Advertisement
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ರಾತ್ರಿ ಪ್ರಚಾರದ ವೇಳೆ ಬಹಿರಂಗ ಸಭೆಯಲ್ಲಿ ಸಾರ್ವಜನಿಕವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು, ಜಮೀರ್ ಅಹ್ಮದ್ ಖಾನ್ “ಕಾಲಾ ಕುಮಾರಸ್ವಾಮಿ” (ಕರಿಯ ಕುಮಾರಸ್ವಾಮಿ) ಎಂದು ಉರ್ದು ಭಾಷೆಯಲ್ಲಿ ನಿಂದಿಸಿದ್ದಾರೆ. ಈ ಮೂಲಕ ಕಪ್ಪು ವರ್ಣದವರ ಜನಾಂಗೀಯ ನಿಂದನೆ ಮಾಡಿ ವರ್ಣಭೇದ ತಾರತಮ್ಯ ಎಸಗಿದ್ದಾರೆ. ಅಷ್ಟೆ ಅಲ್ಲದೇ ಒಂದು ಸಮುದಾಯವನ್ನು ಎತ್ತಿಕಟ್ಟಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಡಲು ಜನರನ್ನು ಪ್ರಚೋದಿಸಿರುವ ಸಚಿವ ಜಮೀರ್ ಅಹ್ಮದ್ ಬಾಯಿಂದ ಬಂದಿರುವ ಈ ಜನಾಂಗೀಯ ದ್ವೇಷದ ಮಾತುಗಳು ಅಕ್ಷಮ್ಯ ಅಪರಾಧ ಎಂದು ಜನತಾದಳ ಟ್ವೀಟ್ ಮಾಡಿ ಟೀಕಿಸಿದೆ.
ಚನ್ನಪಟ್ಟಣದಲ್ಲಿ ರವಿವಾರ ಮಾತನಾಡಿದ್ದ ಜಮೀರ್, “ಯೋಗೇಶ್ವರ್ ನಮ್ಮ ಪಕ್ಷದಿಂದ ರಾಜಕೀಯ ಪ್ರಾರಂಭ ಮಾಡಿದರು. ಕೆಲವು ವ್ಯತ್ಯಾಸಗಳಾಗಿ ಬಿಜೆಪಿಗೆ ಹೋದರು. ಜೆಡಿಎಸ್‌ಗೆ ಹೋಗಬೇಕು ಅಂದುಕೊಂಡಿದ್ದರು. ಆದರೆ ಕರಿಯ ಕುಮಾರಸ್ವಾಮಿ ಬಿಜೆಪಿಗಿಂತ ಡೇಂಜರ್ ಅಂತ ಜೆಡಿಎಸ್‌ಗೆ ಹೋಗಿಲ್ಲ. ಈ ಹಿಂದೆ ಹಿಜಾಬ್ ಬೇಡ ಅಂದಿದ್ದೀರಿ. ಈಗ ನಿನಗೆ ಮುಸಲ್ಮಾನರ ಮತ ಬೇಕಾ, ಕುಮಾರಸ್ವಾಮಿ ಬಿಜೆಪಿಗೆ ಹೋಗಿ ಮುಸಲ್ಮಾನರನ್ನು ಖರೀದಿ ಮಾಡುತ್ತಾನಂತೆ. ಏ ಕುಮಾರಸ್ವಾಮಿ ನಿನ್ ರೇಟು ಹೇಳು, ಮುಸಲ್ಮಾನರು ಒಂದೊಂದ್ ಪೈಸೆ ಹಾಕಿ ಇಡೀ ನಿನ್ನ ಕುಟುಂಬವನ್ನೇ ಖರೀದಿ ಮಾಡುತ್ತಾರೆ’ ಎಂದು ಉರ್ದುವಿನಲ್ಲಿ ಟೀಕಿಸಿದ್ದರು.
Related Articles
ಕಾಂಗ್ರೆಸ್ ಪಕ್ಷವನ್ನು ವಿರೋಧಿಸುವ ನಾಯಕರ ಮೇಲೆ ಜನಾಂಗೀಯ ದಾಳಿ, ನಿಂದನೆಗಳ ಮಾಡುವುದೇ ಕಾಂಗ್ರೆಸ್ಸಿಗರ ಚಾಳಿ. ಇದು ಕಾಂಗ್ರೆಸ್ ಪಕ್ಷದ ನಿಜಮುಖ. ದ್ವೇಷ ಹರಡುವುದು, ವಿಭಜಿಸುವುದು ಮತ್ತು ಅಗೌರವ ತೋರುವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ. ಇದಕ್ಕೆಲ್ಲ ಜೆಡಿಎಸ್ ಪಕ್ಷ ಹೆದರಿ ಕೂರುವುದಿಲ್ಲ ಎಂದು ಹೇಳಿದೆ.
Advertisement
ಚೌಕಟ್ಟು ಮೀರಬಾರದು: ಬಿಎಸ್‌ವೈ
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಕೇಂದ್ರ ಸಚಿವ ಕುಮಾರಸ್ವಾಮಿ ಕುರಿತು ಮಾಡಿರುವ ಅವಹೇಳನಕಾರಿ ಟೀಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಯಡಿಯೂರಪ್ಪ, ಯಾರೋ ಮಾಡಿದ ಕಾಮೆಂಟ್ ತಾನ್ಯಾಕೆ ಉತ್ತರಿಸಬೇಕು? ಆದರೆ ಯಾರೇ ಆಗಲಿ ಚೌಕಟ್ಟು ಮೀರಿ ಮಾತಾಡಬಾರದು ಎಂದು ಸಲಹೆ ನೀಡಿದರು. ಜಮೀರ್ ಹೇಳಿಕೆಗೆ ಕೇಂದ್ರ ಸಚಿವ ಕಿರಣ್ ರಿಜಿಜು ಆಕ್ಷೇಪ:
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಚಿವ ಜಮೀರ್ ಹೇಳಿಕೆಯನ್ನು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಕಿರಣ್ ರಿಜಿಜು ತೀವ್ರವಾಗಿ ಖಂಡಿಸಿದ್ದಾರೆ. ʼಕಾಲಾ ಕುಮಾರಸ್ವಾಮಿʼ ಎಂದಿರುವುದು ಜನಾಂಗೀಯ ನಿಂದನೆ. ಇದು ರಾಹುಲ್ ಗಾಂಧಿಯವರ ಸಲಹೆಗಾರರೊಬ್ಬರು ದಕ್ಷಿಣ ಭಾರತದವರು ಆಫ್ರಿಕನ್ನರ ರೀತಿ, ಈಶಾನ್ಯ ಭಾರತೀಯರು ಚೈನೀಸರ ರೀತಿ, ಉತ್ತರ ಭಾರತದವರು ಅರಬ್‌ರಂತೆ ಎಂದಿದ್ದರು. ಅದರಂತೆ ಇದೂ ಜನಾಂಗೀಯ ನಿಂದನೆ ಎಂದರು. “ದೇವೇಗೌಡರು ಚಾಮರಾಜ ಪೇಟೆಯಲ್ಲಿ ಜಮೀರ್ ಅವರನ್ನು ಗೆಲ್ಲಿಸಿ ರಾಜಕೀಯ ಜೀವನ ನೀಡಿದ್ದರು. ಈಗ ಅದೇ ಜಮೀರ್ ಗೌಡರ ಕುಟುಂಬ ಖರೀದಿಸುತ್ತೇನೆ ಎಂದಿದ್ದಾರೆ. ಇದು ಒಕ್ಕಲಿಗರನ್ನು ಖರೀದಿ ಸುತ್ತೇವೆ ಎಂದು ಅರ್ಥವೇ ಅಥವಾ ಹಿಂದೂ ಗಳನ್ನು ಖರೀದಿಸುತ್ತೇವೆ ಎಂದು ಅರ್ಥವೇ?” -ಆರ್. ಅಶೋಕ್, ವಿಧಾನಸಭೆ ವಿಪಕ್ಷ ನಾಯಕ