Advertisement
ನಾಯ್ಕನಕಟ್ಟೆ, ನಂದನವನ, ಮಡಿಕಲ್, ತಾರಾಪತಿ, ಅಳ್ವಿಕೋಡಿ, ಅಮ್ಮನವರತೊಪ್ಲು, ಕರ್ಕಿಕಳಿ, ಕಂಚಿಕಾನ್, ಬವಳಾಡಿ, ಗಂಟಿಹೊಳೆ, ಸಾಲಿಮಕ್ಕಿ, ಬಿಜೂರು ಗ್ರಾಮಗಳಿಗೆ ಪ್ರಮುಖ ಜಂಕ್ಷನ್ ಉಪ್ಪುಂದ ಪೇಟೆ. ಅರಮಕೋಡಿ ಈಶ್ವರ ದೇವಸ್ಥಾನ, ಮೂಡುಗಣಪತಿ ಹಾಗೂ ಆನೆಗಣಪತಿ ದೇವಸ್ಥಾನ ಇದೆ. ಉಪ್ಪುಂದ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು, ಕಂಚಿಕಾನ್ ಪ್ರಾಥಮಿಕ ಶಾಲೆ, ಬವಳಾಡಿ ಶಾಲೆಗೆ ಸಂಪರ್ಕ ಕೊಂಡಿಯಾಗಿದೆ. ಇನ್ನು ಬ್ಯಾಂಕ್, ಹತ್ತಾರು ಸಹಕಾರಿ ಸಂಸ್ಥೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಮೀನು ಮಾರುಕಟ್ಟೆ, ಬೈಂದೂರು ತಾಲೂಕಿನಲ್ಲಿ ಅತೀ ಹೆಚ್ಚು ಜನ ಸೇರುವ ವಾರದ ಸಂತೆ ಉಪ್ಪುಂದದಲ್ಲಿ ನಡೆಯುತ್ತದೆ. ಇಷ್ಟೆಲ್ಲ ಇದ್ದರೂ ಇಲ್ಲೊಂದು ಸರಿಯಾದ ಬಸ್ ತಂಗುದಾಣ ಇಲ್ಲ.
ಇಲ್ಲಿ ಸರಿಯಾದ ಬಸ್ ನಿಲ್ದಾಣ ಇಲ್ಲದೆ ಇರುವುದರಿಂದ ಪ್ರಯಾಣಿಕರು ಬಸ್ ಹತ್ತಲು ಸರ್ವಿಸ್ ರಸ್ತೆಯಲ್ಲೇ ನಿಲ್ಲಬೇಕು. ಜೋರಾಗಿ ಮಳೆ ಬಂದರೆ ಓಡಿ ಹೋಗಿ ಮೀನು ಮಾರ್ಕೆಟ್‌ನಲ್ಲಿ ಆಶ್ರಯ ಪಡೆಯದೆ ಬೇರೆ ಮಾರ್ಗವಿಲ್ಲ.
Related Articles
ನಾಯ್ಕನಕಟ್ಟೆ ರಾ.ಹೆದ್ದಾರಿಯಲ್ಲಿ ಎರಡು ಕಡೆಗಳಲ್ಲಿ ಬಸ್ ನಿಲ್ದಾಣ ಬಿಡಿ, ಪ್ರಯಾಣಿಕರ ತಂಗುದಾಣವು ಮಾಡಲು ಸಾಧ್ಯವಾಗಿಲ್ಲ. ನಾಗರಿಕರ ಗೋಳು ಕೇಳುವವರಿಲ್ಲ ಎನ್ನುವಂತಾಗಿದೆ. ಪಶ್ಚಿಮ ದಿಕ್ಕಿನಲ್ಲಿ ರಿಕ್ಷಾ ನಿಲ್ದಾಣವೇ ಗತಿ. ಇನ್ನು ಪೂರ್ವ ಬದಿಯಲ್ಲಿ ಅಂಗಡಿಗಳ ಎದುರು ನಿಂತು ಬಸ್ಸಿಗಾಗಿ ಕಾಯಬೇಕಾದ ಅನಿವಾರ್ಯ ಪರಿಸ್ಥಿತಿ. ಕಂಬದಕೋಣೆ, ಶಾಲೆಬಾಗಿಲು, ಬಿಜೂರು ರಾ.ಹೆದ್ದಾರಿಯಲ್ಲಿ ವ್ಯವಸ್ಥಿತ ತಂಗುದಾಣ ನಿರ್ಮಾಣಕ್ಕೆ ಮುಹೂರ್ತ ನಿಗದಿಯಾಗಿಲ್ಲ. ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ತಾತ್ಕಾಲಿಕ ತಂಗುದಾಣವೇ ಆಶ್ರಯ ತಾಣವಾಗಿದೆ.
Advertisement
ಇನ್ನು ಸರ್ವಿಸ್ ರಸ್ತೆಯನ್ನು ಸಮರ್ಪಕವಾಗಿ ಮಾಡಿಲ್ಲ, ಸರ್ವಿಸ್ ರಸ್ತೆಯನ್ನು ಉಪ್ಪುಂದ ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಮುಖ ಮಂಟಪದ ವರೆಗೆ ವಿಸ್ತರಿಸಬೇಕು ಎನ್ನುವ ಬೇಡಿಕೆ ಧೂಳು ತಿನ್ನುತ್ತಿದೆ. ಚರಂಡಿ ವ್ಯವಸ್ಥೆಯಂತೂ ದೇವರಿಗೇ ಪ್ರೀತಿ ಎನ್ನುವಂತಿದೆ. ಗ್ರಾ.ಪಂ. ಸಮೀಪದಲ್ಲೇ ಅರ್ಧಂಬರ್ಧ ಚರಂಡಿ ನಿರ್ಮಿಸಿ ಹಾಗೇ ಬಿಡಲಾಗಿದೆ. ಸರ್ವಿಸ್ ರಸ್ತೆಯ ನೀರು ಪೇಟೆಯ ಮುಖ್ಯರಸ್ತೆಯ ಮೇಲೆ ಹರಿಯುತ್ತಿದೆ. ಫ್ಲೈ ಓವರ್ ಬಿಟ್ಟು ಕೆಳಗೆ ಇಳಿಯದ ಎಕ್ಸ್‌ಪ್ರೆಸ್‌ಗಳು!
ಉಪ್ಪುಂದದಲ್ಲಿ ಈ ಹಿಂದೆ ವ್ಯವಸ್ಥಿತವಾದ ತಂಗುದಾಣವಿತ್ತು. ರಸ್ತೆ ಅಗಲೀಕರಣ ಸಂದರ್ಭ ಅದನ್ನು ಕಿತ್ತುಹಾಕಲಾಯಿತು. ಹೆದ್ದಾರಿ ಕಾಮಗಾರಿ ಬಳಿಕ ಕಾಟಾಚಾರಕ್ಕೆ ತಗಡಿನ ತಂಗುದಾಣ ಮಾಡಿದ್ದಾರೆ. ಉಪ್ಪುಂದ ಪೇಟೆಯಲ್ಲಿ ಸ್ಥಳೀಯರ ಮೇಲ್ ಸೇತುವೆ ಬೇಡಿಕೆಯನ್ನು ಪರಿಗಣಿಸದೆ ಅಂಡರ್ ಪಾಸ್ ನಿರ್ಮಾಣ ಮಾಡಲಾಯಿತು. ರಸ್ತೆಯ ವಿಸ್ತರಣೆಯಿಂದಾಗಿ ಇಡೀ ಪೇಟೆಯೇ ಎರಡು ಭಾಗವಾಗಿದೆ. ಇಲ್ಲಿನ ರಾ. ಹೆದ್ದಾರಿ ವಿಸ್ತರಣೆಯಿಂದ ಸಮಸ್ಯೆಗಳೇ ಜಾಸ್ತಿಯಾಗಿದೆ. ಉಪ್ಪುಂದ ಕಾಲೇಜು ಬದಿಯಲ್ಲಿ ನಿರ್ಮಿಸಿರುವ ಬಸ್ ತಂಗುದಾಣದಿಂದ ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟುಮಾಡುತ್ತಿದೆ. ಅಸಮರ್ಪಕ ಕಾಮಗಾರಿಯಿಂದ ಟ್ರಾಫಿಕ್ ಜಾಮ್, ವಾಹನಗಳ ಪಾರ್ಕಿಂಗ್ ಸಮಸ್ಯೆ ಉಂಟಾಗುತ್ತಿದೆ. ಕೆಎಸ್‌ಆರ್‌ಟಿಸಿಯ ಎಕ್ಸ್‌ಪ್ರೆಸ್ ಬಸ್ಸುಗಳು ಸರ್ವಿಸ್ ರಸ್ತೆಗೆ ಇಳಿಯದೆ ಫ್ಲೈ ಓವರ್ ಮೇಲೆಯೇ ಸಾಗುವುದರಿಂದ ದೂರದ ಊರುಗಳಿಗೆ ತೆರಳುವವರಿಗೆ ಭಾರೀ ಸಮಸ್ಯೆಯಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗದ ಕಿರಿದಾದ ನಿಲ್ದಾಣ
ಕಿರಿದಾದ ತಂಗುದಾಣ ಸಾರ್ವಜನಿಕರ ಉಪಯೋಗಕ್ಕೆ ಅನುಕೂಲವಾಗಿಲ್ಲ. ವಿದ್ಯಾರ್ಥಿ ಗಳಿಗೆ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಪರಿಹಾರ ಸಿಕ್ಕಿಲ್ಲ. ನಿತ್ಯ ಸಾವಿರಾರು ಜನರು ಸೇರುವ ಸ್ಥಳದಲ್ಲಿ ವ್ಯವಸ್ಥಿತವಾದ ತಂಗುದಾಣ ನಿರ್ಮಾಣ ಮಾಡಬೇಕಿದೆ.
– ಮೋಹನಚಂದ್ರ ಅಧ್ಯಕ್ಷರು, ಉಪ್ಪುಂದ ಗ್ರಾ.ಪಂ. -ಕೃಷ್ಣ ಬಿಜೂರು