ಹೊಸದಿಲ್ಲಿ: ಕಳೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವಿವಾದಾತ್ಮಕ ಫೈನಲ್ ಬಹುಶಃ ಕ್ರಿಕೆಟ್ ಇರುವಷ್ಟು ಕಾಲ ಮರೆತು ಹೋಗಲಿಕ್ಕಿಲ್ಲ. ಇದು ಸಲ್ಲದ ಕಾರಣಕ್ಕಾಗಿ ಕಾಡುತ್ತಲೇ ಇರುತ್ತದೆ. ಇಂಗ್ಲೆಂಡನ್ನು ಬೌಂಡರಿ ಲೆಕ್ಕಾಚಾರದ ಮೇಲೆ ಚಾಂಪಿಯನ್ ಎಂದು ಘೋಷಿಸಿದ ಕ್ರಮವನ್ನು ಅಷ್ಟು ಸುಲಭದಲ್ಲಿ ಅರಗಿಸಿಕೊಳ್ಳಲಾಗದು.
ಮಾಜಿ ಆರಂಭಕಾರ ಗೌತಮ್ ಗಂಭೀರ್ ಈ ವಿಷಯವನ್ನು ಮತ್ತೆ ಕೆದಕಿದ್ದಾರೆ. ಇಂಗ್ಲೆಂಡ್ ಜತೆಗೆ ನ್ಯೂಜಿಲ್ಯಾಂಡನ್ನು ಜಂಟಿ ಚಾಂಪಿಯನ್ ಎಂಬುದಾಗಿ ಘೋಷಿಸಬೇಕಿತ್ತು ಎಂದಿದ್ದಾರೆ.
“ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳೆರಡೂ ಅಮೋಘ ಹೋರಾಟ ನೀಡಿದ್ದವು. ಆದರೆ ಕೇನ್ ವಿಲಿಯಮ್ಸನ್ ಸಾರಥ್ಯದ ನ್ಯೂಜಿಲ್ಯಾಂಡ್ ಕಪ್ ಗೆಲ್ಲದಿದ್ದುದು ನಿಜಕ್ಕೂ ದುರದೃಷ್ಟ. ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಿಬೇಕಿತ್ತು’ ಎಂದು ಗಂಭೀರ್ “ಕ್ರಿಕೆಟ್ ಕನೆಕ್ಟೆಡ್’ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
“ನ್ಯೂಜಿಲ್ಯಾಂಡ್ ವಿಶ್ವಕಪ್ ಕೂಟಗಳಲ್ಲೆಲ್ಲ ಅತ್ಯಂತ ಸ್ಥಿರವಾದ ನಿರ್ವಹಣೆ ನೀಡುತ್ತ ಬಂದಿದೆ. ಯಾವುದೇ ಪರಿಸ್ಥಿತಿಯಲ್ಲೂ ಹೋರಾಟವನ್ನು ಕೈಚೆಲ್ಲುವುದಿಲ್ಲ. ಆದರೆ ಅವರಿಗೆ ಎಂದೂ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಸಲವೂ ಅದೃಷ್ಟ ಕೈಹಿಡಿಯಲಿಲ್ಲ’ ಎಂದು ಗಂಭೀರ್ ಬ್ಲ್ಯಾಕ್‌ಕ್ಯಾಪ್ಸ್ ಬಗ್ಗೆ ಕನಿಕರ ವ್ಯಕ್ತಪಡಿಸಿದರು.