ಞಾನವನ್ನು ಪಡೆಯಬೇಕಿದ್ದು, ಅಭ್ಯಾಸ-ಅಧ್ಯಯನ ಇಲ್ಲದೆ ಬರಹ ಯಶಸ್ವಿಯಾಗುವುದಿಲ್ಲ. -ಸಾಹಿತ್ಯದ ಬೆಳವಣಿಗೆಗೆ ಸರಕಾರದ ಪ್ರೋತ್ಸಾಹ ಹೇಗಿರಬೇಕು.?
ಸಾಹಿತ್ಯ ಎಂದರೆ ಬರೀ ಸಾಹಿತ್ಯವಲ್ಲದೆ ಭಾಷೆ, ಸಂಸ್ಕೃತಿಯೂ ಇರುತ್ತದೆ. ಹೀಗಾಗಿ ಸರಕಾರ ಕನ್ನಡ ಭಾಷೆ ಕಲಿಯುವವರಿಗೆ, ವಿಶೇಷವಾದ ಪ್ರೋತ್ಸಾಹ, ಅನುದಾನ, ಮೀಸಲಾತಿಯನ್ನು ಕೊಡಬೇಕು. ಇತ್ತಿಚೆಗೆ ಕೆಲವು ಇಲಾಖೆಗಳು ಕನ್ನಡಕ್ಕೆ ಸ್ಥಾನಮಾನ ಕೊಟ್ಟಿದ್ದು, ಇದು ಎಲ್ಲ ರಂಗದಲ್ಲಿಯೂ ಬರಬೇಕು. ಸರಕಾರ ಏನು ಮಾಡಬಹುದು ಎಂಬುದರ ಜತೆಗೆ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ನಮ್ಮೊಂದಿಗೆ ಅಳಿದು ಹೋದರೆ ತೃಪ್ತಿಯೇ, ನಮ್ಮ ಮಕ್ಕಳ ಅದನ್ನು ಕಲಿಯಬೇಕೇ ಎಂಬುದರ ಕುರಿತು ಪೋಷಕರು ತಮ್ಮನ್ನು ತಾವು ವಿವೇಚನೆಗೆ ಒಳಪಡಿಸಬೇಕಿದೆ. ಕನ್ನಡ ಭಾಷೆಯ ಕಲಿಕೆಯ ಜತೆಗೆ ಪೂರಕ ಕಾರ್ಯಕ್ರಮಗಳು ನಡೆದರೆ ಹೆಚ್ಚು ಪುಷ್ಠಿಗೊಳ್ಳುತ್ತದೆ. ಇವೆಲ್ಲವನ್ನೂ ಮಾಡುವುದಕ್ಕೆ ಸರಕಾರ ಒಪ್ಪಿಕೊಳ್ಳುವುದು ಕಷ್ಟ, ಅದರ ಧೋರಣೆ ಬೇರೆಯೇ ಇರುತ್ತದೆ. ಹಾಗೆಂದು ಸರಕಾರವನ್ನು ಪ್ರಶ್ನೆ ಮಾಡುವಷ್ಟು ದೊಡ್ಡವರು ನಾವಲ್ಲ. -ಕಿರಣ್ ಸರಪಾಡಿ