ಬೆಂಗಳೂರು: ‘ಜೆಡಿಎಸ್‌ನಲ್ಲಿ ಎಲ್ಲರೂ ಒಂದಾಗಿದ್ದು, ಯಾರೂ ಸಚಿವ ಸ್ಥಾನಕ್ಕಾಗಿ ಹಗ್ಗಜಗ್ಗಾಟ ಮಾಡಿಲ್ಲ. ಖಾತೆಗಾಗಿ ಪಟ್ಟು ಹಿಡಿದಿಲ್ಲ’ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿಕೆ ನೀಡಿದ್ದಾರೆ.
‘ಯಾರನ್ನು ಸಚಿವರನ್ನಾಗಿ ಮಾಡಬೇಕು ಎನ್ನುವುದು ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡ ಮತ್ತು ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೀರ್ಮಾನಕ್ಕೆ ಬಿಟ್ಟಿದ್ದೇವೆ’ ಎಂದರು.
’37 ಜನ ಶಾಸಕರಲ್ಲಿ ರಲ್ಲಿ 11 ಸಚಿವ ಸ್ಥಾನ ನಮಗೆ ದೊರಕಿದ್ದು,ಆಪೈಕಿ ಬಿಎಸ್‌ಪಿಗೂ ಕೂಡ 1 ಸ್ಥಾನ ಕೊಡಬೇಕಿದೆ ಎಂದರು. 10 ಜನರಲ್ಲಿ ಯಾರನ್ನು ಸಚಿವರನ್ನಾಗಿಸಬೇಕು ಎನ್ನುವುದು ದೇವೇಗೌಡರು ಮತ್ತು ಕುಮಾರಸ್ವಾಮಿ ತೀರ್ಮಾನಿಸುತ್ತಾರೆ. ವಿಧಾನ ಪರಿಷತ್ ಸದಸ್ಯರೂ ಆ ಪೈಕಿ ಸೇರಿರಬಹುದು’ ಎಂದರು.
ಲೋಕೋಪಯೋಗಿ ಖಾತೆ ಮಾಧ್ಯಮದವರು ಕೇಳಿದ್ದು !
ಲೋಕೋಪಯೋಗಿ ಖಾತೆಗಾಗಿ ಎಚ್.ಡಿ.ರೇವಣ್ಣ ಮತ್ತು ನಿಮ್ಮ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆಯಲ್ಲಾ ಎಂದು ಕೇಳಿದುದಕ್ಕೆ ಪ್ರತಿಕ್ರಿಯಿಸಿದ ಜಿಟಿಡಿ ‘ಮಾಧ್ಯಮದವರು ಲೋಕೋಪಯೋಗಿ ಖಾತೆ ನಿರ್ವಹಿಸುತ್ತೀರಾ ಕೇಳಿದರು, ನಾನು ಸಿದ್ಧನಿದ್ದೇನೆ ಅಂದಿದ್ದೇನೆ ಹೊರತು ಯಾವುದೇ ಪೈಪೋಟಿ ನಡೆದಿಲ್ಲ’ ಎಂದರು.