Advertisement

ಯಾವುದೇ ಕಾರಣಕ್ಕೂ ರಾಜೀನಾಮೆ‌‌ ನೀಡುವ ಪ್ರಶ್ನೆಯೇ ಇಲ್ಲ: ಕೆ.ಎಸ್.ಈಶ್ವರಪ್ಪ

02:34 PM Apr 13, 2022 | Team Udayavani |

ಶಿವಮೊಗ್ಗ : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಜಕೀಯ ಕೋಲಾಹಲ ನಡೆಯುತ್ತಿರುವ ವೇಳೆ , ‘ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ನೀಡುವುದಿಲ್ಲ’ ಎಂದು ಸಚಿವ ಕೆ. ಎಸ್. ಈಶ್ವರಪ್ಪ ಬುಧವಾರ ಒತ್ತಿ ಹೇಳಿದ್ದಾರೆ.

Advertisement

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಈಶ್ವರಪ್ಪ ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದರಲ್ಲಿ ಷಡ್ಯಂತ್ರವಿದ್ದು ಈ ಬಗ್ಗೆ ತನಿಖೆ ನಡೆಯಬೇಕು. ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಸಮಗ್ರ ತನಿಖೆ ನಡೆಸಲು ಮನವಿ ಮಾಡಿದ್ದೇನೆ. ನಾಳೆ ಅಥವಾ ನಾಡಿದ್ದು ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮಾತನಾಡುತ್ತೇನೆ ಎಂದು ತಿಳಿಸಿದರು.

ಕಾನೂನು ಬಾಹಿರವಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಡೆದಂತಹ ವಿಚಾರದಲ್ಲಿ ಕಾಂಗ್ರೆಸ್ ನವರು ರಾಜೀನಾಮೆ ಕೇಳುತ್ತಿದ್ದಾರೆ. ಡೆತ್ ನೋಟೇ ಬರೆದಿಲ್ಲ. ಸುಳ್ಳು ಹಬ್ಬಿಸಿ ರಾಜೀನಾಮೆ ಕೇಳುತ್ತಿದ್ದಾರೆ.ನಮ್ಮ ಇಲಾಖೆಯಲ್ಲಿ ಯಾವುದೇ ಕಾಮಗಾರಿ ಮಾಡಬೇಕಾದರೆ, ಮೊದಲು ಆಡಳಿತಾತ್ಮಕ ಅನುಮೋದನೆ, ಮಂಜೂರಾತಿ
ವರ್ಕ್ ಆರ್ಡರ್ ಇಶ್ಯೂ ಆಗಬೇಕು ಎಂದರು.80  ಸಾರಿ ಅವರ ಮನೆಗೆ ಹೋಗಿದ್ದೆ ಎಂದು ಹೇಳಿದ್ದಾರೆ. ಒಂದೇ ಒಂದು ಸಾರಿ ಅವರ ಮುಖ ನೋಡಲಿಲ್ಲ ಎಂದರು.

ಸಂತೋಷ್ ದೆಹಲಿಗೆ ಹೋಗಲು ಯಾರು ಟಿಕೆಟ್ ಮಾಡಿ ಕೊಟ್ಟರು ? ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂತೋಷ್ ನೀಡಿದ ದೂರಿನ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ ಎಂದರು.

ನಾನು ಸಂತೋಷ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದೆ, ಅವರಿಗೆ ಕೋರ್ಟ್ ಕೇಸ್ ಪರಿಗಣಿಸಿ ಸಂತೋಷ್ ಪಾಟೀಲ್ ಮತ್ತು ಕನ್ನಡದ ಮಾಧ್ಯಮವೊಂದಕ್ಕೆ ನೋಟೀಸ್ ನೀಡಿದೆ. ದೆಹಲಿಗೆ ಹೋಗಿ ಅಮಿತ್ ಶಾ ಅವರ ಕಚೇರಿಗೆ ದೂರು ನೀಡುವಲ್ಲಿ ಧೈರ್ಯ ತೋರಿದ್ದ ಸಂತೋಷ್ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ನನಗೆ ಅನಿಸುತ್ತಿದೆ , ಅದಿನ್ನೂ ಪೂರ್ಣವಾಗಿ ಸ್ಪಷ್ಟವಾಗಿಲ್ಲ ಎಂದರು.

Advertisement

ನೀತಿ, ನಿಯಮ ಕಾನೂನು ಮೀರಿ ಹಣ ಕೊಡಲು ಬರುವುದಿಲ್ಲ ಎಂದು ಈಗಾಗಲೇ ನಮ್ಮ ಇಲಾಖೆ ಸ್ಪಷ್ಟನೆ ನೀಡಿದೆ, ಕೋರ್ಟ್ ನಲ್ಲಿ ಪ್ರಕರಣ ಮುಂದುವರಿಯುತ್ತದೆ ಎಂದರು.

ಸಂತೋಷ್ ಡೆತ್ ನೋಟ್ ಬರೆದಿಲ್ಲ, ವಾಟ್ಸ್ಆಪ್ ನಲ್ಲಿ ಟೈಪ್ ಮಾಡಿದ್ದಾರೆ. ಅಲ್ಲಿ ಕೈ ಬರಹವಿಲ್ಲ, ಸಹಿಯೂ ಇಲ್ಲ ಎಂದರು.

ಕಾನೂನು ಬೇಕು ನಿಜ. ಅದಕ್ಕಿಂತಲೂ ಪ್ರಾಮಾಣಿಕತೆ ಮುಖ್ಯ. ಗುತ್ತಿಗೆದಾರರ ಸಂಘದವರು ಯಾರಿಗೆ 40 ಪರ್ಸೆಂಟ್ ಕಮಿಷನ್ ನೀಡಿದ್ದಾರೆ ಎಂದು‌ ನೇರವಾಗಿ ಹೇಳಲಿ.ನಮ್ಮದು ಒಂದು ತಪ್ಪಿದ್ದರೆ ಹೇಳಿ ನಾನು ತಿದ್ದಿಕೊಳ್ಳುತ್ತೇನೆ ಎಂದರು.

ಕಾಂಗ್ರೆಸ್ಸಿಗರು ಇಂದ್ರಲೋಕ, ಚಂದ್ರಲೋಕಕ್ಕೆ‌ ಹೋಗಿ ಪ್ರತಿಭಟನೆ ಮಾಡಲಿ. ನೂರಕ್ಕೆ ನೂರು ನಾನು ರಾಜೀನಾಮೆ ನೀಡುವುದಿಲ್ಲ ಎಂದರು.

ಕುಮಾರ ಸ್ವಾಮಿ ಅವರು ಷಡ್ಯಂತ್ರ ನಡೆದಿದೆ ಎಂದು ಹೇಳಿದ್ದಾರೆ ಸಂತೋಷ. ಕಾಂಗ್ರೆಸ್ ನವರ ತರ ಅವರು ನನ್ನ ರಾಜೀನಾಮೆ ಕೇಳಿಲ್ಲ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಈ ಜನ್ಮದಲ್ಲಿ ಸಿಎಂ ಸ್ಥಾನದಲ್ಲಿ ಕೂರುವುದಿಲ್ಲ. ಮತ್ತೆ ರಾಜ್ಯದಲ್ಲಿ‌ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ ಎಂದರು.

ಮುಸಲ್ಮಾನರನ್ನು ಕಾಂಗ್ರೆಸ್ಸಿಗರು ಯಾವಾಗ ನಡುನೀರಿನಲ್ಲಿ ಕೈಬಿಡುತ್ತಾರೋ ಗೊತ್ತಿಲ್ಲ.ಶಿವಮೊಗ್ಗದಲ್ಲಿ ಮುಸಲ್ಮಾನರಿಗೆ ನಾವು ಏನು ಅನ್ಯಾಯ ಮಾಡಿದ್ದೇವೆ. ಗೂಂಡಾಗಿರಿ ಮಾಡುವ ಮುಸಲ್ಮಾನ‌ ಗುಂಡಾಗಳು ಹರ್ಷನನ್ನು ಕೊಲೆ ಮಾಡಿದ್ದರು ಎಂದಿದ್ದೆ. ದೇಶಭಕ್ತ ಮುಸಲ್ಮಾನರು ಹರ್ಷನನ್ನು ಕೊಲೆ‌ ಮಾಡಿದರು ಎಂದು ಹೇಳಬೇಕಿತ್ತೆ? ಎಲ್ಲ ಮುಸಲ್ಮಾನರನ್ನು ಗೂಂಡಾ ಎಂದು ಹೇಳುವುದಿಲ್ಲ ಎಂದರು.

ಲಕ್ಷ್ಮಿ ಹೆಬ್ಬಾಳ್ಕರ್ ಗೆ ತಲೆ ಕೆಟ್ಟರೆ ನಾನೇನು ಮಾಡಲಿ. ಹೆಣ್ಣು ಮಕ್ಕಳ ಬಗ್ಗೆ ನನಗೆ ಭಾರಿ ಗೌರವವಿದೆ.ನನ್ನ ಮೇಲೆ‌ ಸುಖಾಸುಮ್ಮನೆ ಆರೋಪ ಮಾಡಿದರೆ ಹೇಗೆ.ಸುಮ್ಮನೆ ಏನೇನೋ ಹೇಳುತಿದ್ದಾರೆ. ಕರ್ನಾಟಕದಲ್ಲಿ ಮುಸಲ್ಮಾನರನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ಎಂದರು.

ಹಿಜಾಬ್ ವಿಷಯದಲ್ಲಿ ಕೋರ್ಟ್‌ ತೀರ್ಪು ಖಂಡಿಸಿ ಮುಸಲ್ಮಾನರು ರಾಜ್ಯ ಬಂದ್ ಮಾಡಿದಾಗ ಕಾಂಗ್ರೆಸ್ಸಿಗರು ಮುಸಲ್ಮಾನರು ಶಾಂತಿಯುತವಾಗಿ ಬಂದ್ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಕೋರ್ಟ್ ಬಗ್ಗೆಯೂ ಕಾಂಗ್ರೆಸ್ಸಿಗರಿಗೆ ಗೌರವವಿಲ್ಲ ಎಂದರು.

ಸಂತೋಷ್ ಸಾವಿನ ಪ್ರಕರಣ ಬಿಜೆಪಿ ಹೈಕಮಾಂಡ್ ವರೆಗೂ ಹೋಗಿಲ್ಲ.ಹೈಕಮಾಂಡ್ ನಿಂದ ಯಾವುದೇ ಕರೆ ನನಗೆ ಬಂದಿಲ್ಲ ಎಂದರು.

ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ರಾಜ್ಯಾದ್ಯಂತ ಭಾರೀ ಪ್ರತಿಭಟನೆ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next