Advertisement

ಶುಲ್ಕ ಪಾವತಿಸದಿದ್ದರೆ ಆನ್‌ಲೈನ್‌ ತರಗತಿ ಇಲ್ಲ

12:53 AM Nov 25, 2020 | mahesh |

ಬೆಂಗಳೂರು: ಶುಲ್ಕ ಪಾವತಿಸಿಲ್ಲ ಎಂಬುದಕ್ಕಾಗಿ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವಂತಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಸೂಚಿಸಿದ ಬೆನ್ನಲ್ಲೇ ಶುಲ್ಕ ಪಾವತಿಸದಿದ್ದರೆ “ಆನ್‌ಲೈನ್‌ ಕ್ಲಾಸ್‌ ಸ್ಥಗಿತಗೊಳಿಸುತ್ತೇವೆ’ ಎಂಬುದಾಗಿ ಖಾಸಗಿ ಶಾಲಾಡಳಿತ ಮಂಡಳಿ ಎಚ್ಚರಿಕೆ ನೀಡಿದೆ.

Advertisement

ವಿದ್ಯಾರ್ಥಿಗಳು ಶುಲ್ಕ ಪಾವತಿಸಿಲ್ಲ ಎಂಬ ಕಾರಣ ಮುಂದಿಟ್ಟು ಮಕ್ಕಳನ್ನು ಅನುತ್ತೀರ್ಣಗೊಳಿಸುವಂತಿಲ್ಲ ಎಂದು ಸೋಮವಾರವಷ್ಟೇ ಸಚಿವ ಸುರೇಶ್‌ ಕುಮಾರ್‌ ಸೂಚನೆ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್‌)ದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌, ಈಗಾಗಲೇ ಬಹುತೇಕ ಪಾಲಕರು ಶುಲ್ಕ ಪಾವತಿಸಿಲ್ಲ. ಇದರಿಂದ ಶಾಲೆ ನಡೆಸುವುದು ಕಷ್ಟವಾಗಿದೆ. ಶಿಕ್ಷಣ ಇಲಾಖೆಯು ಪ್ರತಿಷ್ಠಿತ ಶಾಲೆಗಳನ್ನು ಮುಂದಿರಿಸಿಕೊಂಡು ಎಲ್ಲ ಶಾಲೆಗಳಿಗೂ ಅನ್ವಯಿಸುವಂತೆ ಸೂಚನೆ ನೀಡುವುದು ಸರಿಯಲ್ಲ. ನಮ್ಮ ಶಿಕ್ಷಕರಿಗೆ ವೇತನ ನೀಡಬೇಕು. ಶಾಲೆಯ ಅಗತ್ಯಗಳನ್ನು ಪೂರೈಸಬೇಕು. ಇದೆಲ್ಲದಕ್ಕೂ ನಾವು ವಿದ್ಯಾರ್ಥಿಗಳು ಪಾವತಿಸುವ ಶುಲ್ಕದ ಮೇಲೆ ಅವಲಂಬಿತರಾಗಿದ್ದೇವೆ. ಶುಲ್ಕ ಪಾವತಿ ಸಂಬಂಧ ಪಾಲಕರ ಮೇಲೆ ಒತ್ತಡ ಹಾಕುವಂತಿಲ್ಲ ಎಂದರೆ ತುಂಬಾ ಕಷ್ಟವಾಗಲಿದೆ. ಯಾರು ಶುಲ್ಕ ಪಾವತಿಸುವುದಿಲ್ಲವೋ ಅಂತಹ ವಿದ್ಯಾರ್ಥಿಗಳನ್ನು ಆನ್‌ಲೈನ್‌ ತರಗತಿಗಳಿಂದ ಹೊರಗಿಡುತ್ತೇವೆ ಎಂದು ಹೇಳಿದ್ದಾರೆ.

ಆರ್‌ಟಿಇ ಶುಲ್ಕ ಮರುಪಾವತಿಸಲಿ
ಒಂದು ವೇಳೆ ಪಾಲಕರಿಂದ ಶುಲ್ಕ ಪಡೆಯಬಾರದು ಎಂದಾದರೆ, ಸರಕಾರವು ಆರ್‌ಟಿಇ ಶುಲ್ಕ ಮರುಪಾವತಿ ಮಾಡಲಿ. ಶೇ.75ರಷ್ಟು ಶುಲ್ಕವನ್ನು ಪಾಲಕರ ಪರವಾಗಿ ಸರಕಾರವೇ ಶಾಲೆಗಳಿಗೆ ನೀಡಲಿ. ಅನಂತರ ನಾವು ಉಚಿತ ಶಿಕ್ಷಣ ನೀಡುತ್ತೇವೆ. ತೆರಿಗೆ, ವಿದ್ಯುತ್‌ ಬಿಲ್‌, ನೀರಿನ ಬಿಲ್‌ಗ‌ಳಿಂದ ರಿಯಾಯಿತಿ ನೀಡಲಿ. ಶಿಕ್ಷಕರು ಮತ್ತು ಸಿಬಂದಿಗೆ ಕನಿಷ್ಠ ವೇತನ ನೀಡಲಿ ಎಂದೂ ಶಶಿಕುಮಾರ್‌ ಆಗ್ರಹಿಸಿದ್ದಾರೆ. ಶಾಲೆ ತೆರೆಯುವಾಗ ಸಂಘದ ಬೇಡಿಕೆಗಳನ್ನು ಸರಕಾರ ಪೂರೈಸಬೇಕು. ಇಲ್ಲವಾದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next