Advertisement
ಈ ಪ್ರದೇಶದ ಜನರು ಈಗಲೂ ಆರೆಂಟು ಕಿ.ಮೀ. ನಡೆಯಬೇಕು. ಇಲ್ಲದಿದ್ದರೆ ಖಾಸಗಿ ವಾಹನಗಳ ಮೊರೆ ಹೋಗಬೇಕು. ಒಟ್ಟು 9 ಕಿ.ಮೀ. ಇರುವ ಈ ರಸ್ತೆ ಹಾಲಾಡಿ – ಚೋರಾಡಿ- ವಂಡಾರು – ಮಾವಿನಕಟ್ಟೆಯನ್ನು ಸಂಧಿಸುತ್ತದೆ.
ಹಾಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದೆ ಚೋರಾಡಿ ಎಂಬ ಊರು. ಈ ಊರಿಗೆ ಸಂಪರ್ಕ ಕಲ್ಪಿಸಲು ಸುವ್ಯಸ್ಥಿತ ಡಾಮರು ರಸ್ತೆಯಿದೆ. ಅಗಲ ಕಿರಿದಾದರೂ ಹೇಳಿಕೊಳ್ಳುವಷ್ಟು ಹಾಳಾಗಿಲ್ಲ. ಈ ರಸ್ತೆಯಲ್ಲಿ ಸಾಗಿದರೆ, ಚೇರ್ಕೆ, ಮುದೋರಿ, ಬಾಬಿನಾಡಿ, ತೊಟ್ಟೊಟ್ಟು, ಕಾಸಾಡಿ, ಗೋಳಿಯಂಗಡಿ ಮೊದಲಾದ ಪ್ರದೇಶಗಳಿವೆ. ಇಷ್ಟೂ ಊರಿನ ಸಂಪರ್ಕಕ್ಕೆ ಇರುವ ಪ್ರಮುಖ ರಸ್ತೆ ಇದಾದರೂ ಬಸ್ಸುಗಳಿಲ್ಲ, ರಿಕ್ಷಾ, ಜೀಪು ಸರ್ವೀಸ್ ಇಲ್ಲ ಎನ್ನುತ್ತಾರೆ ಗ್ರಾ.ಪಂ. ಸದಸ್ಯ ಅಶೋಕ್ ಶೆಟ್ಟಿ.
ಬವಣೆ
ಹಾಲಾಡಿ ಪೇಟೆ ಈ ಭಾಗದ ಜನರಿಗೆ ಮುಖ್ಯ. ಕಾರಣ, ಹಾಲಾಡಿ ಕುಂದಾಪುರ, ಆಗುಂಬೆ, ಸಾಗರ, ಹೆಬ್ರಿ, ಕಾರ್ಕಳ, ಕೊಲ್ಲೂರು, ಶಿವಮೊಗ್ಗ ಮೊದಲಾದ ಕಡೆಗೆ ನೇರ ಸಂಪರ್ಕ ಸಾಧಿಸುವ ತಾಣ. ಎಲ್ಲ ಹಳ್ಳಿಯವರಿಗೂ ಇದೇ ಪ್ರದೇಶ ಶಾಲಾ-ಕಾಲೇಜುಗಳಿಗೆ ತೆರಳಲು, ನಿತ್ಯದ ವ್ಯವಹಾರಕ್ಕೆ, ಬ್ಯಾಂಕ್ ಕೆಲಸ, ಪಡಿತರ, ಆಸ್ಪತ್ರೆಗೆ ತೆರಳಲು, ಬಸ್ಸು ಸಂಪರ್ಕಕ್ಕೆ ಸುಲಭ ಆಯ್ಕೆ. ಆದರೆ ಚೋರಾಡಿಯಿಂದ ಹಾಲಾಡಿ ತಲುಪುವುದೇ ಕಷ್ಟ. ಬೆಳಗ್ಗೆ ಮತ್ತು ಸಂಜೆ ಆರೆಂಟು ಕಿ.ಮೀ. ನಡೆಯುವುದೇ ಶಿಕ್ಷೆ. ಮಧ್ಯಾಹ್ನದ ಬಿಸಿಲಿದ್ದರೆ ಕೇಳುವುದೇ ಬೇಡ. ಹಾಗಾಗಿ ಶಾಲಾ ಕಾಲೇಜು ಮಕ್ಕಳಿಗಷ್ಟೇ ಅಲ್ಲ ಎಲ್ಲರಿಗೂ ಸಮಸ್ಯೆ ತಂದಿತ್ತಂತಾಗಿದೆ. ರಸ್ತೆಗೆ ಕಂಟಕ
ಸ್ವರ್ಣಾನದಿ ನೀರು ವರ್ಷದ 8 ತಿಂಗಳು ಮಾತ್ರ ಸಾಲುತ್ತಿದ್ದು ಉಳಿದ 4 ತಿಂಗಳಿಗೆ ವಾರಾಹಿ ನದಿಯಿಂದ ಉಡುಪಿಗೆ ನೀರು ಕೊಡುವ ಯೋಜನೆ ತಯಾರಾಗಿದೆ. ಇದಕ್ಕಾಗಿ ಅಮೃತ್ (ಅಟಲ್ ಮಿಶನ್ ರೆಜುವಿನೇಶನ್ ಆಂಡ್ ಅರ್ಬನ್ ಟ್ರಾನ್ಸ್‌ಫಾರ್ಮೇಶನ್) ಯೋಜನೆಯಲ್ಲಿ 122.5 ಕೋ.ರೂ. ವೆಚ್ಚದಲ್ಲಿ ಡಿಪಿಆರ್ ಮಾಡಲಾಗಿದೆ. ಹಾಲಾಡಿಯ ಭರತ್ಕಲ್‌ನಿಂದ 864 ಎಂಎಂ ಗಾತ್ರದ ಪೈಪಿನಲ್ಲಿ 38.5 ಕಿಮೀ.ದೂರದ ಬಜೆ ಅಣೆಕಟ್ಟಿಗೆ ನೀರು ಹಾಕಿ ಅಲ್ಲಿ ಶುದೀœಕರಿಸಿ ಉಡುಪಿಗೆ ಕಳುಹಿಸಲಾಗುತ್ತದೆ. ಆದರೆ ಹಾಗೆ ಕಳುಹಿಸುವಾಗ ಪೈಪ್‌ಗಾಗಿ ಅಗೆತ ಮಾಡಿ ಈ ಚೋರಾಡಿ ರಸ್ತೆಗೆ ಗಂಡಾಂತರ ಬರಲಿದೆ ಎಂಬ ಆತಂಕ ಊರವರದ್ದು.
Related Articles
ಈಗಿನ ಡಿಪಿಆರ್‌ನಂತೆ ರಸ್ತೆ ಬದಿ ಅಥವಾ ರಸ್ತೆಯನ್ನೇ ಬಗೆದು 1.5 ಮೀ.ಅಗಲ, 2 ಮೀ. ಆಳದಲ್ಲಿ ಪೈಪ್‌ಲೈನ್ ಅಳವಡಿಸಲಾಗುತ್ತದೆ. ಗ್ರಾ.ಪಂ. ವ್ಯಾಪ್ತಿಯ ರಸ್ತೆಗಳು ತೀರಾ ಕಿರಿದಾಗಿದ್ದು ಕಾಮಗಾರಿಯಿಂದಾಗಿ ಹಾನಿಯಾಗಲಿದೆ. ಭವಿಷ್ಯದಲ್ಲಿ ರಸ್ತೆ ಅಗಲಗೊಳಿಸಲಾಗದು. ಪೈಪ್‌ಲೈನ್ ಹಾದುಹೋಗುವ ಬಹುತೇಕ ಕಡೆ ರಸ್ತೆಯ ಎರಡೂ ಬದಿ ಗದ್ದೆ, ತೋಟ, ಮನೆ, ಖಾಸಗಿ ಜಾಗ ಇದ್ದು ಡಿಪಿಆರ್‌ನಲ್ಲಿ ಭೂಸ್ವಾಧೀನಕ್ಕೆ ಅನುದಾನ ಇಟ್ಟಿಲ್ಲ. ಆದ್ದರಿಂದ ರಸ್ತೆ ಹಾಳುಗೆಡವದಂತೆ ಡಿಪಿಆರ್ ಬದಲಿಸಬೇಕು ಎಂಬ ಬೇಡಿಕೆ ಇದೆ. ಹಾಲಾಡಿ ಗ್ರಾಮ ಪಂಚಾಯತ್ ಹಾಲಾಡಿ 28 ಹಾಗೂ ಹಾಲಾಡಿ 76 ಎಂಬ ಎರಡು ಗ್ರಾಮಗಳನ್ನು ಹೊಂದಿದೆ. ಇಲ್ಲಿ ಕ್ರಮವಾಗಿ 335 ಹಾಗೂ 764 ಮನೆಗಳಿದ್ದು ಒಟ್ಟು 5,307 ಜನಸಂಖ್ಯೆಯಿದೆ. ಪಂಚಾಯತ್‌ನಲ್ಲಿ 11 ಜನ ಸದಸ್ಯರಿದ್ದಾರೆ. ಚೋರಾಡಿಯ ಜನರ ಸಾರಿಗೆ ಬೇಡಿಕೆ ಈಡೇರಿಕೆಗೆ ಇವರು ಸ್ಪಂದಿಸಲಿದ್ದಾರೆಯೇ ಎಂದು ನೋಡಬೇಕಿದೆ.
Advertisement
ಅತ್ಯವಶ್ಯಈ ರಸ್ತೆ ಮೂಲಕ ಸಾರ್ವಜನಿಕ ಸಾರಿಗೆ ತುರ್ತಾಗಿ ಆರಂಭವಾಗಬೇಕು. ಸಂಬಧಪಟ್ಟವರು ಗಮನಿಸಿ ಶಾಲಾ ಕಾಲೇಜು ಮಕ್ಕಳ, ಗೃಹಿಣಿಯರ ಸಂಕಷ್ಟ ನಿವಾರಿಸಬೇಕು.
– ಅಶೋಕ್ ಶೆಟ್ಟಿ,
ಪಂಚಾಯತ್ ಸದಸ್ಯರು, ಹಾಲಾಡಿ – ಲಕ್ಷ್ಮೀ ಮಚ್ಚಿನ