ನವದೆಹಲಿ: ದೆಹಲಿ ಸರ್ಕಾರದ ಮುಖ್ಯಕಾರ್ಯದರ್ಶಿ (ಸಿಎಸ್) ಅನ್ಶ್ ಪ್ರಕಾಶ್ ಮೇಲೆ ಆಡಳಿತಾರೂಢ ಆಪ್ ಶಾಸಕರು ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶುಕ್ರವಾರ, ದೆಹಲಿ ಪೊಲೀಸರು ಸಿಎಂ ಕೇಜ್ರಿವಾಲ್ ನಿವಾಸದಲ್ಲಿ ಶೋಧ ನಡೆಸಿ ಅಲ್ಲಿರುವ 21 ಸಿಸಿಟಿವಿ ಕ್ಯಾಮೆರಾಗಳು ಹಾಗೂ ಇವುಗಳಿಗೆ ಸಂಬಂಧಿಸಿದ ಒಂದು ಹಾರ್ಡ್ ಡಿಸ್ಕ್ ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸರು, ಸಿಎಂ ನಿವಾಸದಲ್ಲೇ ಘಟನೆ ನಡೆದಿದ್ದ ರಿಂದಾಗಿ, ಸಿಸಿಟಿವಿ ಹಾರ್ಡ್ ಡಿಸ್ಕ್ ನೀಡುವಂತೆ ಈ ಮುನ್ನ ಸಿಎಂ ಕೇಜ್ರಿವಾಲ್ ಅವರನ್ನು ಕೋರಿದ್ದೆವು. ಅದಕ್ಕೆ ಅವರು ಸ್ಪಂದಿಸದ ಕಾರಣ, ಮನೆಯನ್ನು ಪರಿ ಶೀಲನೆಗೊಳಪಡಿಸಿ ಹಾರ್ಡ್ ಡಿಸ್ಕ್ ತರಬೇಕಾಯಿತು ಎಂದಿದೆ.
ಅಲ್ಲದೆ, 21 ಸಿಸಿಟಿವಿಗಳಲ್ಲಿ ಕೇವಲ 14 ಮಾತ್ರವೇ ಕೆಲಸ ಮಾಡುತ್ತಿದ್ದವು. ಅನ್ಶ್ ಪ್ರಕಾಶ್ ಮೇಲೆ ಹಲ್ಲೆ ನಡೆದ ಕೊಠಡಿಯಲ್ಲಿದ್ದ ಸಿಸಿಟಿವಿ ಕೆಲಸ ಮಾಡುತ್ತಿಲ್ಲ ಎಂದೂ ಪೊಲೀಸರು ತಿಳಿಸಿದ್ದಾರೆ.
ಆಪ್ ಆಕ್ಷೇಪ: ಪೊಲೀಸರ ಈ ನಡೆಯನ್ನು ತೀವ್ರವಾಗಿ ಆಕ್ಷೇಪಿಸಿರುವ ಆಪ್, ಈ ದಾಳಿ ಕಾನೂನು ಬಾಹಿರವಾಗಿದ್ದು, ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ನಡೆದಿದೆ ಎಂದಿದೆ. ಇದಲ್ಲದೆ, ಕೇಂದ್ರ ಸರ್ಕಾರ, ದೆಹಲಿ ಸರ್ಕಾರವನ್ನು ಅಸ್ಥಿರಗೊಳಿಸಲು ಮಾಡುತ್ತಿರುವ ಪ್ರಯತ್ನಗಳನ್ನು ಜನರಿಗೆ ಮನವರಿಕೆ ಮಾಡಲು ದೇಶವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಘೋಷಿಸಿದೆ. ದೆಹಲಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಆಪ್ ನಾಯಕ ಸಂಜಯ್ ಸಿಂಗ್ ಈ ವಿಚಾರ ತಿಳಿಸಿದ್ದಾರೆ.
ಇತ್ತ ತಮ್ಮ ನಿವಾಸದ ಮೇಲೆ ಪೊಲೀಸ್ ದಾಳಿಯಾದ ಕೂಡಲೇ ಸಿಎಂ ಕೇಜ್ರಿವಾಲ್, ತಮ್ಮ ಸಂಪುಟದ ಸಹೋದ್ಯೋಗಿಗಳೊಂದಿಗೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇದಾದ ನಂತರ, ಲೆಫ್ಟಿನೆಂಟ್ ಗವರ್ನರ್ ಅವರಿಂದ ಪ್ರಕಟಣೆಯೊಂದು ಹೊರಬಿದ್ದಿದ್ದು, ಸಿಎಸ್ ಮೇಲಿನ ಹಲ್ಲೆ ಪ್ರಕರಣ ದುರದೃಷ್ಟಕರ ಎಂದು ಬಣ್ಣಿಸಿರುವ ಗವರ್ನರ್, ಸರ್ಕಾರ ಮತ್ತು ಅಧಿಕಾರಿ ವರ್ಗದ ನಡುವಿನ ಒಡಕನ್ನು ಶೀಘ್ರವೇ ಸರಿಪಡಿಸಲಾಗುವುದು ಎಂಬ ಆಶ್ವಾಸನೆ ನೀಡಿದ್ದಾರೆ.
ಏತನ್ಮಧ್ಯೆ, ಅನ್ಶ್ ಕುಮಾರ್ ಮೇಲಿನ ಹಲ್ಲೆ ಹಿನ್ನೆಲೆಯಲ್ಲಿ ದೆಹಲಿ ಐಎಎಸ್ ಅಧಿಕಾರಿಗಳ ಸಂಘ, ಪ್ರಧಾನಿ ಕಚೇರಿಯ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಅವರನ್ನು ಭೇಟಿಯಾಗಿ ದೆಹಲಿ ಸರ್ಕಾರದ ವಿರುದ್ಧ ದೂರು ನೀಡಿದೆ.
ಜಾಮೀನು ನಿರಾಕರಣೆ: ಪ್ರಕರಣದಲ್ಲಿ ಬಂಧಿತರಾಗಿರುವ ಆಪ್ ಶಾಸಕರಾದ ಅಮಾನತುಲ್ಲಾ ಖಾನ್ ಹಾಗೂ ಪ್ರಕಾಶ್ ಜರ್ವಾಲ್ ಅವರಿಗೆ ಜಾಮೀನು ನೀಡಲು ದೆಹಲಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿರಾಕರಿಸಿದೆ. ಜತೆಗೆ, ಆರೋಪಿಗಳನ್ನು ಪೊಲೀಸ್ ವಶಕ್ಕೆ
ಒಪ್ಪಿಸಬೇಕೆಂದು ಕೋರಿದ್ದ ದೆಹಲಿ ಪೊಲೀಸರ ಮನವಿಯನ್ನು ತಳ್ಳಿಹಾಕಿ, ನ್ಯಾಯಾಂಗ ವಶದಲ್ಲೇ ಮುಂದುವರಿಯುವಂತೆ ಆದೇಶಿಸಿದೆ.