ಕಲಬುರಗಿ: ಸರ್ಕಾರಿ ಶಾಲಾ ಮಕ್ಕಳಿಗೆ ವಾರದಲ್ಲಿ ಆರು ದಿನಗಳ ಕಾಲ ಮೊಟ್ಟೆ, ಬಾಳೆಹಣ್ಣು ಹಾಗೂ ಸೇಂಗಾ ಚೆಕ್ಕಿ ವಿತರಿಸುವ ಜವಾಬ್ದಾರಿ ಮುಖ್ಯ ಶಿಕ್ಷಕರ ಮತ್ತು ಶಿಕ್ಷಕರನ್ನು ಬಿಡುಗಡೆಗೊಳಿಸಿ ಯಾವುದಾದರೂ ಸಂಘ- ಸಂಸ್ಥೆಗೆ ವಹಿಸಿಕೊಡುವಂತೆ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕೇಂದ್ರ ಹಾಗೂ ನಗರ ಪ್ರದೇಶ ಹೊರತುಪಡಿಸಿದರೆ ಗ್ರಾಮೀಣ ಭಾಗದಲ್ಲಿ ಪ್ರತಿನಿತ್ಯ ಅಗತ್ಯ ತಕ್ಕ ಮೊಟ್ಟೆ, ಬಾಳೆಹಣ್ಣು ಲಭ್ಯವಿರುವುದಿಲ್ಲ. ಹೀಗಾಗಿ ಖರೀದಿ ಮಾಡಿ ಮಕ್ಕಳಿಗೆ ವಿತರಿಸುವುದೇ ಒಂದು ಕಾಯಕವಾಗಿ ಪರಿಣಮಿಸುತ್ತಿದೆ. ಇದರಿಂದ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಕರಿಗೆ ಈ ಜವಾಬ್ದಾರಿ ವಹಿಸುವ ಮುನ್ನ ಯಾರದ್ದೇ ಅಭಿಪ್ರಾಯ ಕೇಳಿಲ್ಲ ಎಂದರು.
ಎಲ್ಲಕ್ಕಿಂತ ಮುಖ್ಯವಾಗಿ ಮೊಟ್ಟೆಗೆ 5 ರೂ ದರ ನಿಗದಿ ಮಾಡಲಾಗಿದೆ. ಅದೇ ತೆರನಾಗಿ 6 ರೂ. ಗೆ ಎರಡು ಬಾಳೆ ಹಣ್ಣು ಖರೀದಿಗೆ ಲಭ್ಯವಿರುವುದಿಲ್ಲ. ವತ್ಯಾಸದ ಮೊತ್ತವನ್ನು ಶಿಕ್ಷಕರೇ ಭರಿಸುವ ಸ್ಥಿತಿ ನಿರ್ಮಾಣವಾಗಿದೆ. ಮೊಟ್ಟೆ, ಬಾಳೆಹಣ್ಣು ದಾಸ್ತಾನು ಮಾಡಲು ಅಗತ್ಯ ವ್ಯವಸ್ಥೆ ಇರೋದಿಲ್ಲ. ಒಂದು ಮೊಟ್ಟೆ ಕೆಟ್ಟರೆ ಪಕ್ಕದ ಮೊಟ್ಟೆ ಕೆಡಲಾರಂಭಿಸುತ್ತದೆ. ಮೊಟ್ಟೆ ಇಂತಿಷ್ಟೆ ಭಾರ ಇರಬೇಕು ಎನ್ನಲಾಗುತ್ತದೆ. ಅದಲ್ಲದೇ ವಿತರಣಾ ಮಾಹಿತಿಯನ್ನು ಅದೇ ದಿನ ಆನ್ಲೈನ್ ದಾಖಲು ಮಾಡಬೇಕು. ಹೀಗೆ ಹತ್ತಾರು ಸಮಸ್ಯೆಗಳು ಶಿಕ್ಷಕರು ಎದುರಿಸುವಂತಾಗಿದೆ. ಆದ್ದರಿಂದ ಮೊಟೆ ಹಾಗೂ ಬಾಳೆಹಣ್ಣು ವಿತರಣೆಯ ಜವಾಬ್ದಾರಿ ಕಾರ್ಯವನ್ನು ಯಾವುದಾದರೂ ಸಂಘ ಸಂಸ್ಥೆ ಇಲ್ಲವೇ ಶಾಲಾ ಮಕ್ಕಳ ಪೌಷ್ಠಿತಕೆ ಹೆಚ್ಚಿಸುವ ನಿಟ್ಟಿನಲ್ಲಿ1500 ಕೋ.ರೂ ಅನುದಾನ ನೀಡಿರುವ ಅಜಿಂ ಪ್ರೇಮಜಿ ಅವರಿಂದಲೇ ವಿತರಣಾ ವ್ಯವಸ್ಥೆ ಮಾಡಿಕೊಳ್ಳುವಂತೆ ಹೇಳಿದರೂ ಅನುಕೂಲ ಆಗುತ್ತದೆ ಎಂದು ಈ ಸಂದರ್ಭದಲ್ಲಿ ನಮೋಶಿ ವಿವರಣೆ ನೀಡಿದರು.
ಸದನದಲ್ಲಿ ಪ್ರಸ್ತಾಪ
ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣಾ ಕಾರ್ಯದ ಜವಾಬ್ದಾರಿಯನ್ನು ಶಿಕ್ಷಕರಿಗೆ ವಹಿಸದೇ ಅವರನ್ನು ಬಿಡುಗಡೆಗೊಳಿಸಿ ಯಾವುದಾದರೂ ಸಂಘ ಸಂಸ್ಥೆಗೆ ವಹಿಸುವಂತೆ ಬೆಳಗಾವಿ ಅಧಿವೇಶನದಲ್ಲೇ ಪ್ರಸ್ತಾಪಿಸಿ ದೊಡ್ಡ ಮಟ್ಟದಲ್ಲಿ ಹೋರಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ನಮೋಶಿ ತಿಳಿಸಿದರು. ಸರ್ಕಾರಕ್ಕೆ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಅಭಿವೃದ್ದಿಗೆ ನಿಜವಾದ ಕಾಳಜಿ ಇದ್ದರೆ ಈ ಕೂಡಲೇ ಶಿಕ್ಷಕರಿಗೆ ಮೊಟ್ಟೆ – ಬಾಳೆಹಣ್ಣು ವಿತರಣಾ ಕಾರ್ಯದಿಂದ ವಿಮುಕ್ತಿಗೊಳಿಸಬೇಕೆಂದರು.